ಮೈಸೂರು, ಜುಲೈ 02, 2023 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ 66 ವಯಸ್ಸಿನ ವ್ಯಕ್ತಿ ಸ್ನಾತಕೋತ್ತರ ಪದವಿ ಸ್ವೀಕರಿಸಿ ಗಮನ ಸೆಳೆದರು.
ಸಂಸ್ಕೃತದಲ್ಲಿ ಎಂಎ ಪದವಿ ಪೂರೈಸಿದ ತಮಿಳುನಾಡಿನ ಚೆನ್ನೈ ಮೂಲದ ಅರ್ಧನಾರಿ ಅವರು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದರು. ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಗದು ಬಹುಮಾನ ಪಡೆದ ಅರ್ಧನಾರಿ ಅವರು ಈಗಾಗಲೇ ವಿಜ್ಞಾನ ಸೇರಿದಂತೆ ಹಲವು ವಿಷಯಗಳಲ್ಲಿ 5 ಪದವಿ ಪಡೆದಿದ್ದಾರೆ.
ಸಂಸ್ಕೃತ ನಮ್ಮ ಭಾಷೆ. ಸಂಸ್ಕೃತವನ್ನು ಪ್ರೀತಿಸಿ ಕಲಿಯಬೇಕು. ಕಲಿಕೆಗೆ ವಯಸ್ಸು ಲೆಕ್ಕಕ್ಕಿಲ್ಲ. ನನಗೆ ಸಂಸ್ಕುತ ಕಲಿಯಬೇಕು ಎಂದು ಚಿಕ್ಕಂದಿನಿಂದಲೂ ಆಸಕ್ತಿ ಇತ್ತು. ಕರ್ನಾಟಕ ಮುಕ್ತ ವಿವಿಯಲ್ಲಿ ಅವಕಾಶ ಸಿಕ್ಕಿತು. ಮುಂದೆ ಸಂಸ್ಕೃತದಲ್ಲೇ ಪಿಹೆಚ್ ಡಿ ಮಾಡುವ ಗುರಿ ಇದೆ. ನನ್ನ ಓದು ನಿರಂತರವಾಗಿ ಸಾಗುತ್ತಲೇ ಇರುತ್ತದೆ ಎಂದ ಅರ್ಧನಾರಿ ತಮ್ಮ ಸಂತಸ ವ್ಯಕ್ತಪಡಿಸಿದರು.
ಘಟಿಕೋತ್ಸವದಲ್ಲಿ ರಾಜ್ಯಶಾಸ್ತ್ರದ ವಿದ್ಯಾರ್ಥಿನಿ ಭಾಗ್ಯಶ್ರೀ ಎನ್ ಗೆ ಪಿಹೆಚ್ಡಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ 44 ಚಿನ್ನದ ಪದಕ ಹಾಗೂ 27 ನಗದು ಬಹುಮಾನ ವಿತರಿಸಲಾಯಿತು. ಎಂ.ಎ ಕನ್ನಡ ವಿಭಾಗದ ಸೌಭಾಗ್ಯ ಹೆಚ್ ಎಂ ಅವರಿಗೆ 2 ಚಿನ್ನದ ಪದಕ, ಎಂಎ ಉರ್ದು ವಿಭಾಗದಲ್ಲಿ ಮೂವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.