ಬೆಂಗಳೂರು:ಆ-1:(www.justkannada.in) ಕೆಜಿಎಫ್-2 ಚಿತ್ರದ ಬಳಿಕ ರಾಕಿಂಗ್ ಸ್ಟಾರ್ ಯಶ್ ಯಾವ ಚಿತ್ರವನ್ನು ಮಾಡಲಿದ್ದಾರೆ ಎಂಬ ಅಭಿಮಾನಿಗಳ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಹೌದು. ಕೆಜಿಎಫ್ ಬಳಿಕ ನಂತರ ಯಶ್, ಟಾಲಿವುದ್ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪುರಿ ಜಗನ್ನಾಥ್ ನಿರ್ದೇಶನದ ’ಜನ ಗಣ ಮನ’ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ. ವರ್ಷದ ಹಿಂದೆ ‘ಪ್ರಿನ್ಸ್’ ಮಹೇಶ್ ಬಾಬು ಅವರಿಗಾಗಿ ಈ ಕಥೆಯನ್ನು ಪುರಿ ಹೇಳಿದ್ದರು. ಆದರೆ, ಮಹೇಶ್ ಬಾಬು ಇದನ್ನು ರಿಜೆಕ್ಟ್ ಮಾಡಿದ್ದರಂತೆ. ಈಗ ಇದೇ ಕಥೆಯನ್ನು ಪುರಿ ಜಗನ್ನಾಥ್ ಯಶ್ ಅವರಿಗೆ ಹೇಳಿದ್ದಾರಂತೆ. ಎಲ್ಲ ಭಾಷೆಗೂ ಅನ್ವಯ ಆಗುವಂತೆಯೇ ‘ಜನ ಗಣ ಮನ’ ಕಥೆ ಬರೆಯಲಾಗಿದೆಯಂತೆ. ಅದಕ್ಕಾಗಿ ಯಶ್ ಅವರನ್ನೇ ಸಂಪರ್ಕ ಮಾಡಿ, ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಭಾರತದಲ್ಲಿನ ಕೊಲೆ, ಅತ್ಯಾಚಾರ ಅಂಶಗಳನ್ನೇ ಗಮನದಲ್ಲಿಟ್ಟುಕೊಂಡು ಈ ಸ್ಕ್ರಿಪ್ಟ್ ಸಿದ್ಧವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಎರಡು ಬಾರಿ ಯಶ್ ಅವರನ್ನು ನಿರ್ದೇಶಕರು ಭೇಟಿ ಮಾಡಿ, ರ್ಚಚಿಸಿದ್ದಾರೆ. ಶೀಘ್ರದಲ್ಲೇ ಇನ್ನೊಮ್ಮೆ ಅಂತಿಮ ಮಾತುಕತೆ ನಡೆಸಲಿದ್ದಾರೆ’ ಎಂದು ಆಪ್ತ ಮೂಲಗಳು ತಿಳಿಸಿವೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧಗೊಳ್ಳಲಿರುವ ಈ ಸಿನಿಮಾವನ್ನು ನಂತರ ತಮಿಳು, ಹಿಂದಿಗೆ ಡಬ್ ಮಾಡಲು ಪ್ಲಾ್ಯನ್ ಮಾಡಲಾಗಿದೆಯಂತೆ.
ಕನ್ನಡಕ್ಕೆ ಪುರಿ ಜಗನ್ನಾಥ್ಗೂ ಇರುವ ನಂಟು ಹೊಸದೇನಲ್ಲ. 2001ರಲ್ಲಿ ಶಿವರಾಜ್ಕುಮಾರ್ ನಟನೆಯ ‘ಯುವರಾಜ’ ಚಿತ್ರಕ್ಕೆ ಅವರು ನಿರ್ದೇಶನ ಮಾಡಿದ್ದರು. ಆನಂತರ ಪುನೀತ್ ರಾಜ್ಕುಮಾರ್ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿದ್ದ ‘ಅಪು್ಪ’ ಚಿತ್ರಕ್ಕೂ ಆಕ್ಷನ್-ಕಟ್ ಹೇಳಿದ್ದರು. ಆಮೇಲೆ ಸ್ಯಾಂಡಲ್ವುಡ್ನಿಂದ ಬ್ರೇಕ್ ಪಡೆದುಕೊಂಡ ಪುರಿ, 15 ವರ್ಷಗಳ ನಂತರ ‘ರೋಗ್’ ಚಿತ್ರ ನಿರ್ದೇಶಿಸುವುದರ ಮೂಲಕ ಕನ್ನಡಕ್ಕೆ ಮರಳಿದ್ದರು. ಸದ್ಯ ಯಶ್-ಪುರಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದ್ದಂತೆಯೇ ಅಭಿಮಾನಿ ವಲಯದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಉಂಟಾಗಿದೆ.