ಮೈಸೂರು, ಆಗಸ್ಟ್ 12, 2020 (www.justkannada.in): ರಾಜ್ಯದಲ್ಲಿ ಗುಪ್ತಚರ ಇಲಾಖೆ ತುಂಬಾ ವೀಕ್ ಆಗಿದೆ. ಮುಂದೆ ಏನಾಗುತ್ತೆ ಅಂತ ಗುಪ್ತಚರ ಇಲಾಖೆಗೆ ಗೊತ್ತಿರಬೇಕು. ಕರ್ತವ್ಯದಲ್ಲಿ ನಿರ್ಲಕ್ಷ ಮಾಡುವುದರಿಂದ ಅನೇಕ ಪ್ರಾಣ ಹಾನಿ ಆಗುತ್ತೆ ಎಂದು ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಆರೋಪಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ಗಲಭೆಗೆ ಸಂಬಂಧ ಪ್ರತಿಕ್ರಿಯೆ ನೀಡಿದರು. ಇಂಟೆಲಿಜೆನ್ಸಿ ಬಹಳ ಜವಾಬ್ದಾರಿಯುತವಾದ ಇಲಾಖೆ. ಆದರೆ ಗುಪ್ತಚರ ಇಲಾಖೆ ವೈಫಲ್ಯದಿಂದ ಶಾಂತಿ ಕದಡಿದೆ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಗುಪ್ತಚರ ಆಕ್ಟೀವ್ ಆಗಿರಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೊದಲು ನಾವು ಶಾಂತಿ ಕಾಪಾಡಿಕೊಳ್ಳೋಣ. ಗಲಭೆ ಸಂಬಂಧ ಎಲ್ಲಿ ವೈಫಲ್ಯಗಳು ಆಗಿವೆ ಅನ್ನೋದನ್ನ ತನಿಖೆ ಮಾಡಲು ಸರ್ಕಾರವನ್ನ ಒತ್ತಾಯಿಸುತ್ತೇನೆ. ರಾಮ ಮಂದಿರ ಭೂಮಿ ಪೂಜೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೋಮು ಗಲಭೆ ಪ್ರಚೋದಿತ ಪೋಸ್ಟ್‌ಗಳನ್ನ ಹಾಕಲಾಗ್ತಿದೆ. ಇತ್ತೀಚೆಗೆ ಇದರಿಂದ ಕೆಟ್ಟ ಸಂಸ್ಕೃತಿ ಬೆಳೆಯುತ್ತಿದೆ. ಆಳುವ ಸರ್ಕಾರಗಳು ಉದ್ಯೋಗ ಸೃಷ್ಠಿ ಮಾಡಬೇಕು. ದುಡಿಯುವ ಕೈಗಳಿಗೆ ಕೆಲಸ ನೀಡಿದಾಗ ಇಂತಹ ಘಟನೆಗಳನ್ನ ತಡೆಯಬಹುದು ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರ ಈಗಾಗಲೇ ಅನೇಕ ಆಪ್‌ಗಳನ್ನ ನಿಷೇಧ ಮಾಡಿದೆ. ಇನ್ನಷ್ಟು ಆಪ್ ನಿಷೇಧ ಮಾಡಬೇಕು. ಫೇಸ್‌ಬುಕ್ ನಿಷೇಧಕ್ಕೆ ಶಾಸಕ ತನ್ವೀರ್ ಸೇಠ್ ಪರೋಕ್ಷ ಒತ್ತಾಯ. ಇತ್ತೀಚೆಗೆ ಆನ್‌ಲೈನ್ ಕ್ಲಾಸ್ ಬಂದು ಎಲ್ಲರ ಕೈಲಿ ಮೊಬೈಲ್ ಬಂದಿವೆ. ಇದಿರಿಂದ ಹೊರಗಿನ ವಾತವರಣ ಮತ್ತಷ್ಟು ಹಾಳಾಗ್ತಿದೆ. ಯುವಕರು ಶಾಂತಿ ಕಾಪಾಡಬೇಕು. 1986 ರಲ್ಲಿ ಮೈಸೂರಲ್ಲಿ ಇಂತಹ ಹೇಳಿಕೆಯಿಂದ ಶಾಂತಿ ಕದಡಿತ್ತು. ಹೀಗಾಗಿ ಪೊಲೀಸ್, ಗುಪ್ತಚರ ಇಲಾಖೆ ಮತ್ತಷ್ಟು ಎಚ್ಚರಿಕೆವಹಿಸಬೇಕಾಗುತ್ತೆ ಎಂದರು.