ಬೆಂಗಳೂರು, ಸೆ.29, 2021 🙁 www.justkannada.in news ) ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಮಂತ್ರಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಧನ್ಯವಾದ ತಿಳಿಸಿದ್ದಾರೆ.
ಯದುವಂಶದ ಮಹಾರಾಜರುಗಳು ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ಪಸರಿಸಲು ಆ ಮೂಲಕ ನಾಡಿನ ಹಿರಿಮೆಯನ್ನು ಎತ್ತಿ ಹಿಡಿಯಲು ಪ್ರಾರಂಭಿಸಿದ ದಸರಾ ಸರಿಸುಮಾರು 400 ವರ್ಷಗಳನ್ನು ಕಳೆದರೂ ತನ್ನ ವೈಭವವನ್ನು ಕಳೆದುಕೊಂಡಿಲ್ಲ.
ಪ್ರಥಮವಾಗಿ ವಿಜಯನಗರದ ಸಾಮ್ರಾಟ ಕೃಷ್ಣದೇವರಾಯರ ಕಾಲದಲ್ಲಿ ಪ್ರಾರಂಭಗೊಂಡ ದಸರಾ ಶ್ರೀ ರಾಜ ಒಡೆಯರ್ರವರ ಕಾಲದಲ್ಲಿ ಮೈಸೂರು ಸಾಮ್ರಾಜ್ಯಕ್ಕೆ ವಿಸ್ತರಿಸಿ ಇಂದಿಗೂ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸುತ್ತಿದೆ. ರಾಜಪ್ರಭುತ್ವದ ನಂತರ ಬಂದ ಪ್ರಜಾ ಸರ್ಕಾರಗಳು ದಸರಾ ಆಚರಣೆಗೆ ಕಿಂಚಿತ್ತೂ ಚ್ಯುತಿ ಬರದ ಹಾಗೆ ಆಚರಿಸುತ್ತ ಬಂದಿರುವುದು ನಾಡಿನ ಹಿರಿಮೆಯನ್ನು ಎತ್ತಿ ಹಿಡಿದಿದೆ.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ರವರ ದೂರ ದೃಷ್ಟಿಯಿಂದ ಪ್ರತಿಷ್ಠಾಪನೆಗೊಂಡ ರೈತಾಪಿ ವರ್ಗವೆ ಆರ್ಥಿಕವಾಗಿರುವ ಮಂಡ್ಯ ಜಿಲ್ಲೆಯಿಂದ ಬಂದ ನಾನು ಈ ಬಾರಿ ದಸರಾ ಉದ್ಘಾಟಿಸುತ್ತಿರುವುದು ನನ್ನ ಬಾಳಿನ ಸುದೈವ.
ತಾಯಿ ಚಾಮುಂಡೇಶ್ವರಿ ಮನುಕುಲಕ್ಕೆ ಬಂದಿರುವ ಕೊರೋನಾ ಮಹಾ ಮಾರಿಯಿಂದ ಮುಕ್ತಿಗೊಳಿಸಿ ನಾಡು ತಮ್ಮ ನೇತೃತ್ವದಲ್ಲಿ ಮತ್ತೆ ಅಭಿವೃದ್ಧಿಯೆಡೆಗೆ ಮುನ್ನಡೆಯಲಿ ಎಂದು ಎಸ್.ಎಂ.ಕೃಷ್ಣ ಆಶಿಸಿದ್ದಾರೆ ಹಾಗೂ ದಸರಾ ಉದ್ಘಾಟನೆಗೆ ಅವಕಾಶ ನೀಡಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಗೆ ಧನ್ಯವಾದ:
ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರನ್ನಾಗಿ ರಾಜ್ಯ ಸರ್ಕಾರ ಅವಕಾಶ ನೀಡಿದ್ದಕ್ಕೆ ಸಹಕಾರ ಸಚಿವರು ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಧನ್ಯವಾದ ತಿಳಿಸಿದ್ದಾರೆ.
ಎಸ್.ಟಿ. ಸೋಮಶೇಖರ್ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಆ ಭಾಗದ ಜನರ ಜೊತೆ ಬೆರೆತು ಕಳೆದ ಒಂದೂವರೆ ವರ್ಷದಲ್ಲಿ ಹಲವು ಜನಪರ ಕೆಲಸಗಳ ಮೂಲಕ ಮನೆಮಾತಾಗಿದ್ದಾರೆ.
ಕೋವಿಡ್ ಸಂಕಷ್ಟ ಸಮಯದಲ್ಲಿ ಜನರ ನೋವಿಗೆ ಸ್ಪಂದಿಸುವ ಜೊತೆಗೆ 127 ವರ್ಷದ ಮೈಸೂರು ಮೃಗಾಲಯದಲ್ಲಿ 1400ಕ್ಕೂ ಹೆಚ್ಚು ಪ್ರಾಣಿಗಳಿದ್ದು ಇವುಗಳ ಆಹಾರಕ್ಕಾಗಿ ತಾವು ಮತ್ತು ದಾನಿಗಳಿಂದ 3 ಕೋಟಿ 75 ಲಕ್ಷ ರೂ. ಸಂಗ್ರಹಿಸಿ ನೀಡಿರುವುದನ್ನು ಗಮನಿಸಿದ್ದೇನೆ. ಪ್ರಾಣಿಗಳ ರಕ್ಷಣೆ ವಿಷಯದಲ್ಲಿ ತಾವು ತೋರಿದ ಬದ್ಧತೆ ಇತಿಹಾಸದಲ್ಲಿ ದಾಖಲಾಗಿದೆ.
ಮುಖ್ಯಮಂತ್ರಿಗಳ ಕೊರೋನಾ ವೈದ್ಯಕೀಯ ಪರಿಹಾರ ನಿಧಿಗೆ ಅತಿಹೆಚ್ಚು ದೇಣಿಗೆಯನ್ನು ಸಹಕಾರ ಸಂಘ ಸಂಸ್ಥೆಗಳಿಂದ (ಸುಮಾರು 65 ಕೋಟಿ ರೂ.) ಸಂಗ್ರಹಿಸಿ ನೀಡಿರುವುದು ದಾಖಲೆಯಾಗಿ ಉಳಿದಿರುವುದನ್ನು ಮಾಧ್ಯಮಗಳ ಮೂಲಕ ನೋಡಿದ್ದೇವೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ನಾಡ ದಸರಾಗೆ ನನ್ನನ್ನು ಆಹ್ವಾನಿಸಿರುವ ತಮ್ಮ ಹೃದಯ ವೈಶಾಲ್ಯತೆಗೆ ನಾನು ಆಭಾರಿಯಾಗಿದ್ದೇನೆ. ನಾಡಿದ ದಸರಾ ಯಶಸ್ವಿಯಾಗಿ ಜರುಗಿ ಜನರ ಸಂಕಷ್ಟಗಳು ದೂರವಾಗಿ ಸಾಂಸ್ಕೃತಿಕ ಜಾತ್ರೆ ಯಶಸ್ಸು ಕಾಣಲು ತಾಯಿ ಚಾಮುಂಡೇಶ್ವರಿ ತಮಗೆ ಶಕ್ತಿ ನೀಡಲಿ ಎಂದು ಎಸ್.ಎಂ.ಕೃಷ್ಣ ಆಶಿಸಿದ್ದಾರೆ.
key words : Mysore-dasara-inauguration-s.m.krishna-letter-to-cm-minister