ಬೆಂಗಳೂರು,ನವೆಂಬರ್,10,2022(www.justkannada.in): ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನವೆಂಬರ್ 11ರಂದು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುತ್ತಿದ್ದಾರೆ. ಮೊದಲಿನಿಂದ ಈವರೆಗೆ ಇದಕ್ಕೆ ಹೆಗಲು ಕೊಟ್ಟಿರುವವರೆಂದರೆ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ್ . ಈ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಸಂದರ್ಶನವಿದು.
ಈ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯ ಪರಿಕಲ್ಪನೆ ನಿಮ್ಮಲ್ಲಿ ಹುಟ್ಟಿಕೊಂಡಿದ್ದು ಹೇಗೆ?
ನಾವು ಮಾಡುವ ಪ್ರತಿಮೆ ಬೆಂಗಳೂರಿನ ಹೆಗ್ಗುರುತಾಗಬೇಕು ಎನ್ನುವ ಪರಿಕಲ್ಪನೆ ಇತ್ತು. ಹೀಗಾಗಿಯೇ 108 ಅಡಿ ಎತ್ತರದ ಈ ಪ್ರತಿಮೆ ಸ್ಥಾಪಿಸಿದ್ದು, ಅದು “ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರಿದೆ. ವಿಶ್ವದ ಯಾವುದೇ ನಗರವಿರಬಹುದು, ಅವುಗಳನ್ನು ಸ್ಥಾಪಿಸಿದವರ ಇಷ್ಟು ಎತ್ತರದ ಪ್ರತಿಮೆ ಎಲ್ಲೂ ಇಲ್ಲ. ಮೊದಲಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಯ್ತು. ಆಗ ಅಲ್ಲಿ ಕೆಂಪೇಗೌಡರ 15 ಅಡಿಯ ಪ್ರತಿಮೆ ಸ್ಥಾಪಿಸುವ ಯೋಚನೆ ಇತ್ತು. ಆದರೆ ಅದೇಕೋ ಮುಂದಕ್ಕೆ ಹೋಗಲಿಲ್ಲ. ಮೂರು ವರ್ಷಗಳ ಹಿಂದೆ ಬಿಜೆಪಿ ಸರಕಾರ ಬಂದಾಗ, ನಮ್ಮ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವ ಘೋಷಣೆ ಮಾಡಿ, ಇದರ ಹೊಣೆಯನ್ನು ನನಗೆ ವಹಿಸಿದರು. ಇದಕ್ಕೂ ಮೊದಲೇ ಕೆಂಪೇಗೌಡ ಪಾರಂಪರಿತ ತಾಣಗಳ ಅಭಿವೃದ್ಧಿ ಪ್ರಾಧಿಕಾರವಿತ್ತು. ಇದಕ್ಕೆ ಸಿಎಂ ಅಧ್ಯಕ್ಷರು. ನಾನು ರಾಮನಗರ ಜಿಲ್ಲಾ ಉಸ್ತುವಾರಿಯಾದ್ದರಿಂದ ಇದರ ಉಪಾಧ್ಯಕ್ಷ ಹುದ್ದೆ ಸಿಕ್ಕಿತು. ಹೀಗಾಗಿ, ಈ ಪ್ರತಿಮೆ ಸ್ಥಾಪನೆಯ ಹೊಣೆ ನನ್ನ ಹೆಗಲಿಗೆ ಬಂತಷ್ಟೆ.
ವಿಮಾನ ನಿಲ್ದಾಣದಲ್ಲಿ ಇಂತಹ ಪ್ರತಿಮೆ ಸ್ಥಾಪನೆಗೆ ಯಾವ ಅಡ್ಡಿಯೂ ಬರಲಿಲ್ಲವೇ? ಏಕೆಂದರೆ, ಇಂಥ ಕಡೆಗಳಲ್ಲಿ ಅನೇಕ ಸವಾಲುಗಳಿರುತ್ತವೆ ತಾನೇ?
ನೀವು ಹೇಳಿದ್ದು ನಿಜ. ಶುರುವಿನಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಇದರಿಂದ ವಿಮಾನಗಳ ಸುರಕ್ಷಿತ ಹಾರಾಟಕ್ಕೆ ಸಮಸ್ಯೆ ಆಗುತ್ತದೆ ಎಂದರು. ಅದು ನಿರೀಕ್ಷಿತವಾಗಿತ್ತು. ಆಗ ನಾನು ಈ ಆತಂಕ ನಿವಾರಿಸಿ, ಪ್ರತಿಮೆಯ ಮಹತ್ವ ಮನದಟ್ಟು ಮಾಡಿಕೊಟ್ಟೆ. ಆಗ ಅವರು ಕೆಂಪೇಗೌಡ ಥೀಮ್ ಪಾರ್ಕ್ಗೆಂದು 23 ಎಕರೆ ಜಮೀನು ಕೊಡಲು ಒಪ್ಪಿಗೆ ಕೊಟ್ಟರು. ಈಗ ಈ ಪಾರ್ಕಿನ ಅಭಿವೃದ್ಧಿ ನಡೆಯುತ್ತಿದ್ದು, 6-7 ತಿಂಗಳಲ್ಲಿ ಮುಗಿಯುವ ಭರವಸೆ ಇದೆ.
ಪ್ರತಿಮೆಯ ರೂಪುರೇಷೆ, ಅದರ ಆಕೃತಿ ಇದೆಲ್ಲ ಅಂತಿಮಗೊಂಡಿದ್ದು ಹೇಗೆ?
ಈ ನಿಟ್ಟಿನಲ್ಲಿ ನಮ್ಮ ಆಗಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು, ಬೇರೆಬೇರೆ ಕ್ಷೇತ್ರಗಳ ಪರಿಣತರೆಲ್ಲ ನೆರವು ನೀಡಿದ್ದಾರೆ. ಸಾಕಷ್ಟು ಚರ್ಚೆ ನಡೆಸಿ, ಒರೆಯಿಂದ ಖಡ್ಗವನ್ನು ಹೊರತೆಗೆಯುತ್ತಿರುವ ಭಂಗಿಯಲ್ಲಿ ಕೆಂಪೇಗೌಡರು ಕಾಣುವಂತಿರಬೇಕು ಅಂತ ತೀರ್ಮಾನಿಸಿದೆವು. ಇದಕ್ಕೊಂದು ಅರ್ಥವಿದೆ. ಇಲ್ಲಿ ಎತ್ತಿನ ಗಾಡಿಯ ಪರಿಕಲ್ಪನೆಗೆ ಮಹತ್ವ ಕೊಟ್ಟಿದ್ದೇವೆ. ಹಾಗೆಯೇ, ಲ್ಯಾಂಡ್ ಸ್ಕೇಪಿಂಗ್ ನಲ್ಲಿ ಕೆಂಪೇಗೌಡರು ಕಟ್ಟಿಸಿದ ಕೆರೆಕಟ್ಟೆಗಳ ದೃಶ್ಯಕ್ಕೆ ಒತ್ತಿದೆ. ಇಷ್ಟೆಲ್ಲ ಆದಮೇಲೆ, ದೆಹಲಿಗೆ ಸಮೀಪದ ನೋಯಿಡಾದಲ್ಲಿರುವ ಹೆಸರಾಂತ ಶಿಲ್ಪಿ ರಾಮ್ ಸುತಾರ್ ಅವರಿಗೇ ಈ ಪ್ರತಿಮೆಯ ಕೆಲಸ ವಹಿಸುವ ತೀರ್ಮಾನ ಆಯಿತು. ಗುಜರಾತಿನ ‘ಏಕತಾ ಪ್ರತಿಮೆ’, ಅಯೋಧ್ಯೆಯ ಶ್ರೀರಾಮ, ಮುದ್ದೇನಹಳ್ಳಿಯ ಈಶ್ವರ, ನಮ್ಮ ವಿಧಾನಸೌಧದ ಆವರಣದಲ್ಲಿರುವ ಗಾಂಧೀಜಿ ಮುಂತಾದ ಪ್ರತಿಮೆಗಳ ಶಿಲ್ಪಿ ಅವರು. ಇವರಿಗೆ ಬೇಕಾಗಿದ್ದ ತಾಂತ್ರಿಕ ಪರಿಣತಿಯನ್ನು ಆ ಕ್ಷೇತ್ರಗಳ ಪರಿಣತರಿಂದ ಒದಗಿಸಿದೆವು.
ಪ್ರತಿಮೆ ಸ್ಥಾಪನೆಯಲ್ಲಿ ನೀವು ವಹಿಸಿದ ಎಚ್ಚರಿಕೆಗಳು ಬೇರೆ ಏನೇನು?
ಪ್ರತಿಮೆಯ ಕೆಲಸ ಒಂದು ಕಡೆ ಆಗುತ್ತಿತ್ತು. ಆದರೆ, ಇದು ಪೂರ್ಣಗೊಂಡ ಮೇಲೆ ಸುಭದ್ರವಾಗಿ ಪ್ರತಿಷ್ಠಾಪಿಸುವ ಹೊಣೆ ಬರುತ್ತದೆ. ಏಕೆಂದರೆ ಜೋರಾದ ಗಾಳಿ, ಪ್ರಚಂಡ ಮಳೆ, ಭೂಕಂಪ ಇತ್ಯಾದಿಗಳು ನಮ್ಮನ್ನು ಹೇಳಿಕೇಳಿ ಬರುವುದಿಲ್ಲ. ಇಂತಹ ಸಂದರ್ಭದಲ್ಲೂ ಈ ಪ್ರತಿಮೆಗೆ ಮಾತ್ರ ಯಾವ ಧಕ್ಕೆಯೂ ಆಗದೆ ಅದು ವಿರಾಜಮಾನವಾಗಿರಬೇಕು ಅನ್ನುವುದು ನಮ್ಮ ಆಸೆಯಾಗಿತ್ತು. ಇದು 100 ಟನ್ ತೂಕದ ಕಂಚಿನ ಪ್ರತಿಮೆ! ಇದಕ್ಕೆ ಪೂರಕವಾಗಿ 120 ಟನ್ ಉಕ್ಕಿನಿಂದ ಉಷ್ಣತಾ ನಿರೋಧಕ ಕಟ್ಟೆ ನಿರ್ಮಿಸಿದ್ದೇವೆ. ಇದರ ಮೇಲೆ ತಲಾ ಒಂದು ಟನ್ ತೂಕದ ನಾಲ್ಕು ಉಬ್ಬುಶಿಲ್ಪಗಳಿವೆ. ಕೋವಿಡ್ ಸಾಂಕ್ರಾಮಿಕದ ಕಾಲದಲ್ಲೂ ಇದರ ಕೆಲಸ ಯಾವತ್ತೂ ನಿಲ್ಲದಂತೆ ನೋಡಿಕೊಳ್ಳಲಾಗಿದೆ.
ಇದೊಂದು ಬೃಹತ್ ವೆಚ್ಚದ ಯೋಜನೆ. ಇದಕ್ಕೆ ಹಣಕಾಸಿನ ಅಡಚಣೆಯೇನೂ ಎದುರಾಗಲಿಲ್ಲವೇ?
ಮೊದಲಿಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ಯೋಜನೆಗೆ 64 ಕೋಟಿ ರೂ. ವೆಚ್ಚವಾಗುತ್ತದೆಂದು ತೀರ್ಮಾನ ಮಾಡಿದೆವು. ಇದಾದಮೇಲೆ, ಯಾವತ್ತೂ ಹಣಕ್ಕೆ ಕಾಯುವ ಪರಿಸ್ಥಿತಿ ಬರಲಿಲ್ಲ. ಇದಕ್ಕೆ ಯಡಿಯೂರಪ್ಪ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಕಾಗುವುದಿಲ್ಲ.
ಸರಿ, ಈ ಥೀಮ್ ಪಾರ್ಕನ್ನು ಹೇಗೆ ಆಕರ್ಷಕ ತಾಣವಾಗಿ ಮಾಡಬೇಕೆಂಬ ಯೋಚನೆ ನಿಮ್ಮದು?
ಕೆಂಪೇಗೌಡರ ಹೆಸರಿನ ಈ ಥೀಮ್ ಪಾರ್ಕ್ ಪರಿಪೂರ್ಣವಾಗಿರಬೇಕು ಅನ್ನೋದು ನನ್ನ ಚಿಂತೆ. ನಾವಿಲ್ಲಿ ಮೆಟಾವರ್ಸ್ ತಂತ್ರಜ್ಞಾನವನ್ನು ಅಳವಡಿಸಲಿದ್ದೇವೆ. ಅಂದರೆ, ಇದು ವರ್ಚುಯಲ್ ಅನುಭವ ತಂದುಕೊಡುತ್ತದೆ. ಇದು ಲೇಸರ್ ಶೋಗಿಂತ ಚೆನ್ನಾಗಿರುತ್ತದೆ. ಮುಂದೆ ಮೆಟ್ರೋ ಸ್ಟೇಷನ್ ಕೂಡ ಇಲ್ಲೇ ಬರುತ್ತದೆ. ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳೂ ಈ ಪ್ರತಿಮೆ, ಥೀಮ್ ಪಾರ್ಕ್ ಮೂಲಕವೇ ಹಾದು ಹೋಗುವಂತೆ ಮಾಡಲಾಗುವುದು. ಪ್ರತಿಮೆಯಂತೂ ವಿಮಾನಗಳು ಟೇಕಾಫ್/ಲ್ಯಾಂಡಿಂಗ್ ಆಗುವಾಗ ಕಣ್ಣಿಗೆ ಕಾಣುವಂತಹ ಸ್ಥಳದಲ್ಲಿದೆ.
ಈ ಪ್ರತಿಮೆಯನ್ನು ಕೇಂದ್ರವಾಗಿ ಇಟ್ಟುಕೊಂಡು ಒಂದು ಪ್ರವಾಸಿ ಸರ್ಕ್ಯೂಟ್ ಮಾಡೋ ಆಲೋಚನೆ ಏನಾದರೂ ಇದೆಯೇ?
ಹೌದು, ಇಂಥ ಒಂದು ಚಿಂತನೆ ಇದೆ. ಬೆಂಗಳೂರಿನ ಸುತ್ತಮುತ್ತ ದೇವರಾಯನ ದುರ್ಗ, ಸಾವನದುರ್ಗ, ಹುಲಿಯೂರುದುರ್ಗ, ಭೈರವದುರ್ಗ ಹೀಗೆ ಒಂಬತ್ತು ದುರ್ಗಗಳಿವೆ. ಇವೆಲ್ಲ ನಿಸರ್ಗ ರಮ್ಯ ತಾಣಗಳು. ಇಲ್ಲಿ ಟ್ರೆಕ್ಕಿಂಗ್, ಹಾಯ್ಕಿಂಗ್, ಪ್ಯಾರಾ ಗ್ಲೈಡಿಂಗ್ ಮುಂತಾದ ಸಾಹಸಕ್ರೀಡೆಗಳಿಗೆ ಒಳ್ಳೆಯ ಅವಕಾಶಗಳಿವೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ರಾಮನಗರದಲ್ಲಿ ಇತ್ತೀಚೆಗೆ ಪ್ರವಾಸೋದ್ಯಮ ಶೃಂಗಸಭೆ ಏರ್ಪಡಿಸಲಾಗಿತ್ತು. ಬೆಂಗಳೂರಿನ ಜನ, ನಮ್ಮ ಶಾಲಾಕಾಲೇಜುಗಳ ಮಕ್ಕಳು, ವಿದೇಶೀಯರು ಹೀಗೆ ಎಲ್ಲರೂ ಈ ತಾಣಗಳಿಗೆ ಬರುವಂತಾಗಬೇಕು. ಆದರೆ ಇದು ಹಂತಹಂತವಾಗಿ ಆಗುವ ಕೆಲಸ.
ನೀವು ಉಪಾಧ್ಯಕ್ಷರಾಗಿರುವ ಪ್ರಾಧಿಕಾರದ ಮುಂದೆ ಇನ್ನೂ ಏನೇನು ಯೋಜನೆಗಳಿವೆ?
ಕೆಂಪೇಗೌಡರ ಬಗ್ಗೆ ಆಳವಾದ ಅಧ್ಯಯನ ಆಗಬೇಕಾಗಿದೆ. ಅದಕ್ಕೆ ಈ ಪ್ರತಿಮೆ ಒಂದು ಪ್ರೇರಣೆ ಆಗಬೇಕು. ಅವರು ಐದು ಶತಮಾನಗಳ ಹಿಂದೆ ಬೆಂಗಳೂರನ್ನು ವ್ಯವಸ್ಥಿತವಾಗಿ ಕಟ್ಟಿದರು. ಇಲ್ಲಿ ಕೆರೆಕಟ್ಟೆಗಳು, ದೇವಸ್ಥಾನಗಳು, ಕರಗ, ಪರಿಷೆ ಇವೆಲ್ಲ ಅವರಿಂದ ಬಂತು. ಹಾಗೆಯೇ, ನಾಣ್ಯವನ್ನು ಚಲಾವಣೆಗೆ ತಂದರು. ಕೋಟೆ ಕಟ್ಟಿದರು. ಅವರಿಗೆ ವಿಜಯನಗರದ ಅರಸರ ಮಾರ್ಗದರ್ಶನವಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರ ಮಾಡುತ್ತಿದ್ದು, ಇದಕ್ಕೆ 50 ಕೋಟಿ ರೂ. ಒದಗಿಸಿದ್ದೇವೆ.
ಪ್ರತಿಮೆ, ಥೀಮ್ ಪಾರ್ಕ್ ಇವೆಲ್ಲ ಒಳ್ಳೆಯದೇ. ಆದರೆ ಇವು ಕ್ರಮೇಣ ಜನರ ಮನಸ್ಸಿನಲ್ಲಿ ಉಳಿಯುವುದೇ ಇಲ್ಲ. ಆದ್ದರಿಂದ ಇವನ್ನೆಲ್ಲ ಈಗಿನ ಪೀಳಿಗೆಯ ಜತೆ ಬೆಸೆಯುವುದು ಹೇಗೆ?
ಇದು ಒಂದು ಸವಾಲು. ಈಗ ಎಲ್ಲರೂ ಎಲ್ಲವನ್ನೂ ಪ್ರಾಯೋಗಿಕ ದೃಷ್ಟಿಯಿಂದ ನೋಡುತ್ತಾರೆ. ಇದನ್ನು ನಾವು ಪರಿಗಣಿಸಬೇಕು. ಹೀಗಾದರೆ, ವಾಸ್ತುಶಿಲ್ಪದ ವಿದ್ಯಾರ್ಥಿಗಳಿಗೆ ಇದನ್ನು ಕಲಿಕೆಯ ದೃಷ್ಟಿಯಿಂದ ತೋರಿಸಬೇಕು; ಟೌನ್ ಪ್ಲ್ಯಾನಿಂಗ್ ವಿದ್ಯಾರ್ಥಿಗಳೂ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಹಾಗೆಯೇ ಒಬ್ಬ ಪ್ರವಾಸಿ ಗೈಡ್ ಗೆ ಕೆಂಪೇಗೌಡರ ಬಗ್ಗೆ ಮಾಹಿತಿ ಕೊಡಬಹುದು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಈಗ ಜಾರಿಗೆ ಬರುತ್ತಿದ್ದು, ಇವೆಲ್ಲ ಸಾಧ್ಯವಾಗಲಿದೆ. ಬೆಂಗಳೂರಿನಲ್ಲಿ ಏನಿಲ್ಲವೆಂದರೂ 30-35 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಇದನ್ನೆಲ್ಲ ದಾಟಿಸಬೇಕು. ಜೊತೆಗೆ ಈ ಯೋಜನೆ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಹಾಗೆಯೇ ಬೆಂಗಳೂರಿನ ಆಯ್ದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆಂಪೇಗೌಡರ ಕಾಲದ ನಿರ್ಮಿತಿಗಳ ವಾಸ್ತುಶಿಲ್ಪ ಪರಿಕಲ್ಪನೆ ಕುರಿತೇ ಪಠ್ಯಕ್ರಮ ರೂಪಿಸಬಹುದು.
ಪ್ರತಿಮೆ ಲೋಕಾರ್ಪಣೆಯ ಭಾಗವಾಗಿ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ನಡೆಸಿದಿರಿ. ಇದರ ಉದ್ದೇಶವೇನು?
ಇಡೀ ಕರ್ನಾಟಕದಲ್ಲಿ ನಾವೆಲ್ಲರೂ ಒಂದು ಎನ್ನುವ ಭಾವನೆಯನ್ನು ಮೂಡಿಸುವುದಷ್ಟೇ ಇದರ ಹಿಂದಿದ್ದ ಸದುದ್ದೇಶ. ಮೊದಲಿಗೆ, ಏಕತಾ ಪ್ರತಿಮೆಗೆ ಮಾಡಿದಂತೆ ಎಲ್ಲಾ ಕಡೆಗಳಿಂದಲೂ ಕಬ್ಬಿಣ ಸಂಗ್ರಹಿಸುವ ಉದ್ದೇಶವಿತ್ತು. ಆದರೆ, ಕೋವಿಡ್ ಪರಿಸ್ಥಿತಿ ಅದಕ್ಕೆ ಅವಕಾಶ ಕೊಡಲಿಲ್ಲ. ಆಮೇಲೆ, ಜಲ ಸಂಗ್ರಹಣೆಯ ಚಿಂತನೆ ಬಂತು. ಆದರೆ, ಅದು ಪ್ರಾಯೋಗಿಕವಾಗಿ ಕಷ್ಟ ಅಂತ ಕೈಬಿಟ್ಟೆವು. ಕೊನೆಗೆ, ಪವಿತ್ರ ಮೃತ್ತಿಕೆ ಸಂಗ್ರಹ ಸೂಕ್ತವೆನ್ನುವ ತೀರ್ಮಾನಕ್ಕೆ ಬಂದೆವು. ಇದರಿಂದ ಕರ್ನಾಟಕದ ಬಗ್ಗೆ ಒಂದು ಭೂಮವಾದ ಕಲ್ಪನೆ ಬರಲಿದೆ.
ಈ ಯೋಜನೆಯಲ್ಲಿ ನಿಮಗೆ ಯಾರ್ಯಾರು ಸಹಕರಿಸಿದರು?
ರಾಜ್ಯದ ಎಲ್ಲರ ಸಹಕಾರ, ಮಾರ್ಗದರ್ಶನ ಸಿಕ್ಕಿದೆ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು, ಶ್ರೀ ನಂಜಾವಧೂತ ಸ್ವಾಮಿಗಳು, ಶ್ರೀ ಚಂದ್ರಶೇಖರನಾಥ ಸ್ವಾಮೀಜಿಗಳು ಸೇರಿದಂತೆ ನಾಡಿನ ಎಲ್ಲರ ಸಹಕಾರ ಬೆಂಬಲ ಸಿಕ್ಕಿದೆ. ಇದರಿಂದಾಗಿಯೇ ಈ ಕೆಲಸಕ್ಕೆ ಒಂದು ಮಾನ್ಯತೆ ಸಿಕ್ಕಿ, ಜನರೊಂದಿಗೆ ಸಂಪರ್ಕ ಸಾಧ್ಯವಾಯಿತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಈ ಕೆಲಸ ಮಾಡಿದ್ದೇವೆ.
Key words: Kempegowda- statue – new landmark – Bangalore-minister-Ashwath Narayan