ಬೆಂಗಳೂರು, ಸೆಪ್ಟೆಂಬರ್ ೮, ೨೦೨೧ (www.justkannada.in): ಬೆಂಗಳೂರು ನಗರದ ಹೆಬ್ಬಾಳದಲ್ಲಿರುವ ಪ್ರಾಣಿಗಳ ವಸತಿ ‘ಕರುಣಾ’ದ ವ್ಯವಹಾರಗಳ ಕುರಿತಂತೆ ರಾಜ್ಯ ಸರ್ಕಾರ ವಿಚಾರಣೆ ನಡೆಸುವಂತೆ ಆದೇಶಿಸಿದೆ.
ಪಶುವೈದ್ಯಕೀಯ ಕಾಲೇಜು ಆವರಣದ ಒಳಗಿರುವ ಈ ವಸತಿಯನ್ನು ‘ಕರ್ನಾಟಕ ಕರುಣಾ ಪ್ರಾಣಿಗಳ ಕಲ್ಯಾಣ ಸಂಘ’ ನಿರ್ವಹಿಸುತ್ತಿದೆ. ಇದು ನಗರದ ಅತ್ಯಂತ ಹಳೆಯ ಸರ್ಕಾರೇತರ ಸಂಸ್ಥೆಯಾಗಿದ್ದು, ೧೯೧೬ರಲ್ಲಿ ಕಾರ್ಯಾಚರಣೆಗಳ ಆರಂಭವಾಯಿತು.
ಆರೋಪಿಸಲಾಗಿರುವಂತೆ ಈ ಪ್ರಾಣಿಗಳ ವಸತಿಗೃಹದಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಿತಿಯೊಂದು ವಿಚಾರಣೆ ನಡೆಸುತ್ತಿದೆ.
ಈ ಪ್ರಾಣಿಗಳ ವಸತಿಗೃಹವನ್ನು ಮುಚ್ಚಿಸುವಂತೆ ಕೋರಿ ೨೦೨೧ರ ಜುಲೈ ೨೭ರಂದು ಬೆಂಗಳೂರಿನ ೧೧ ಜನರು ಸಹಿ ಮಾಡಿ ಕಳುಹಿಸಿದ್ದಂತಹ ಮನವಿಯ ಮೇರೆಗೆ ರಾಜ್ಯ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು.
ಪಶುಸಂಗೋಪನೆ ಹಾಗೂ ಪಶೈವೈದ್ಯಕೀಯ ಸೇವೆಗಳ ಇಲಾಖೆಗೆ ಸಲ್ಲಿಸಿದ್ದಂತಹ ಈ ಮನವಿಯಲ್ಲಿ ‘ಕರುಣಾ’ದಲ್ಲಿ ನಡೆಯುತ್ತಿರುವಂತಹ ‘ಅಸಮರ್ಪಕ ಅಭ್ಯಾಸ’ಗಳಿಂದಾಗಿ ಅನೇಕ ಪ್ರಾಣಿಗಳು ಅಸ್ವಾಭಾವಿಕವಾಗಿ ಮೃತಪಟ್ಟಿರುವುದಾಗಿ ಆರೋಪಿಸಲಾಗಿತ್ತು.
ಜೊತೆಗೆ ಸಾರ್ವಜನಿಕರಿಂದ ಸಾಕಷ್ಟು ದಾನಗಳು ಲಭಿಸುತ್ತಿರುವಂತಹ ‘ಕರುಣಾ’ ಸಂಸ್ಥೆ ಬೀದಿಯಲ್ಲಿರುವ ಪ್ರಾಣಿಗಳನ್ನು ಯಾರಾದರೂ ಕರೆದುಕೊಂಡು ಹೋಗಿ ಅಲ್ಲಿಗೆ ಒಪ್ಪಿಸಿದಾಗ ಜನರಿಂದ ಹಣವನ್ನು ಏಕೆ ಕೇಳಲಾಗುತ್ತದೆ ಎಂದು ಆ ಮನವಿಯಲ್ಲಿ ಪ್ರಶ್ನಿಸಲಾಗಿತ್ತು.
ಪ್ರಮುಖ ದೂರುದಾರರಾದ ಸುಜಯ ಜಗದೀಶ್ ಅವರು ‘ಕರುಣಾ’ದ ಇಡೀ ನಿರ್ವಹಣಾ ತಂಡವನ್ನು ಬದಲಾಯಿಸುವಂತೆ ಹಾಗೂ ಅಲ್ಲಿ ನಡೆಯುತ್ತಿರುವಂತಹ ಪ್ರಾಣಿಗಳ ದಯಾಮರಣವನ್ನು ಅಂತ್ಯಗೊಳಿಸುವ ಸಲುವಾಗಿ ಒಂದು ಆನ್ಲೈನ್ ಅಭಿಯಾನವನ್ನು ಕೈಗೊಂಡರು.
change.org ಎಂಬ ಹೆಸರಿನ ವೆಬ್ಸೈಟ್ನಲ್ಲಿ ಆಕೆ ಸಲ್ಲಿಸಿದ್ದಂತಹ ಒಂದು ಮನವಿಗೆ ೩,೭೭೩ ಸಹಿಗಳು ಲಭಿಸಿದ್ದು, ೫,೦೦೦ಕ್ಕೆ ಹೆಚ್ಚಾಗುವ ನಿರೀಕ್ಷೆ ಇದೆ.
ಸುಜಯ ಅವರ ಪ್ರಕಾರ, ‘ಕರುಣಾ’ದಲ್ಲಿ ಹಲವಾರು ದಶಕಗಳಿಂದಲೂ ಈ ರೀತಿ ಅಕ್ರಮಗಳು ನಡೆಯುತ್ತಿದ್ದು ಎಲ್ಲರಿಗೂ ತಿಳಿದಿದೆ. ಆದರೂ ಯಾರೂ ಸಹ ಈವರೆಗೂ ಧ್ವನಿ ಎತ್ತಿಲ್ಲ. ಜುಲೈ ೨೭ರಂದು ಪಶು ಸಂಗೋಪನಾ ಇಲಾಖೆಯು ಪ್ರಾಣಿಗಳ ಕಲ್ಯಾಣದಲ್ಲಿ ತೊಡಗಿಸಿಕೊಂಡಿರುವAತಹ ಸರ್ಕಾರೇತರ ಸಂಸ್ಥೆಗಳು ಹಾಗೂ ಪಶುಪಾಲನಾ ಭವನದ ಪ್ರಾಣಿರಕ್ಷಕರ ಸಭೆಯನ್ನು ಕರೆದಿತ್ತು.
“ಆ ಸಭೆಯಲ್ಲಿ ಭಾಗವಹಿಸಿದ್ದಂತಹ ಸರ್ಕಾರೇತರ ಸಂಸ್ಥೆಗಳನ್ನು ಕುರಿತು ಪ್ರತಿಯೊಬ್ಬರು ಎಷ್ಟು ಪ್ರಾಣಿಗಳನ್ನು ದತ್ತು ಪಡೆಯುವ ಸಾಮರ್ಥ್ಯವಿದೆ ಎಂದು ಪ್ರಶ್ನಿಸಿದಾಗ ಭಾಗವಹಿಸಿದ್ದಂತಹ ಎಲ್ಲಾ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೂ ಸಹ ‘ಕರುಣಾ’ ವಿರುದ್ಧ ಆರೋಪಗಳನ್ನು ಮಾಡಿದರು. ಆಗ ಇಲಾಖೆಯ ಡಾ. ಮಂಜುನಾಥ್ ಎಸ್. ಪಾಳೇಗಾರ್ ಅವರು ಆ ಕುರಿತು ಒಂದು ಮನವಿ ಪತ್ರವನ್ನು ಸಲ್ಲಿಸುವಂತೆ ಸೂಚಿಸಿದರು,” ಎಂದು ‘ಸೇವ್ ಅವರ್ ಅನಿಮಲ್ಸ್ ಚಾರಿಟೆಬಲ್ ಟ್ರಸ್ಟ್’ನ ಸುಜಯ ಅವರು ತಿಳಿಸಿದ್ದಾರೆ.
ಅವರ ಪ್ರಕಾರ ಕರುಣಾದ ವಿರುದ್ಧ ಬರುವಂತಹ ಸಾಮಾನ್ಯ ದೂರುಗಳೆಂದರೆ ಪ್ರಾಣಿಪ್ರಿಯರು ಸಂಸ್ಥೆಯ ರಿಸೆಪ್ಷನ್ ಪ್ರದೇಶದಿಂದ ಒಳಗೆ ಹೋಗಲು ಅನುಮತಿಸುವುದಿಲ್ಲ. ಯಾರಾದರೂ ಅಲ್ಲಿರುವ ನಾಯಿಯೊಂದನ್ನು ದತ್ತು ಪಡೆಯಲುಬಂದರೆ ಆ ನಾಯಿಯನ್ನು ತೋರಿಸುವುದಕ್ಕೆ ಮುಂಚೆಯೇ ದೊಡ್ಡ ಮೊತ್ತದ ಶುಲ್ಕವನ್ನು ಕಸಿದುಕೊಳ್ಳುತ್ತಾರೆ. ತಮ್ಮ ಸಾಕುಪ್ರಾಣಿಗಳನ್ನು ಒಪ್ಪಿಸಲು ಬರುವ ಜನರಿಂದ ಹಣ ಕೀಳುತ್ತಾರೆ. ಒಂದು ವೇಳೆ ಸಾಕು ಪ್ರಾಣಿಗಳ ಮಾಲೀಕರು ತಮ್ಮ ಮನಸ್ಸನ್ನು ಬದಲಾಯಿಸಿದರೆ ಅವರಿಗೆ ತಮ್ಮ ನಾಯಿಗಳನ್ನು ಹಿಂದಕ್ಕೆ ಕರೆದುಕೊಂಡು ಹೋಗಲು ಬಿಡುವುದಿಲ್ಲ. ಮನವಿ ಪತ್ರದಲ್ಲಿ ಸಹಿ ಹಾಕಿದ್ದಂತಹ ಮೆಕ್ಯಾನಿಕಲ್ ಇಂಜಿನಿಯರ್ ಲೆವಿನ್ ದಾಸನ್ ಅವರ ಪ್ರಕಾರ ಇಲ್ಲಿರುವ ನಾಯಿಗಳನ್ನು ತಳಿಗಾರರಿಗೆ ಮಾರಾಟ ಮಾಡಲಾಗುತ್ತದೆ ಅಥವಾ ದಯಾ ಮರಣವನ್ನು ನೀಡಲಾಗುತ್ತದಂತೆ. ‘ಕರುಣಾ’ದಲ್ಲಿ ಆರೋಗ್ಯವಾಗಿರುವ ನಾಯಿಗಳನ್ನೂ ಸಹ ಸೇರಿಸಿಕೊಳ್ಳಲಾಗುತ್ತದೆ, ಯಾವುದೇ ಪ್ರಶ್ನೆಗಳನ್ನೂ ಕೇಳುವುದಿಲ್ಲ, ಆಪ್ತಸಮಾಲೋಚನೆಯನ್ನೂ ಮಾಡುವುದಿಲ್ಲ, ಎನ್ನುತ್ತಾರೆ.
“ನಾನು ೨೦೧೨ರಲ್ಲಿ ಪ್ರವಾಸವೊಂದರಿಂದ ಹಿಂದಿರುಗಿದಾಗ ಕೂಕ್ಸ್ ಟೌನ್ನಲ್ಲಿರುವ ನನ್ನ ಮನೆಯ ಬಳಿ ಇರುವಂತಹ ಒಂದು ಬೀದಿ ನಾಯಿ ಕಾಣೆಯಾಗಿತ್ತು. ಅಲ್ಲಿನ ಓರ್ವ ನಿವಾಸಿಗೆ ಆ ನಾಯಿ ಅಲ್ಲಿರುವುದು ಇಷ್ಟವಿರಲಿಲ್ಲ. ಅವರು ‘ಕರುಣಾ’ಗೆ ತಿಳಿಸಿ ಅವರಿಗೆ ಆ ನಾಯಿಯನ್ನು ಒಪ್ಪಿಸಿ ಅವರಿಂದ ರೂ.೧,೫೦೦ ಪಡೆದುಕೊಂಡಿದ್ದಾರೆ. ನಾನು ‘ಕರುಣಾ’ಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಅಲ್ಲಿನ ಸಿಬ್ಬಂದಿ ಆ ನಾಯಿಯನ್ನು ದತ್ತು ಪಡೆದಿರುವುದಾಗಿ ತಿಳಿಸಿದರು. ನಾನು ಮರು ದಿನ ಮಾಧ್ಯಮದವರೊಂದಿಗೆ ಅಲ್ಲಿಗೆ ತೆರಳಿದಾಗ ಅವರು ಕತೆಯನ್ನೇ ಬದಲಾಯಿಸಿ, ಆ ನಾಯಿ ಗೋಡೆ ಹಾರಿ ತಪ್ಪಿಸಿಕೊಂಡಿದೆ ಎಂದು ಉತ್ತರಿಸಿದರು,” ಎಂದರು ದಾಸನ್.
ಮನವಿಯಲ್ಲಿ ಸಹಿ ಮಾಡಿರುವವರಲ್ಲದೆ ಇನ್ನೂ ಅನೇಕರು ‘ಕರುಣಾ’ ಬಗ್ಗೆ ಆರೋಪಗಳನ್ನು ಮಾಡಿದ್ದಾರೆ. ಕೆಂಗೇರಿಯಲ್ಲಿರುವ ನಾಯಿಗಳು ಹಾಗೂ ಪಾರಿವಾಳಗಳನ್ನು ನೋಡಿಕೊಳ್ಳುವ ಅನಿಮಲ್ ರೈಟ್ಸ್ ಫಂಡ್ನ ಸ್ಥಾಪಕ ಟ್ರಸ್ಟಿ ದಿಲೀಪ್ ಬಾಫ್ನಾ ಅವರು ಹೇಳುವಂತೆ, “ನಾನು ೨೦ ವರ್ಷಗಳ ಹಿಂದೆ ‘ಕರುಣಾ’ದ ಸ್ವಯಂಸೇವಕರಿಗೆ ಆಗಾಗ ಅಕ್ಕಿ, ಛತ್ರಿಗಳು ಹಾಗೂ ರೈನ್ಕೋಟ್ಗಳನ್ನು ನೀಡುತ್ತಿದ್ದೆ. ಆದರೆ ಅವರು ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂದು ತಿಳಿದ ನಂತರ ನಿಲ್ಲಿಸಿದೆ. ಸುಮಾರು ೧೫-೧೬ ವಷಗಳ ಹಿಂದೆ ಕರುಣಾದಿಂದ ಅನೇಕ ಸತ್ತ ಪ್ರಾಣಿಗಳನ್ನು ಸಾಗಿಸುತ್ತಿದ್ದಂತಹ ಒಂದು ಲಾರಿಯನ್ನು ನಾನು ಹಿಂಬಾಲಿಸಿದೆ. ಆ ಸತ್ತ ಪ್ರಾಣಿಗಳನ್ನು ನೆಲಮಂಗಲದ ಬಳಿ ಇರುವಂತಹ ಒಂದು ಬಿಬಿಎಂಪಿ ತ್ಯಾಜ್ಯ ಕೇಂದ್ರದಲ್ಲಿ ಸುರಿಯಲಾಯಿತು. ನಾವು ಆ ಕುರಿತು ಬಿಬಿಎಂಪಿಗೆ ದೂರು ನೀಡಿದೆವು, ಆದರೆ ಏನೂ ಆಗಲಿಲ್ಲ,” ಎಂದು ವಿವರಿಸಿದರು.
ಅವರು ಹೇಳುವಂತೆ, “ನಮ್ಮ ಸಂಸ್ಥೆಯು ಕೇವಲ ಅನಾರೋಗ್ಯಪೀಡಿತ, ಗಾಯಗೊಂಡಿರುವ ಹಾಗೂ ಬೀದಿಯಲ್ಲಿ ಬಿಟ್ಟಿರುವ ಪ್ರಾಣಿಗಳನ್ನು ಮಾತ್ರ ದತ್ತು ಪಡೆಯಲಾಗುತ್ತದೆ, ಅದೂ ಸಹ ಉಚಿತವಾಗಿ. ಒಂದು ವೇಳೆ ಯಾರಾದರೂ ಸ್ವಯಂಪ್ರೇರಿತವಾಗಿ ಹಣ ನೀಡಿದರೆ ಮಾತ್ರ ತೆಗೆದುಕೊಳ್ಳುತ್ತೇವೆ,” ಎನ್ನುತ್ತಾರೆ.
‘ಕರುಣಾ’ ಸಿಬ್ಬಂದಿಗಳ ವಾದ
ಆದರೆ ‘ಕರುಣಾ ಪ್ರಾಣಿ ವಸತಿಗೃಹ’ದ ಅಧ್ಯಕ್ಷ ಡಾ. ಡಿ.ಟಿ. ಜಯರಾಮಯ್ಯ ಅವರು ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಈ ವಸತಿಯ ಓರ್ವ ಪೋಷಕರಾದ ಡಾ. ಬಿ.ಸಿ. ರಾಮಕೃಷ್ಣ ಅವರು ಪ್ರಾಣಿಗಳನ್ನು ಪಡೆಯಲು ಹಣ ತೆಗೆದುಕೊಳ್ಳಲಾಗುತ್ತದೆ ಎಂಬ ‘ಕರುಣಾ’ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ.
“ಇದೊಂದು ದತ್ತಿ ಸಂಸ್ಥೆ. ಈ ಸಂಸ್ಥೆ ಸಾರ್ವಜನಿಕರು ನೀಡುವ ದಾನದಿಂದ ನಡೆಯುತ್ತಿದೆ. ಇಲ್ಲಿ ಕೇವಲ ರೋಗಪೀಡಿತ ಪ್ರಾಣಿಗಳನ್ನು ಮಾತ್ರ ಪಡೆಯಲಾಗುತ್ತದೆ ಅಥವಾ ಬೇರೆ ಊರುಗಳಿಗೆ ಸ್ಥಳಾಂತರವಾಗುತ್ತಿರುವಂತಹ ಮಾಲೀಕರು ಇಲ್ಲಿಗೆ ಕರೆ ತರುವ ಪ್ರಾಣಿಗಳನ್ನು ಮಾತ್ರ ಪಡೆಯಲಾಗುತ್ತದೆ,” ಎಂದು ವಿವರಿಸಿದ್ದಾರೆ.
ಹಾಗಾದರೆ ಭೇಟಿ ನೀಡುವವರನ್ನು ಒಳಗೆ ಹೋಗಲು ಏಕೆ ಅನುಮತಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, “ಪ್ರತಿಯೊಂದು ಸಂಸ್ಥೆಯೂ ಸಹ ಒಂದು ಶಿಷ್ಠಾಚಾರವನ್ನು ಹೊಂದಿರುತ್ತದೆ. ಅದೇ ರೀತಿ ಇಲ್ಲಿಯೂ ಸಹ ಪ್ರತಿ ದಿನ ಬೆಳಿಗ್ಗೆ ೧೧.೩೦ರಿಂದ ೧೨.೩೦ರವರೆಗೆ ಹಾಗೂ ಮಧ್ಯಾಹ್ನ ೨.೩೦ರಿಂದ ೩.೩೦ರವರೆಗೆ ಒಳಗೆ ಪ್ರವೇಶಿಸಲು ಅನುಮತಿಸಲಾಗುತ್ತದೆ,” ಎಂದರು.
‘ಕರುಣಾ’ ಸಂಸ್ಥೆಯು, ಇಲ್ಲಿ ಕರೆತಂದು ಒಪ್ಪಿಸುವ ಸಾಕು ಪ್ರಾಣಿಗಳ ಮಾಲೀಕರಿಗೆ ಅವುಗಳನ್ನು ನೋಡಲು ಬಿಡದೆ ಇರಲು ಕಾರಣವಿದೆ ಎನ್ನುತ್ತದೆ. “ಹಾಗೆ ಮಾಡಿದರೆ ಆ ಪ್ರಾಣಿಗೆ ಇಲ್ಲಿರಬೇಕೋ ಅಥವಾ ಅವರ ಜೊತೆ ಹೋಗಬೇಕೋ ಎಂದು ಗೊಂದಲವುಂಟಾಗುತ್ತದೆ,” ಎನ್ನುತ್ತಾರೆ. ಕರುಣಾದಲ್ಲಿ ಪ್ರಾಣಿಗಳಿಗೆ ದಯಾಮರಣ ನೀಡಲಾಗುತ್ತದೆ ಎನ್ನುವ ಆರೋಪವನ್ನು ಅವರು ಒಟ್ಟಾರೆಯಾಗಿ ನಿರಾಕರಿಸಿದ್ದಾರೆ.
“ನಮ್ಮ ಪ್ರಯತ್ನಗಳಿಂದಾಗಿಯೇ ಬಿಬಿಎಂಪಿ ಸುಮನಹಳ್ಳಿಯಲ್ಲಿ ನಾಯಿಗಳಿಗಾಗಿಯೇ ಪ್ರತ್ಯೇಕವಾಗಿ ಒಂದು ವಿದ್ಯುತ್ ಚಿತಾಗಾರವನ್ನು ಸ್ಥಾಪಿಸಿದೆ. ಈ ಹಿಂದೆ ‘ಕರುಣಾ’ ಸಂಸ್ಥೆ ದೊಡ್ಡಬಳ್ಳಾಪುರದಲ್ಲಿನ ರೈತರೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡು ಸತ್ತ ಪ್ರಾಣಿಗಳನ್ನು ಅಲ್ಲಿನ ಜಮೀನುಗಳಲ್ಲಿ ಹೂಳಲಾಗುತಿತ್ತು. ನಾವು ಎಂದಿಗೂ ಪ್ರಾಣಿಗಳನ್ನು ಸಾಯಿಸಿಲ್ಲ,” ಎನ್ನುವುದು ಡಾ. ಜಯರಾಮಯ್ಯ ಅವರ ಅಭಿಪ್ರಾಯವಾಗಿದೆ.
“ಕರುಣಾ’ ಸಂಸ್ಥೆಯ ವಿರುದ್ಧ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿಚಾರಗಳನ್ನು ಹರಿಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯ ಸಾಮಾಜಿಕ ಜಾಲತಾಣದ ಪುಟವನ್ನು ನಿರ್ವಹಿಸಲು ಸೂಕ್ತ ವ್ಯಕ್ತಿಯನ್ನು ಹುಡುಕುತ್ತಿದ್ದೇವೆ,” ಎಂದು ಡಾ. ಜಯರಾಮಯ್ಯ ಅವರು ತಿಳಿಸಿದ್ದಾರೆ.
ಕರುಣಾ ವಿರುದ್ಧದ ಆರೋಪಗಳು
ಪ್ರಾಣಿಗಳನ್ನು ದತ್ತುಪಡೆಯಲು ಹಾಗೂ ಒಪ್ಪಿಸಲು ಹಣ ಕೇಳಲಾಗುತ್ತದೆ. ನಾಯಿಗಳು ಅಲ್ಲಿಂದ ಕಣ್ಮರೆಯಾಗುತ್ತಿದೆ. ದಯಾಮರಣ, ಶಂಕಿತ ಕಾರ್ಯಕರ್ತರು. ಪ್ರಾಣಿಪ್ರಿಯರನ್ನು ಒಳಗೆ ಹೋಗಲು ಅನುಮತಿಸುವುದಿಲ್ಲ.
ಈವರೆಗೆ ನಡೆದಿರುವ ವಿಚಾರಣೆ
ಕರ್ನಾಟಕ ಪಶುವೈದ್ಯಕೀಯ ಪರಿಷತ್ನ ಅಧ್ಯಕ್ಷ ಡಾ. ಆರ್. ನರೇಂದ್ರ ಅವರು ಈ ವಿಚಾರಣಾ ಸಮಿತಿಯನ್ನು ಮುನ್ನಡೆಸುತ್ತಿದ್ದು, “ಈ ವಿಚಾರಣೆ ಪೂರ್ಣಗೊಳಿಸಲು ಆರು ತಿಂಗಳ ಕಾಲಾವಧಿ ಇದೆ. ವಿಚಾರಣೆಯನ್ನು ಯಾವ ಹಾದಿಯಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಆಲೋಚಿಸುತ್ತಿದ್ದೇವೆ,” ಎನ್ನುತ್ತಾರೆ. ಕಳೆದ ಮಂಗಳವಾರ ಸಮಿತಿಯ ಸದಸ್ಯರು ‘ಕರುಣಾ’ಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ವಿಚಾರಣೆ ನಡೆಸಿದ್ದಾರೆ.
ಸುಜಯ ಅವರು ಕರುಣಾ ವಿರುದ್ಧದ ಹೋರಾಟವನ್ನು ಮುನ್ನಡೆಸುತ್ತಿದ್ದು, ಇಲ್ಲಿಗೆ ಸಾಕುಪ್ರಾಣಿಗಳನ್ನು ಕರೆತಂದು ಬಿಟ್ಟಿರುವಂತಹ ಜನರ ಪೈಕಿ ಅಲ್ಲಿನ ಸಿಬ್ಬಂದಿಗಳು ಯಾರಿಂದಲಾದರೂ ಬಲವಂತವಾಗಿ ಹಣ ಕಸಿದುಕೊಂಡಿದ್ದಾರೆ, ಹಣ ಪಾವತಿಸಿರುವ ಕುರಿತ ರಸೀದಿಗಳಾಗಲೀ ಅಥವಾ ಇನ್ನಿತರೆ ಯಾವುದಾದರೂ ಸಾಕ್ಷಿಗಳಿದ್ದರೆ sheltercruelty@gmail.com ಈ ಇಮೇಲ್ಗೆ ಕಳುಹಿಸುವಂತೆ ಕೋರಿದ್ದಾರೆ.
ಗಮನಿಸಿ: ಕರ್ನಾಟಕ ಸರ್ಕಾರ ೨೪ ಗಂಟೆಗಳು ಕಾರ್ಯನಿರ್ವಹಿಸುವ ಪ್ರಾಣಿದಯಾ ಸಹಾಯವಾಣಿ ಸಂಖ್ಯೆ ೮೨೭೭೧ ೦೦೨೦೦ ಅನ್ನು ಸ್ಥಾಪಿಸಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್ (ಮೆಟ್ರೊಲೈಫ್)
key words : karuna-bengaluru-s-oldest-animal-shelter-facing-inquiry