ಬೆಂಗಳೂರು:ಜುಲೈ-18: ಕಾವೇರಿ ನದಿಯಲ್ಲಿ ಮಳೆಗಾಲದಲ್ಲಿ ನೀರಿನ ಹರಿವು ಹಿಂದೆಂದೂ ಇಷ್ಟೊಂದು ಕೆಳಮಟ್ಟದಲ್ಲಿ ಇರಲಿಲ್ಲ. ಇದು ಕೃಷಿಕರಷ್ಟೇ ಅಲ್ಲದೆ ಸಾರ್ವಜನಿಕರನ್ನೂ ಆತಂಕಕ್ಕೀಡುಮಾಡಿದೆ.
ಕುಶಾಲನಗರ ಸಮೀಪದ ಹಳೆಕೂಡಿಗೆ ಹಾಗೂ ಕಣಿವೆ ಗ್ರಾಮಗಳ ನಡುವಿನ ಕಾವೇರಿ-ಹಾರಂಗಿ ನದಿ ಸಂಗಮ ವ್ಯಾಪ್ತಿಯಲ್ಲಿ ಕಾವೇರಿ ನದಿ ದಂಡೆ ಮೇಲೆ ನಿರ್ವಿುಸಿರುವ ಕೇಂದ್ರ ಜಲಮಾಪನ ಕೇಂದ್ರ ಹಲವು ದಶಕಗಳಿಂದ ಕಾರ್ಯಾಚರಿಸುತ್ತಿದೆ. ಕಳೆದ ಜುಲೈ ಮೊದಲ ವಾರದಲ್ಲಿ ಉತ್ತಮ ಮಳೆಯಾದ ಕಾರಣ ಕಾವೇರಿ, ಹಾರಂಗಿ ಎರಡೂ ನದಿಯಲ್ಲೂ ನೀರಿನ ಹರಿವು 12 ಮೀಟರ್ (ಸಮುದ್ರ ಮಟ್ಟದಿಂದ 818.26 ಮೀಟರ್) ಇತ್ತು. ಈ ಬಾರಿ ಜು.7ರಂದು ನದಿಯಲ್ಲಿ ಕೇವಲ 5.52 ಮೀ. ಹರಿವಿದೆ. ಇಷ್ಟು ಕಡಿಮೆ ಹರಿವು ಇದೇ ಮೊದಲು ಎಂಬುದೇ ಆತಂಕಕ್ಕೆ ಕಾರಣ.
ಇತಿಹಾಸದಲ್ಲಿ ಇದೇ ಮೊದಲು: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಆಗಸ್ಟ್ 15, 16, 17ರಂದು ಜಲಸ್ಪೋಟದಂಥ ಯಮಸ್ವರೂಪಿ ಮಳೆ ಸುರಿದಾಗ ಸಹಜವಾಗಿ ಕಾವೇರಿ ನದಿಯಲ್ಲೂ ಒಳಹರಿವು ಹೆಚ್ಚಾಗಿತ್ತು. ಹಾರಂಗಿ ಅಣೆಕಟ್ಟೆಯಿಂದ ಜಲಾಶಯ ನಿರ್ವಣದ ಇತಿಹಾಸದಲ್ಲೇ ಅತ್ಯಧಿಕ ಎನ್ನಲಾದ ಗರಿಷ್ಠ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿತ್ತು.
ಕಾವೇರಿ ನದಿಯ ತಳ ಮಟ್ಟದಿಂದ ಗರಿಷ್ಠ 17 ಮೀ. (ಸಮುದ್ರ ಮಟ್ಟದಿಂದ 822.34 ಮೀ.ಎತ್ತರ) ನೀರು ಹರಿದು ಜಲಮಾಪನ ಕೇಂದ್ರದಲ್ಲಿ ದಾಖಲೆ ನಿರ್ವಿುಸಿದೆ. 1976ರಲ್ಲಿ ಕಾವೇರಿ ನದಿಯಲ್ಲಿ 820.49 ಮೀ. ನೀರು ಹರಿದಿತ್ತು ಎಂದು ಅಧಿಕಾರಿ ರಾಮರಾಜನ್ ’ವಿಜಯವಾಣಿ’ ಗೆ ತಿಳಿಸಿದ್ದಾರೆ.
ಕಾವೇರಿ ಜಲವಿವಾದದ ಸಂದರ್ಭ ನದಿ ನೀರಿನ ಹರಿವು, ಮಳೆ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟ ಮಾಹಿತಿಗಳ ಸಂಗ್ರಹಕ್ಕೆ ಜಲಮಾಪನ ಕೇಂದ್ರಗಳಲ್ಲಿ ತಮಿಳುನಾಡಿನ ಅಧಿಕಾರಿಗಳು ಇರುವುದೇ ಇಲ್ಲಿ ಅಚ್ಚರಿಯ ಸಂಗತಿ. 115 ಟಿಎಂಸಿ ಸಾಮರ್ಥ್ಯದ ಕಾವೇರಿ ಕಣಿವೆಯ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕಬಿನಿ, ಕೆಆರ್ಎಸ್ ಜಲಾಶಯಗಳಲ್ಲಿ ಈ ಬಾರಿ ಮಳೆ ಕೊರತೆಯಿಂದಾಗಿ ಕೇವಲ 24 ಟಿಎಂಸಿ ನೀರಿದೆ.
ಕಳೆದ ವರ್ಷ ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾದ್ದರಿಂದ ಇಷ್ಟರೊಳಗೆ 405 ಟಿಎಂಸಿ ನೀರು ಹರಿದಿತ್ತು. ಆ ಪೈಕಿ ಜುಲೈನಲ್ಲೇ 79 ಟಿಎಂಸಿ ನೀರು ಹರಿದಿತ್ತು. ಆದರೆ ಈ ಬಾರಿ ನದಿದಂಡೆ ವಾಸಿಗಳಿಗೆ ಕುಡಿಯುವ ನೀರಿಲ್ಲದ ಭಯಾನಕ ಸನ್ನಿವೇಶ ನಿರ್ವಣವಾಗಿದೆ.
| ಗೋಪಿನಾಥ್ ನಿವೃತ್ತ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ
ನಾಳೆ ಹಲವೆಡೆ ಭಾರಿ ಮಳೆ?
ಬೆಂಗಳೂರು ಸೇರಿ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜು. 19ರಂದು ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ ಜಿಲ್ಲೆಗಳಲ್ಲೂ ಮಳೆ ಬೀಳಲಿದೆ. ಕೊಡಗು, ಹಾಸನ, ಶಿವಮೊಗ್ಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮಳೆಗೆ ಕೊಚ್ಚಿ ಹೋಯ್ತು ರಸ್ತೆ
ಬೆಂಗಳೂರು: ರಾಜ್ಯದ ಕೆಲವೆಡೆ ಭಾರಿ ಮಳೆ ಆಗಿದ್ದು, ರಾಯಚೂರಿನ ಮಸ್ಕಿಯ ಸಂತೆಕೆಲ್ಲೂರು ಸಮೀಪದ ಗಡ್ಡಿ ಹಳ್ಳದ ಸೇತುವೆ ಪಕ್ಕದ ರಾಷ್ಟ್ರೀಯ ಹೆದ್ದಾರಿ 150(ಎ)ಗೆ ನಿರ್ವಿುಸಿದ್ದ ತಾತ್ಕಾಲಿಕ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ. ಪರಿಣಾಮ ಮಂಗಳವಾರ ರಾತ್ರಿಯಿಂದಲೇ ಬೀದರ್- ಬೆಂಗಳೂರು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿ, 60 ಎಕರೆ ಹೊಲದ ಮಣ್ಣು ಕೊಚ್ಚಿ ಹೋಗಿದೆ. ಲಿಂಗಸಗೂರಿನ ತೋಟದ ಸರ್ಕಾರಿ ಪ್ರೌಢಶಾಲೆ ಬಳಿ ಮಂಗಳವಾರ ರಾತ್ರಿಯ ಮಳೆಗೆ ವಿದ್ಯುತ್ ಕಂಬ ಬಾಗಿ ಜೋತು ಬಿದ್ದ ತಂತಿಯನ್ನು ಬುಧವಾರ ಬೆಳಗ್ಗೆ ಮುಟ್ಟಿದ್ದ ಪ್ರಶಾಂತ (9) ಎಂಬಾತ ಅಸುನೀಗಿದ್ದಾನೆ.
ಮಳೆಯಬ್ಬರಕ್ಕೆ ಹುಬ್ಬಳ್ಳಿ-ಧಾರವಾಡ ರಸ್ತೆಗಳು ಜಲಾವೃತವಾಗಿ, ತಗ್ಗು ಪ್ರದೇಶಗಳಿಗೆ ಮತ್ತು ಹಲವೆಡೆ ಮನೆ-ಅಂಗಡಿಗಳಿಗೆ ನೀರು ನುಗ್ಗಿದೆ. ಹಾಸನ ಜಿಲ್ಲೆಯ ವಿವಿಧೆಡೆ ಬಿರುಸಾಗಿ ಮಳೆ ಸುರಿದಿದೆ. ಯಾದಗಿರಿ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿದ್ದು, ನಗರದ ಲಕ್ಷ್ಮೀ ಬಡಾವಣೆ, ಗಾಂಧಿ ನಗರ ಹಾಗೂ ಹಳೇ ಬಸ್ ನಿಲ್ದಾಣ ಪ್ರದೇಶ ಕೆರೆಯಂತಾಗಿದೆ. ಮಂಡ್ಯ, ಮೈಸೂರು ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿದಿದೆ. ಕರಾವಳಿಯಲ್ಲಿ ಸಾಮಾನ್ಯ ಮಳೆಯಾಗಿದೆ.
ಮಳೆಗಾಗಿ ಕಪ್ಪೆ ಮದುವೆ: ಕೊಡಗಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ರೈತರು ಬುಧವಾರ ಕಪ್ಪೆಗೆ ಮದುವೆ ಮಾಡಿಸಿದರು.
ಬರಪೀಡಿತ ತಾಲೂಕುಗಳನ್ನು ತಕ್ಷಣ ಘೋಷಿಸಿ
ಬೆಂಗಳೂರು: ಮುಂಗಾರು ಮಳೆ ಕಡಿಮೆ ಪ್ರಮಾಣದಲ್ಲಿ ಆಗಿದೆ ಎನ್ನಲಾದ ರಾಜ್ಯದ 65 ತಾಲೂಕುಗಳನ್ನು ಕೂಡಲೇ ಬರಪೀಡಿತವೆಂದು ಘೊಷಿಸಿ, ಆ ಎಲ್ಲ ತಾಲೂಕುಗಳಲ್ಲಿ ತಲಾ 1 ಜಾನುವಾರು ಶಿಬಿರ ಸ್ಥಾಪಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಪೀಠ, ಬರಪೀಡಿತ ತಾಲೂಕು ಎಂದು ಘೊಷಿಸದಿದ್ದರೆ ಸವಲತ್ತುಗಳು ಸಿಗುವುದಿಲ್ಲ. ಕೂಡಲೇ ಘೊಷಣೆ ಮಾಡಿ, ಪ್ರತಿ ತಾಲೂಕಿನಲ್ಲೂ ಜಾನುವಾರು ಶಿಬಿರ ಆರಂಭಿಸಿ ಎಂದು ಸರ್ಕಾರಕ್ಕೆ ತಾಕೀತು ಮಾಡಿತು. ಈ ಸಂಬಂಧ ಶುಕ್ರವಾರ ಮಧ್ಯಂತರ ಆದೇಶ ನೀಡುವುದಾಗಿ ತಿಳಿಸಿದ ಪೀಠ, ಅರ್ಜಿ ವಿಚಾರಣೆ ಮುಂದೂಡಿತು.ಇದಕ್ಕೂ ಮುನ್ನ ಸರ್ಕಾರಿ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ಪೀಠ, ಕಳೆದ ಡಿಸೆಂಬರ್ನಲ್ಲಿ ಸರ್ಕಾರ ಬರಪೀಡಿತ 156 ತಾಲೂಕುಗಳಲ್ಲಿ 75.35ಲಕ್ಷ ಜಾನುವಾರುಗಳಿಗೆ ತೊಂದರೆ ಆಗಿದೆ ಎಂದಿದೆ. 75 ಲಕ್ಷ ಜಾನುವಾರುಗಳಿಗೆ 27 ಗೋಶಾಲೆಗಳು ಸಾಕೇ? ಎಂದು ಕೇಳಿತು.
ಕೃಪೆ:ವಿಜಯವಾಣಿ