ನವದೆಹಲಿ,ಆಗಸ್ಟ್,25,2023(www.justkannada.in): ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಎರಡು ರಾಜ್ಯಗಳ ಜಲಾಶಯಗಳ ವಾಸ್ತವ ವರದಿ ಸಲ್ಲಿಸುವಂತೆ ಕಾವೇರಿ ನಿರ್ವಹಣಾ ಪ್ರಾದಿಕಾರಕ್ಕೆ ಸೂಚನೆ ನೀಡಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನ ಸೆಪ್ಟಂಬರ್ 1ಕ್ಕೆ ಮುಂದೂಡಿಕೆ ಮಾಡಿದೆ.
ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದು ಸ್ರುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನ ಇಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.
ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, 15 ದಿನ 10 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ಪ್ರಾದಿಕಾರ ಆದೇಶಿಸಿತ್ತು. ಇದು ಮುಂದಿನ 20 ದಿನಗಳಿಗೆ ಮುಂದುವರಿಯಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ 40 ಟಿಎಂಸಿ ನೀರು ಬಿಡುತ್ತಿಲ್ಲ ಎಂದು ವಾದ ಮಂಡಿಸಿದರು.
ಈ ವೇಳೆ ನೀರು ಹಂಚಿಕೆ ವಿಷಯದಲ್ಲಿ ನಾವು ತಜ್ಞರಲ್ಲ ನಾವು ಆದೇಶ ಹೊರಡಿಸಲು ಹೇಗೆ ಸಾಧ್ಯ..? ಪ್ರಾಧಿಕಾರದ ಎದುರು ಯಾಕೆ ಹೋಗಬಾರದು ಎಂದು ತಮಿಳುನಾಡು ಪರ ವಕೀಲರಿಗೆ ನ್ಯಾಯಾದೀಶರು ಪ್ರಶ್ನಿಸಿದರು.
ಈ ವೇಳೆ ಕರ್ನಾಟಕ ಪರ ವಾದ ಮಂಡಿಸಿದ ವಕೀಲ ಶ್ಯಾಮ ದಿವಾನ್, ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ನೀರು ಹರಿಸಿದ್ದೇವೆ. ತಮಿಳುನಾಡು ವ್ಯರ್ಥ ಆರೋಪ ಮಾಡುತ್ತಿದೆ. ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ ನಾವು ನಮ್ಮ ಸಮಸ್ಯೆಗಳನ್ನು ಹೇಳಲು ಪ್ರಯತ್ನಿಸಿದಾಗ ತಮಿಳುನಾಡು ಸರ್ಕಾರದ ಅಧಿಕಾರಿಗಳು ಕೇಳದೆ ಸಭೆಯಿಂದ ಹೊರನಡೆದಿದ್ದಾರೆ. ಕರ್ನಾಟಕದಲ್ಲಿ ಕಡಿಮೆ ಮಳೆಯಾಗಿದೆ. ಜಲಾಶಯದಲ್ಲಿ ನೀರು ಕಡಿಮೆ ಇದೆ. ನೀರಿನ ಪ್ರಮಾಣ ತುಂಬಾ ಕಡಿಮೆ ಇದೆ ಎಂದರು.
ತಮಿಳುನಾಡಿನಲ್ಲಿ ನೀರಿನ ಕೊರತೆ ಇದೆ ತೀರ್ಪುಬರುವವರೆಗೆ ನೀರ ಹರಿಸಲು ತಮಿಳುನಾಡು ಪರ ವಕೀಲರು ಮನವಿ ಮಾಡಿದರು.
ಈ ಮಧ್ಯಂತರ ಅವಧಿಯಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆ ಕರೆಯಬೇಕು. ಪ್ರಾಧಿಕಾರದಲ್ಲಿ ತಜ್ಞರಿದ್ದಾರೆ ನಾವು ತಜ್ಞರಲ್ಲ ಹಾಗಾಗಿ ಯಾವುದನ್ನೂ ತನಿಖೆ ಮಾಡದೆ ತಕ್ಷಣ ಆದೇಶ ಹೊರಡಿಸುವುದು ಕಷ್ಟ ಎಂದು ಪ್ರಕರಣದ ವಿಚಾರಣೆಯನ್ನು ಮುಂದಿನ ವಾರ ಶುಕ್ರವಾರಕ್ಕೆ ಸುಪ್ರೀಂಕೋರ್ಟ್ ಮುಂದೂಡಿತು.
Key words: Kaveri river -water –dispute- Supreme Court -adjourned – hearing -September 1,