ಬೆಂಗಳೂರು,ಸೆಪ್ಟೆಂಬರ್,23,2020(www.justkannada.in) : ಎಪಿಎಂಸಿ ವಿಧೇಯಕ ಮಂಡನೆ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ.28ರಂದು ಕರ್ನಾಟಕ ಬಂದ್ ಘೋಷಿಸಲಾಗಿದೆ. ತುರ್ತು ಸೇವೆ ಹೊರತು ಬೇರೆ ಯಾವುದೇ ಸೇವೆ ಸಿಗುವುದಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿದ್ದು, ಸರಕಾರವು ರೈತ ವಿರೋಧಿ ಕಾನೂನು ಜಾರಿಗೊಳಿಸುತ್ತಿದೆ. ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಮೂಲಕ ಕಾರ್ಪೋರೇಟ್, ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಪರವಿಲ್ಲ. ಅವರು ರೈತ ವಿರೋಧಿಯಾಗಿದ್ದಾರೆ. ಈ ಪ್ರಮಾಣದಲ್ಲಿ ತಿದ್ದುಪಡಿ ತರುತ್ತಾರೆ ಎಂದು ಕೊಂಡಿರಲಿಲ್ಲ. ಮೋದಿ ಅವರು ಏನು ಮಾಡಿದರೂ ನಡೆಯುತ್ತದೆ ಎಂದು ಕೊಂಡಿದ್ದಾರೆ. ಹೀಗಾಗಿ, ಸೆ.28ರಂದು ಕರ್ನಾಟಕ ಬಂದ್ ಮಾಡುವ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದರು.
ಬಂದ್ ಗೆ200ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ
ಸೆ.28ರಂದು ಬೆಳಗ್ಗೆ 6ರಿಂದ ಸಂಜೆ 6ರವರಗೆ ನಡೆಯುವ ಕರ್ನಾಟಕ ಬಂದ್ ಗೆ ಲಾರಿ ಮಾಲೀಕರು, ಚಾಲಕರ ಅಸೋಸಿಯಷೇನ್ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದು, ಅನೇಕ ಸಂಘಟನೆಗಳು ನೈತಿಕವಾಗಿ ಬೆಂಬಲ ಸೂಚಿಸಿವೆ. ಹೀಗಾಗಿ, ಅಂದು ಕರ್ನಾಟಕ ಸಂಪೂರ್ಣ ಸ್ತಬ್ಧವಾಗಲಿದೆ ಎಂದು ತಿಳಿಸಿದರು.
key words : Karnataka-Bund-Emergency-Service-Available- September 28-peasant-leader-Kodihalli Chandrasekha