ಬೆಂಗಳೂರು,ಫೆಬ್ರವರಿ,4,2021(www.justkannada.in): ಕಾವೇರಿ ನದಿ ಪಾತ್ರದಲ್ಲಿರುವ ಸ್ಥಳೀಯ ಸಂಸ್ಥೆಗಳು ಹಾಗೂ ಜನವಸತಿ ಪ್ರದೇಶಗಳಿಂದ ಉತ್ಪತ್ತಿಯಾಗುತ್ತಿರುವ ಗೃಹ ಬಳಕೆ ಕಲ್ಮಶಗಳ ತ್ಯಾಜ್ಯ ವಿಸರ್ಜನೆಯಿಂದ ಕಾವೇರಿ ನದಿ ನೀರು ಕಲುಷಿತಗೊಂಡಿದ್ದು 208 ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಮಶ ಶುದ್ದೀಕರಣ ಘಟಕಗಳ ಸ್ಥಾಪನೆಗೆ ಕ್ರಿಯಾಯೋಜನೆಗಳನ್ನು ಸಿದ್ದಪಡಿಸಲಾಗಿದೆ ಎಂದು ಪರಿಸರ, ಜೀವಿ ಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವರಾದ ಸಿ.ಪಿ. ಯೋಗೇಶ್ವರ್ ಮಾಹಿತಿ ನೀಡಿದರು.
ವಿಧಾಸಭೆ ಪ್ರಶ್ನೋತ್ತರ ಸಮಯದಲ್ಲಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಪಿ ಯೋಗೇಶ್ವರ್, ಶ್ರೀರಂಗಪಟ್ಟಣ, ಕೊಳ್ಳೆಗಾಲ,ಬನ್ನೂರು ಹಾಗೂ ಟಿ.ನರಸೀಪುರ ಪಟ್ಟಣಗಳಲ್ಲಿ ಮಲಿನ ನೀರು ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ನದಿ ನೀರು ಮಾಪನ ಕಾರ್ಯಕ್ರಮದಡಿಯಲ್ಲಿ ಕಾವೇರಿ ನದಿ ನೀರನ್ನು 22 ಕೇಂದ್ರಗಳಲ್ಲಿ ಪ್ರತಿ ತಿಂಗಳು ಸಂಗ್ರಹಿಸಿ ಪರೀಕ್ಷೆ ಮಾಡಿ ವಿಶ್ಲೇಷಣೆಗಳನ್ನು ಕೇಂದ್ರ ಮಾಲಿನ್ಯ ಮಂಡಳಿಗೆ ಸಲ್ಲಿಸಿದೆ. ಈ ವಿಶ್ಲೇಷಣೆ ವರದಿಗಳ ಪ್ರಕಾರ ನದಿನೀರಿನ ಗುಣಮಟ್ಟವನ್ನು ‘ ಬಿ’ ಮತ್ತು ‘ಸಿ ‘ವರ್ಗಗಳೆಂದು ವರ್ಗೀಕರಿಸಲಾಗಿದೆ ಎಂದರು.
‘ಸಿ’ ‘ವರ್ಗದಲ್ಲಿ ಕುಡಿಯುವ ನೀರನ್ನು ಸಂಸ್ಕರಿಸಿ ಬಳಸಬೇಕು ಹಾಗೂ ‘ಬಿ ‘ವರ್ಗದಲ್ಲಿ ಸ್ನಾನ ಬಳಕೆಗೆ ನೀರನ್ನು ಬಳಸಬಹುದು ಎಂದು ಹೇಳಲಾಗಿದೆ . ಬಿಜೆಪಿ ಶಾಸಕ ಅಪ್ಪಚ್ಚುರಂಜನ್ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಂಜುನಾಥ್ ಮಾತನಾಡಿ, ಕಾವೇರಿ ನದಿ ಉಗಮ ಸ್ಥಳದಿಂದ ಕೆ ಆರ್ ಎಸ್ ವರೆಗೆ ಹಲವಾರು ಕಡೆ ಕಾವೇರಿ ನದಿ ನೀರು ಮಲಿನಗೊಳ್ಳುತ್ತಿದೆ . ಕಾವೇರಿ ನದಿಗೆ ಮಲಿನ ನೀರು ಹೋಗುತ್ತಿರುವ ಎಲ್ಲಾ ಸ್ಥಳಗಳಲ್ಲಿ ಮಲಿನ ನೀರನ್ನು ಸಂಸ್ಕರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕರುಗಳ ಒತ್ತಡಕ್ಕೆ ಸ್ಪಂದಿಸಿದ ಸಚಿವ ಸಿ.ಪಿ ಯೋಗೇಶ್ವರ್, ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಕಾವೇರಿ ನದಿ ನೀರು ಮಲಿನ ವಾಗುತ್ತಿರುವ ಎಲ್ಲಾ ಭಾಗಗಳಲ್ಲಿ ಮಲಿನ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದರು.
Key words: Kaveri River -water –polluted-Minister -CP Yogeshwar -promised