ಮೈಸೂರು, ನವೆಂಬರ್ 29, 2020 (www.justkannada.in): 26 ವರ್ಷಗಳ ಹಿಂದೆ ಮನೆಬಿಟ್ಟು ಮಾನಸಿಕ ಅಸ್ವಸ್ಥ ಮತ್ತೆ ಮರಳಿ ಮನೆ, ಕುಟುಂಬದವನ್ನು ಸೇರಿಸಿದ ನಂಜನಗೂಡು ತಾಲೂಕಿನ ಸಿಂಧುವಳ್ಳಿಯಲ್ಲಿರುವ ಕರುಣಾಲಯ ಮಾನಸಿಕ ಅಸ್ವಸ್ಥರ ಆಶ್ರಯತಾಣದ ಕಥೆ ಇದು.
ಉತ್ತರ ಪ್ರದೇಶದ ಕಶ್ಚಾಶಾರಿ ಗ್ರಾಮದ ರಾಜೇಂದ್ರ ಮತ್ತೆ ಮನೆ ಸೇರಿದ ವ್ಯಕ್ತಿ. ಈತ ತನ್ನ 22ನೇ ವಯಸ್ಸಿನಲ್ಲಿ ಮಾನಸಿಕ ಖಿನ್ನತೆಗೊಳಗಾಗಿ ತನಗೇ ಗೊತ್ತಿಲ್ಲದಂತೆ ಕರ್ನಾಟಕಕ್ಕೆ ಬಂದಿದ್ದ. ಬಳಿಕ 12 ವರ್ಷಗಳ ಹಿಂದೆ ನಂಜನಗೂಡಿನ ಕರುಣಾಲಯ ಮಾನಸಿಕ ಅಸ್ವಸ್ಥರ ಆಶ್ರಯತಾಣದ ಆಶ್ರಯ ಪಡೆದಿದ್ದ. ಬಳಿಕ ಗುಣಮುಖನಾಗಿ ಇಲ್ಲಿಯೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಆದರೆ ಕುಟುಂಬದ ಮಾಹಿತಿ ಮರೆತಿದ್ದರಿಂದ ಮರಳಿ ತವರಿಗೆ ಹಿಂದಿರುಗಲು ಸಾಧ್ಯವಾಗಿರಲಿಲ್ಲ.
ಈ ನಡುವೆ ಕರುಣಾಲಯ ಮಾನಸಿಕ ಅಸ್ವಸ್ಥರ ಆಶ್ರಯತಾಣದ ನೆರವಿನಿಂದ ಅವರು ಇದೀಗ ಮತ್ತೆ ಮರಳಿ ಕುಟುಂಬಕ್ಕೆ ಹಿಂದಿರುಗಿದ್ದಾರೆ. ಅಷ್ಟಕ್ಕೂ ಈ ಕುತೂಹಲಕಾರಿ ಕಥೆಯನ್ನು ಶೋಧಿಸಿದ್ದು ನಂಜನಗೂಡಿನ ವಿಜಯ ಕರ್ನಾಟಕ ವರದಿಗಾರ ಹುಲ್ಲಹಳ್ಳಿ ಶ್ರೀನಿವಾಸ್. ಈ ಕುರಿತ ವರದಿ ವಿಜಯ ಕರ್ನಾಟಕದಲ್ಲೂ ಪ್ರಕಟವಾಗಿದೆ. ಆದರೆ ಆ ಸ್ಟೋರಿ ಸಿಕ್ಕ ಹಿನ್ನೆಲೆಯೂ ಕುತೂಹಲವಾಗಿದೆ. ಇಲ್ಲಿದೆ ಆ ಇಂಟರೆಸ್ಟಿಂಗ್ ಕಥೆ… ಈ ಕುರಿತು ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಇಲ್ಲಿದೆ ಆ ಕುತೂಹಲಕಾರಿ ಸ್ಟೋರಿ…. ಓದಿ
ಸಿಂಧುವಳ್ಳಿಯಲ್ಲಿರುವ ಕರುಣಾಲಯದ ಪರಿಚಿತ ಸಿಸ್ಟರ್ ಮಧ್ಯವಯಸ್ಕ ವ್ಯಕ್ತಿಯೋರ್ವನೊಡನೆ ನಂಜನಗೂಡಿಗೆ ಆಗಮಿಸಿದ್ದರು ಈ ವೇಳೆ ಅವರು ದೂರದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದು ಕೊರೋನಾ ನೆಗೆಟೀವ್ ರಿಪೋರ್ಟ್ ಬೇಕಿರುವುದರಿಂದ ತಪಾಸಣೆಗಾಗಿ ಆಗಮಿಸಿರುವುದಾಗಿಯೂ ಮತ್ತು ತನ್ನೊಡನೆ ಇರುವ ಈ ವ್ಯಕ್ತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೇಳೆ ಕರುಣಾಲಯಕ್ಕೆ ೧೨ವರ್ಷದ ಹಿಂದೆ ಆಗಮಿಸಿದ್ದು ಈಗ್ಗೆ ಮೂರು ವರ್ಷಗಳ ಹಿಂದೆಯೇ ಈತ ಗುಣಮುಖರಾದರೂ ತನ್ನವರು ಇರುವ ಸ್ಥಳವನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಕರುಣಾಲಯದಲ್ಲೇ ಉದ್ಯಾನ ನಿರ್ವಹಣೆ ಹಾಗೂ ಇನ್ನಿತರ ಸಣ್ಣಪುಟ್ಟ ಕೆಲಸ ನಿರ್ವಹಿಸಿಕೊಂಡಿದ್ದರು ಇದೀಗ ಎರಡು ದಿನಗಳ ಹಿಂದೆ ಗೂಗಲ್ ನೆರವಿನೊಂದಿಗೆ ಆತನ ಕುಟುಂಬದವರನ್ನು ಪತ್ತೆ ಹಚ್ಚಿದ್ದು ೨೬ ವರ್ಷಗಳ ನಂತರ ಈತ ತನ್ನೂರಿಗೆ ತೆರಳುತ್ತಿದ್ದಾರೆ ಎಂಬ ಕುತೂಹಲಕಾರಿ ಸಂಗತಿಯನ್ನು ತಿಳಿಸಿದರು.
ಆದರೆ ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರೆದಿರುವ ಸಮಯದಲ್ಲಿ ಅದು ಹೇಗೆ ಈತನ ಬಂಧುಗಳ ಹುಡುಕಾಟ ಇಷ್ಟು ತಡವಾಗಲು ಸಾಧ್ಯ ಎಂಬ ಹಲವು ಪ್ರಶ್ನೆಗಳು ನನಗೆ ಈ ವೇಳೆ ಎದುರಾದವು. ಹೀಗಾಗಿ ಮರುದಿನ ಕರುಣಾಲಯ ಮಾನಸಿಕ ಅಸ್ವಸ್ಥರ ಆಶ್ರಯ ತಾಣಕ್ಕೆ ಭೇಟಿ ನೀಡಿದಾಗ ಅಲ್ಲಿ ವಾಸ್ತವ್ಯ ಹೂಡಿರುವ ೭೨ ಮಂದಿ ಪೈಕಿ ೧೦ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದು ಕೆಲವರು ಕರುಣಾಲಯದಲ್ಲೇ ಸಣ್ಣಪುಟ್ಟ ಉದ್ಯೋಗಗಳ ಮೂಲಕ ಬದುಕು ನಡೆಸುತ್ತಿದ್ದರೆ ಇನ್ನೂ ಕೆಲವರ ವಿಳಾಸ ಪತ್ತೆಗಾಗಿ ಅಲ್ಲಿನ ಸಿಬ್ಬಂದಿಗಳು ಈಗಲೂ ಕಸರತ್ತು ನಡೆಸುತ್ತಿರುವುದು ಗಮನಕ್ಕೆ ಬಂತು ಇನ್ನು ೨೦೦೮ರಲ್ಲಿ ಕರುಣಾಲಯಕ್ಕೆ ಆಗಮಿಸಿದ ರಾಜೇಂದ್ರರ ಅಂದಿನ ಚಿತ್ರಗಳು ಹಾಗೂ ಆರೋಗ್ಯ ಪರಿಸ್ಥಿತಿಯ ವಿವರಗಳೂ ಸೇರಿದಂತೆ ಆತ ಗುಣಮುಖನಾದ ನಂತರ ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಪೊಲೀಸರ ಸಹಕಾರಕ್ಕಾಗಿ ನಡೆಸಲಾದ ಪತ್ರ ವ್ಯವಹಾರಗಳು ಹೀಗೆ ಎಲ್ಲಾ ಮಾಹಿತಿಗಳು ಅಲ್ಲಿ ಲಭ್ಯವಾದವು ಆಗ ನಿಜಕ್ಕೂ ಕರುಣಾಲಯ ನಿಜಕ್ಕೂ ಕರುಣೆಯ ತಾಣವೇ ಆಗಿದೆ ಎಂಬ ಸಂಗತಿ ಅರಿವಿಗೆ ಬಂತು. ಕರುಣಾಲಯಕ್ಕೆ ಯಾರೇ ಆದರೂ ಒಮ್ಮೆ ಅಲ್ಲಿಗೆ ಭೇಟಿ ನೀಡಿದರೆ ಅಲ್ಲಿನ ಸಿಬ್ಬಂದಿಗಳ ಮಹತ್ಕಾರ್ಯ ಗೋಚರಿಸುತ್ತದೆ ಅಲ್ಲಿನ ಆಶ್ರಯದ ಮೇಲ್ವಿಚಾರಕಾರದ ಸಿಸ್ಟರ್ ರೋಸಾ ಮ್ಯಾಥ್ಯೂ ಎಲ್ಲರನ್ನೂ ಮಕ್ಕಳಂತೆ ಉಪಚರಿಸುತ್ತಾರೆ.
ಕರುಣಾಲಯ ಮುಖ್ಯಸ್ಥೆ ಸಿಸ್ಟರ್ ತೆರೇಸಾ ಮಸ್ಕರೇನಸ್ ಅಶಕ್ತರ ಸೇವೆಯಲ್ಲಿ ನಮ್ಮದೇನೂ ಹೆಚ್ಚುಗಾರಿಕೆಯಿಲ್ಲ ಎಲ್ಲವೂ ದೇವರ ದಯೆ ಹಾಗೂ ಜನರ ಸಹಕಾರ ಎಂಬ ಧನ್ಯತೆ ವ್ಯಕ್ತಪಡಿಸುತ್ತಾರೆ ಆದರೆ ಕರುಣಾಲಯದ ಸಿಬ್ಬಂದಿಗಳ ಔದಾರ್ಯದಿಂದಾಗಿ ೨೬ವರ್ಷಗಳ ನಂತರ ರಾಜೇಂದ್ರ ಈಗ ಕ್ಷೇಮವಾಗಿ ತನ್ನೂರಿಗೆ ಮರಳಿದ್ದಾರೆ ಇಂತಹ ಮಾನವೀಯ ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳು ಸಮಾಜದಲ್ಲಿ ಹೆಚ್ಚಾಗಲಿ ಎಂದು ಆಶಿಸುತ್ತೇನೆ.