ಬಂಡೀಪುರ: ಮತ್ತೆ ಕಿರಿಕಿರಿ ಆರಂಭಿಸಿದ ಕೇರಳಾ ಸಿಎಂ

ಹೊಸದಿಲ್ಲಿ, ಆಗಸ್ಟ್ 25, 2019 (www.justkannada.in): ಬಂಡೀಪುರ ರಾಷ್ಟ್ರೀಯ ಉದ್ಯಾನ ಮೂಲಕ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲಿವೇಟೆಡ್‌ ರಸ್ತೆ ನಿರ್ಮಾಣ ಮಾಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವಡೇಕರ್‌ ಅವರಿಗೆ ಶನಿವಾರ ಪತ್ರ ಬರೆದಿರುವ ಕೇರಳಾ ಸಿಎಂ, ‘ಯೋಜನೆಗೆ ಖರ್ಚಾಗುವ ಹಣದಲ್ಲಿ ಅರ್ಧ ವೆಚ್ಚವನ್ನು ಕೇರಳ ಸರ್ಕಾರ ಭರಿಸಲಿದೆ’ ಎಂದು ವಿವರಿಸಿದ್ದಾರೆ.

‘ಈ ಮಾರ್ಗದಲ್ಲಿ ರಾತ್ರಿ ವಾಹನಗಳ ಸಂಚಾರ ನಿರ್ಬಂಧಿಸಿದ್ದರಿಂದ ವಯನಾಡ್‌, ಕೋಯಿಕ್ಕೋಡ್‌ ಹಾಗೂ ಮಲಪ್ಪುರಂ ಜಿಲ್ಲೆಯ
ಜನರು ತೊಂದರೆ ಅನುಭವಿಸುವಂತಾಗಿದೆ. ಪರ್ಯಾಯ ರಸ್ತೆ ಮೂಲಕ ಮೈಸೂರಿಗೆ ಸಂಚರಿಸಿದರೆ, ಪ್ರಯಾಣಿಸುವ ಅಂತರ 40 ಕಿ.ಮೀ.ನಷ್ಟು ಹೆಚ್ಚಾಗಲಿದೆ. ಹೀಗಾಗಿ ಎಲಿವೇಟೆಡ್‌ ರಸ್ತೆ ನಿರ್ಮಾಣ ಅಗತ್ಯ’ ಎಂದು ವಿಜಯನ್‌ ಪತ್ರದಲ್ಲಿ ವಿವರಿಸಿದ್ದಾರೆ.