ಹಳೆ ನೋಟು ಬದಲಾವಣೆಗೆ ಈಗ ನೀವು ಆರ್.ಬಿ.ಐ ಗೇ ಹೋಗಬೇಕಿಲ್ಲ,..!

 

ಬೆಂಗಳೂರು, ನವೆಂಬರ್ 12, 2021 (www.justkannada.in): ಭಾರತೀಯ ರಿಜರ್ವ್ ಬ್ಯಾಂಕ್ (ಆರ್‌ಬಿಐ) ಆರು ತಿಂಗಳ ಹಿಂದೆಯೇ ಹಾಳಾಗಿರುವ, ಹಾನಿಯಾಗಿರುವ ನೋಟುಗಳನ್ನು ಬದಲಾಯಿಸಿಕೊಡಲು ಎಲ್ಲಾ ಬ್ಯಾಂಕ್‌ಗಳ ಎಲ್ಲಾ ಶಾಖೆಗಳಿಗೂ ಅಧಿಕಾರ ನೀಡಿದೆ. ನಿಮ್ಮ ಬಳಿ ಹಾಳಾಗಿರುವ ನೋಟುಗಳಿದ್ದರೆ, ನೀವು ಖಾತೆ ಹೊಂದಿರುವ ಬ್ಯಾಂಕ್‌ಗೆ ಹೋಗಿ ಆ ನೋಟುಗಳನ್ನು ನೀಡಿ ಉತ್ತಮ ನೋಟುಗಳನ್ನು ಪಡೆದುಕೊಳ್ಳಬಹುದು.

ಆದರೆ ಬಹುತೇಕ ಎಲ್ಲಾ ಬ್ಯಾಂಕ್‌ಗಳೂ ಸಹ ಆರ್‌ಬಿಐನ ಈ ಆದೇಶವನ್ನು ಪಾಲಿಸುತ್ತಿಲ್ಲ. ಈ ಕಾರಣದಿಂದಾಗಿ ಬೆಂಗಳೂರಿನ ಆರ್‌ಬಿಐ ಮುಖ್ಯ ಕಚೇರಿಯ ಮುಂದೆ ಪ್ರತಿ ದಿನ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರ ದೊಡ್ಡ ಸಾಲೇ ಕಾಯುತ್ತಿರುತ್ತದೆ.

ಪ್ರತಿ ದಿನ ಜನರು ತಮ್ಮ ಹಳೆಯ ಹಾಗೂ ಗಲೀಜಾಗಿರುವ ನೋಟುಗಳನ್ನು ಬದಲಾಯಿಸಿಕೊಳ್ಳಲು ಬೆಂಗಳೂರಿನ ಆರ್‌ಬಿಐ ಮುಖ್ಯ ಶಾಖೆಗೆ ತೆರಳುತ್ತಾರೆ. ಈ ಸಂಬಂಧ ವಿತರಣಾ ಇಲಾಖೆಯು ಕ್ಲೆಮ್ಸ್ ವಿಭಾಗದೊಂದಿಗೆ ಆರ್‌ಬಿಐನ ಜನಸ್ನೇಹಿ ಮಾರ್ಗಸೂಚಿಗಳನ್ನು ಜನರಿಗೆ ತಿಳಿಸುವ ಉದ್ದೇಶದೊಂದಿಗೆ ಹಾಗೂ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು, ಸಣ್ಣ ಹಣಕಾಸಿನ ಬ್ಯಾಂಕುಗಳು ಹಾಗೂ ಪಾವತಿ ಬ್ಯಾಂಕ್‌ಗಳೂ ಒಳಗೊಂಡಂತೆ ಖಾಸಗಿ ಬ್ಯಾಂಕುಗಳಿಗೂ ಈ ಸೇವೆ ಒದಗಿಸಬಹುದು ಎಂದು ದೃಢಪಡಿಸುವ ಉದ್ದೇಶದೊಂದಿಗೆ ಸಹಾಯವಾಣಿ ಆರಂಭಿಸಿದೆ.

ಈ ವರ್ಷ ಏಪ್ರಿಲ್ ತಿಂಗಳಲ್ಲಿ ಆರ್‌ಬಿಐ ಸುತ್ತೋಲೆಯನ್ನು ಹೊರಡಿಸಿತ್ತು. ಆ ಸುತ್ತೋಲೆಯ ಪ್ರಕಾರ ದೇಶದಾದ್ಯಂತ ಎಲ್ಲಾ ಬ್ಯಾಂಕುಗಳ ಎಲ್ಲಾ ಶಾಖೆಗಳಲ್ಲಿಯೂ ಸಹ ಈ ಕೆಳಕಂಡ ಗ್ರಾಹಕರ ಸೇವೆಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಿದೆ:

ಎಲ್ಲಾ ಡಿನಾಮಿನೇಷನ್‌ಗಳ ತಾಜಾ, ಉತ್ತಮ ಗುಣಮಟ್ಟದ ನೋಟುಗಳು ಹಾಗೂ ಕಾಯಿನ್‌ಗಳನ್ನು ವಿತರಿಸುವುದು, ಗಲೀಜಾಗಿರುವ, ಹಾನಿಯಾಗಿರುವ ನೋಟುಗಳನ್ನು ಬದಲಾಯಿಸಿಕೊಡುವುದು ಈ ಸೇವೆಯಲ್ಲ್ಲಿ ಸೇರಿದೆ. ಇದಕ್ಕಾಗಿ ಸಾರ್ವಜನಿಕರು ಆರ್‌ಬಿಐನ ಪ್ರಾದೇಶಿಕ ಕಚೇರಿಗಳಿಗೆ ಅಲೆಯಬೇಕಾಗಿಲ್ಲ.

ಜೊತೆಗೆ ಈ ಸುತ್ತೋಲೆಯಲ್ಲಿ ಎಲ್ಲಾ ಬ್ಯಾಂಕ್ ಶಾಖೆಗಳೂ ಸಹ ಎಲ್ಲಾ ಕೆಲಸದ ದಿನಗಳಂದೂ ಸಹ ಸಾರ್ವಜನಿಕರಿಗೆ ಯಾವುದೇ ತಾರತಮ್ಯತೆ ಇಲ್ಲದೆ ಈ ಸೇವೆಯನ್ನು ಒದಗಿಸುವುದಾಗಿಯೂ ತಿಳಿಸಿದೆ. ಆದರೂ ಸಹ ಜನರು ಬ್ಯಾಂಕುಗಳಿಗೆ ಈ ಸೇವೆಯನ್ನು ಪಡೆಯಲು ಹೋದರೆ, ಬ್ಯಾಂಕ್ ಸಿಬ್ಬಂದಿಗಳು ನೋಟುಗಳನ್ನು ಬದಲಾಯಿಸಿಕೊಡಲು ನಿರಾಕರಿಸುತ್ತಿದ್ದಾರೆ. ಆರ್‌ಬಿಐಗೇ ಹೋಗುವಂತೆ ಸೂಚಿಸುತ್ತಿದ್ದಾರೆ.

ಬೆಂಗಳೂರು ನಗರದ ಓರ್ವ ಬ್ಯಾಂಕ್ ಗ್ರಾಹಕ ಪ್ರಸಾದ್ ಅವರು ತಮ್ಮ ಕೆಲವು ಸ್ನೇಹಿತರೊಂದಿಗೆ ತಮ್ಮ ಬಳಿಯಿಂದ ಕೆಲವು ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಖಾಸಗಿ ಬ್ಯಾಂಕ್ ಒಂದಕ್ಕೆ ತೆರಳಿದರು. ಆದರೆ ಆ ಬ್ಯಾಂಕ್‌ನ ಸಿಬ್ಬಂದಿಗಳು ನಿರಾಕರಿಸಿ, ಆರ್‌ಬಿಐಗೆ ತೆರಳುವಂತೆ ಸೂಚಿಸಿದ್ದಾರೆ. ಅವರು ಆರ್‌ಬಿಐನ ವಿತರಣಾ ಇಲಾಖೆಯ ಕ್ಲೆಮ್ಸ್ ವಿಭಾಗಕ್ಕೆ ತೆರಳಿದಾಗ ಯಾವುದೇ ಬ್ಯಾಂಕ್ ಶಾಖೆಯಲ್ಲಾದರೂ ಹಾಳಾಗಿರುವ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಅದಕ್ಕಾಗಿ ನೀವು ಬ್ಯಾಂಕ್‌ನ ಖಾತೆ ಹೊಂದಿರಬೇಕಷ್ಟೆ, ಯಾವುದೇ ಶಾಖೆಯಲ್ಲಾದರೂ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

“ನಂತರ ನಾವು ನಮ್ಮ ಬ್ಯಾಂಕ್‌ಗೆ ಹಿಂದಿರುಗಿ ಆ ಬ್ಯಾಂಕ್‌ನ ಸಿಬ್ಬಂದಿಯೊಂದಿಗೆ ವಾದ ಮಾಡಿದೆವು. ಆಗ ಅವರು ಆರ್‌ಬಿಐನ ಸಹಾಯವಾಣಿ ಸಂಖ್ಯೆ ೦೮೦-೨೨೧೮೦೧೦೪ – ಇಷ್ಯೂ ಡಿಪಾರ್ಟ್ಮೆಂಟ್ ಹಾಗೂ ೦೮೦-೨೨೧೮೦೫೪೩/೫೪೯ ಕ್ಲೆಮ್ಸ್ ಸೆಕ್ಷನ್ ಈ ಸಂಖ್ಯೆಗೆ ಕರೆ ಮಾಡಿ ಸೇವೆ ನೀಡಬೇಕೆಂದು ದೃಢಪಡಿಸಿದ ನಂತರ ಒಪ್ಪಿಕೊಂಡರು,” ಎಂದು ಪ್ರಸಾದ್ ವಿವರಿಸಿದರು.

ಸುದ್ದಿ ಮೂಲ: ಬೆಂಗಳೂರು ಮಿರರ್

key words : Karnataka-RBI-old-notes-exchange-bank-help-line