ಬೆಂಗಳೂರು,ಜುಲೈ,12,2024 (www.justkannada.in): ಬಿಎಂಟಿಸಿ (ಕಲ್ಯಾಣ ಕರ್ನಾಟಕ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ಶನಿವಾರ ಮತ್ತು ಭಾನುವಾರ (ಜುಲೈ 13, 14) ಕ್ಯಾಮರಾ ಕಣ್ಗಾವಲಿಯಲ್ಲಿ ಲಿಖಿತ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ.
ʼಬೆಂಗಳೂರು, ಕಲ್ಬುರ್ಗಿ, ಧಾರವಾಡ ಮತ್ತು ಬಳ್ಳಾರಿ ನಗರಗಳ ಒಟ್ಟು 22 ಕೇಂದ್ರಗಳ, 377 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಕ್ಯಾಮರಾ ಅಳವಡಿಸಿದ್ದು, ವೆಬ್ ಕ್ಯಾಸ್ಟಿಂಗ್ ಮೂಲಕ ಅಲ್ಲಿನ ಎಲ್ಲ ಬೆಳವಣಿಗೆಗಳನ್ನು ವೀಕ್ಷಿಸುವ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಮಾಡಲಾಗಿದೆʼ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ಶನಿವಾರ ಖುದ್ದು ಈ ಪ್ರಕ್ರಿಯೆಯನ್ನು ವೀಕ್ಷಿಸಲು ಕೆಇಎಗೆ ಬರಲಿದ್ದಾರೆ ಎಂದು ವಿವರಿಸಿದರು.
ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿದ್ದು, ಬೆಂಗಳೂರಿನ ಕೆಇಎ ಕಚೇರಿಯಲ್ಲಿ ರಾಜ್ಯ ಮಟ್ಟದ ಕಮಾಂಡ್ ಸೆಂಟರ್ ಸ್ಥಾಪಿಸಿದ್ದು, ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲಿ ಆಗುವ ಬೆಳವಣಿಗೆಗಳನ್ನು ಗಮನಿಸಲು ಟಿವಿಗಳನ್ನು ಅಳವಡಿಸಲಾಗಿದೆ. ಮೇಲ್ವಿಚಾರಣೆಗೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದರು.
ಪ್ರಶ್ನೆ ಪತ್ರಿಕೆ ಸ್ವೀಕಾರ ಮತ್ತು ಅದರ ಬಂಡಲ್ ತೆರೆಯುವ ಎಲ್ಲ ಪ್ರಕ್ರಿಯೆಯನ್ನೂ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಅಲ್ಲದೆ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಅವರ ಬೆರಳಚ್ಚು ಮತ್ತು ಭಾವಚಿತ್ರವನ್ನು ತೆಗೆದುಕೊಂಡು ಅಲ್ಲೇ ಅದನ್ನು ಅವರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಲಗತ್ತಿಸಿರುವ ಚಿತ್ರದ ಜತೆಗೂ ಆನ್ ಲೈನ್ ನಲ್ಲಿ ಹೊಂದಾಣಿಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹೀಗೆ ಮಾಡುವುದರಿಂದ ಯಾರದೊ ಹೆಸರಿನಲ್ಲಿ ಇನ್ಯಾರೊ ಪರೀಕ್ಷೆ ಬರೆಯುವುದನ್ನು ತಡೆಯಬಹುದು ಎಂದು ಹೇಳಿದರು.
ಇತ್ತೀಚೆಗೆ ನಡೆಸಿದ ಡಿಸಿಇಟಿ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಪ್ರಾಂಶುಪಾಲರ ಕಚೇರಿಯಲ್ಲಿನ ಬೆಳವಣಿಗೆಗಳನ್ನು ವೆಬ್ ಕಾಸ್ಟಿಂಗ್ ಮಾಡಿದ್ದು ಯಶಸ್ವಿಯಾದ ನಂತರ ಪರೀಕ್ಷೆ ನಡೆಯುವ ಕೊಠಡಿಯಿಂದಲೂ ವೆಬ್ ಕಾಸ್ಟಿಂಗ್ ಮಾಡಲು ತೀರ್ಮಾನಿಸಲಾಗಿದೆ. ಕಲ್ಬುರ್ಗಿ, ಧಾರವಾಡ ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿಯೂ ಒಂದೊಂದು ಉಪ ಕಮಾಂಡಿಂಗ್ ಸೆಂಟರ್ ಇದ್ದು, ಅಲ್ಲಿಯೂ ಮೇಲ್ವಿಚಾರಣೆ ನಡೆಸಲಾಗುತ್ತದೆ.
ಇದೇ ಮೊದಲ ಬಾರಿಗೆ ಬೇರೆ ಜಿಲ್ಲೆಗಳ ವಿಶೇಷ ವೀಕ್ಷಕರನ್ನೂ ನಿಯೋಜಿಸಿದ್ದು, ಅವರು ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಲಿದ್ದಾರೆ ಎಂದು ಅವರು ವಿವರಿಸಿದರು.
Key words: KEA, competitive exam, camera surveillance