ಬೆಂಗಳೂರು ಫೆಬ್ರವರಿ 25,2022(www.justkannada.in): ಗುಣಮಟ್ಟ, ತಾಂತ್ರಿಕ, ಉದ್ಯೋಗ ಆಧಾರಿತ ಶಿಕ್ಷಣವನ್ನು ಒದಗಿಸುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಒಂದಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಇಂದು ಸರ್ಜಾಪುರದಲ್ಲಿರುವ ಗ್ರೀನ್ ವುಡ್ ಹೈ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕಲೆ , ಸಂಗೀತ ಭವನ ಮತ್ತು ಕ್ರೀಡಾ ಸಂಕೀರ್ಣವನ್ನು ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರೊಂದಿಗೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಅನಾವರಣಗೊಳಿಸಿ, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಮಕ್ಕಳು ಮತ್ತು ಯುವಜನರ ಭವಿಷ್ಯಕ್ಕೆ ಸರಿಯಾದ ಮಾರ್ಗವನ್ನು ತೋರಿಸಲು ಹಾಗೂ ದೇಶದಲ್ಲಿ ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸಲು ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ, ತರಬೇತಿ, ಅಂತರ್ಗತ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವುದು ಇಂದಿಗೆ ಅವಶ್ಯಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಐಐಟಿ ಐಐಎಂ ನಂತಹ ದೇಶದ ದೊಡ್ಡ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳೊಂದಿಗೆ ಸಂಬಂಧ ಹೊಂದಿರುವ ಯುವಕರ ಸಂಶೋಧನೆಯಿಂದಾಗಿ, ಇಂದು ದೇಶವು ವೇಗವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿದೆ. ಇಂದು ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿ ತಮ್ಮ ಪ್ರತಿಭೆಯಿಂದ ವಿಶ್ವದ ಜನರನ್ನು ಅಚ್ಚರಿಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳೇ, ಶಿಕ್ಷಣ, ಕ್ರೀಡೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಇದರಿಂದ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ, ನೀವು ದೇಶದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದೀರಿ ಎಂದು ಕರೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಬೌದ್ಧಿಕ, ನೈತಿಕ, ಮಾನಸಿಕ, ದೈಹಿಕ ಸಾಮಾಜಿಕ ಮತ್ತು ಭಾವನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ದೃಷ್ಟಿ ಮತ್ತು ಗುರಿ ಹಾಗೂ ಪ್ರಜಾಪ್ರಭುತ್ವ ಸಮಾಜದಲ್ಲಿ ಸಕ್ರಿಯ ಸ್ವತಂತ್ರ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿಯುತ ನಾಗರಿಕರಾಗಲು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವತ್ತಾ ಗ್ರೀನ್ ವುಡ್ ಹೈ ಇಂಟರ್ ನ್ಯಾಷನಲ್ ಶಾಲೆ ಮುಂದಾಗಿರುವುದು ಪ್ರಶಂಸನೀಯ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಲೆ, ನಾಟಕ, ಸಂಗೀತ ಶಿಕ್ಷಣಕ್ಕೂ ಗಮನ ನೀಡಲಾಗಿದ್ದು, ವಿದ್ಯಾರ್ಥಿಗಳನ್ನು ಈ ವಿಭಾಗಗಳಲ್ಲಿ ಪರಿಣತರನ್ನಾಗಿಸಲು ಅವರ ಊಹೆಗಳೆಲ್ಲ ನನಸಾಗುವಂತೆ ಆಧುನಿಕ ಸೌಲಭ್ಯಗಳಿರುವ ಅದ್ಭುತ ಕಟ್ಟಡವನ್ನು ಈ ಶಾಲೆಯಲ್ಲಿ ಅನಾವರಣಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಸನ್ಮಾನ್ಯ ಸಚಿವರಾದ ಮುನಿರತ್ನ, ಜಿಲ್ಲಾಧಿಕಾರಿ ಜೆ ಮಂಜುನಾಥ್, ಗ್ರೀನ್ ವುಡ್ ಇಂಟರ್ ನ್ಯಾಷನಲ್ ಅಧ್ಯಕ್ಷ ವಿಜಯ್ ಅಗರ್ವಾಲ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
key words: Karnataka providing -quality, – education-Governor -Thawar Chand Gehlot