ಬೆಂಗಳೂರು,ಮೇ,13,2021(www.justkannada.in): ಕರ್ನಾಟಕದ ಮೊದಲ ಮಹಿಳಾ ಶಿಲ್ಪಿ ಎಂಬ ಖ್ಯಾತಿಯ ಕನಕಮೂರ್ತಿ ( 79) ಇಂದು ಬೆಳಿಗ್ಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸಂಪ್ರದಾಯಿಕ ಮನೆತನದಲ್ಲಿ ಬೆಳೆದ ಅವರು ಬಾಲ್ಯದಲ್ಲಿಯೇ ಶಿಲ್ಪದತ್ತ ಆಸಕ್ತರಾಗಿ ಗುರು ವಾದಿರಾಜ್ ಅವರ ಬಳಿ ಎಲ್ಲರ ಪ್ರತಿರೋಧ ಎದುರಿಸಿ ಶಿಲ್ಪಕಲೆ ಕಲಿತು ಪ್ರವರ್ಧಮಾನಕ್ಕೆ ಬಂದು ನಾಡಿನ ಪ್ರಮುಖ ಶಿಲ್ಪಿ ಎಂಬ ಖ್ಯಾತಿಯನ್ನು ಪಡೆದುಕೊಂಡರು ಎಂದು ಸ್ಮರಿಸಿದ್ದಾರೆ.
ಲಾಲ್ ಬಾಗ್ ಬಳಿಯ ಕುವೆಂಪು ಪ್ರತಿಮೆ, ವಿಶ್ವೇಶ್ವರಯ್ಯ ಮ್ಯೂಸಿಯಮ್ ಅಲ್ಲಿನ ರೈಟ್ ಸೋದರರ ಪ್ರತಿಮೆ, ಗಂಗುಬಾಯಿ ಹಾನಗಲ್, ಭೀಮ ಸೇನ ಜೋಶಿ, ಕೆ.ಎಂ ಮುನ್ಶಿ ಹೀಗೆ ಅನೇಕ ಶ್ರೇಷ್ಠ ಮಹನೀಯರ ಶಿಲ್ಪಗಳನ್ನು ನಿರ್ಮಿಸಿದ ಕೀರ್ತಿ ಅವರದು. ಬಾಣಸವಾಡಿಯ 11 ಆಡಿ ಆಂಜನೇಯನ ಪ್ರತಿಮೆ ಅವರ ಇನ್ನೊಂದು ಮುಖ್ಯ ಸಾಧನೆ ಎಂದು ಟಿಎಸ್ ನಾಗಾಭರಣ ಶ್ಲಾಘಿಸಿದ್ದಾರೆ.
ಶಿಲ್ಪ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ದೊರತಿದ್ದು ಕಲಾ ಪ್ರತಿಭೆಯ ಕೈಗನ್ನಡಿಯಾಗಿದೆ.
ಪತಿ ನಾರಾಯಣ ಮೂರ್ತಿ ಮತ್ತು ಮಗಳು ಸುಮತಿ, ಅಭಿಮಾನಿ ವರ್ಗವನ್ನು ಅವರು ಅಗಲಿದ್ದಾರೆ. ಅವರಿಗೆಲ್ಲ ದುಃಖವನ್ನು ಬರಿಸುವ ಶಕ್ತಿ ಪ್ರಾಪ್ತಿಯಾಗಲಿ. ಗೌರವದ ನಮನಗಳು ಎಂದು ಟಿ.ಎಸ್ ನಾಗಾಭರಣ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Key words: Karnataka’s- first -female sculptor –kanakamurthi-dies