ಮೈಸೂರು, ಆ.05,2024: (www.justkannada.in news) ಖಾದಿ ಗ್ರಾಮೋದ್ಯೋಗ ಆಯೋಗದಿಂದ ಮಾನ್ಯತೆ ಪಡೆದ ಕರ್ನಾಟಕ ಸರ್ವೋದಯ ಸಂಘದ ಮಾರಾಟ ಮಳಿಗೆಯಾದ ಖಾದಿ ವಸ್ತ್ರಾಲಯವು ಮೈಸೂರಿನ ಕುವೆಂಪು ನಗರದ ನ್ಯೂ ಕಾಂತರಾಜ ಅರಸ್ ರಸ್ತೆಯ ಅಕ್ಷಯ ಭಂಢಾರದ ಸಮೀಪ ಎಸ್ ಬಿ ಐ ಎಟಿಎಂ ಬಳಿ ಇದೆ.
ವಿದ್ಯಾರ್ಥಿ ನಿಲಯದ ಮಕ್ಕಳ ಉಪಯೋಗಕ್ಕಾಗಿ ಮ್ಯಾಟ್ (ಬಟ್ಟೆಯ ಪುಟ್ಟ ಚಾಪೆ) ಖರೀದಿಸಲು 02.08.2024 ರ ಶುಕ್ರವಾರ ಮೈಸೂರಿನ ಕುವೆಂಪುನಗರದ ನ್ಯೂ ಕಾಂತರಾಜ ಅರಸ್ ರಸ್ತೆಯ ಎಸ್ ಬಿ ಐ ಎಟಿಎಂ ಬಳಿ ಇರುವ ಖಾದಿ ವಸ್ತ್ರಾಲಯಕ್ಕೆ ಹೋಗಿ ವಿಚಾರಿಸಿದೆ.ಉತ್ತಮ ಗುಣಮಟ್ಟದ ಕಾಟನ್ ಮ್ಯಾಟ್ ಅಲ್ಲಿತ್ತು.ಮ್ಯಾಟ್ ಒಂದಕ್ಕೆ ರೂ. 190/- ಬೆಲೆ ಇತ್ತು.ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 5.08.2024ರ ಸೋಮವಾರದಿಂದ 30% ರಿಯಾಯತಿ ಇದೆ ಎಂದು ಅಲ್ಲಿನ ಸಿಬ್ಬಂದಿ ಜೊನಾಥನ್ ಕುಮಾರ್ ತಿಳಿಸಿದರು.
22 ಮ್ಯಾಟುಗಳನ್ನು ಖರೀದಿಸಲು ಒಪ್ಪಿ ನಾನು ಸೋಮವಾರವೇ ಬರುವುದಾಗಿ ಹೇಳಿದೆ.
ನೀವು ಈಗ 21 ಮ್ಯಾಟುಗಳನ್ನು ತೆಗೆದುಕೊಂಡು ಹೋಗಿ.ನಾನು ಸೋಮವಾರ ಬಿಲ್ ಮಾಡಿ ನಿಮಗೆ ರಸೀತಿ ನೀಡುತ್ತೇನೆ ಎಂದರು ಜೊನಾಥನ್ ಕುಮಾರ್. ಅದರಂತೆ ನಾನು 21 ಮ್ಯಾಟಿಗೆ ರೂ 3990/- ಕ್ಕೆ 30% ರಿಯಾಯಿತಿಯಂತೆ ರೂ. 2783/- ನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿದೆ.ರಸೀದಿ ಪಡೆಯಲು ಸೋಮವಾರ ಬರುವುದಾಗಿ ತಿಳಿಸಿ 21 ಮ್ಯಾಟುಗಳನ್ನು ಕೊಂಡುಹೋದೆ.
ಮಾರನೆಯ ದಿನ ಖಾದಿ ವಸ್ತ್ರಾಲಯದ ಜೊನಾಥನ್ ನನಗೆ ಕರೆ ಮಾಡಿದರು.”30% ಬದಲಾಗಿ 35% ರಿಯಾಯಿತಿ ನೀಡಲಾಗುವುದು ಎಂದು ಮುಖ್ಯ ಕಚೇರಿಯಿಂದ ಸೂಚನೆ ಬಂದಿರುವುದರಿಂದ ನೀವು ಖರೀದಿಸಿದ ಮ್ಯಾಟುಗಳಿಗೆ 35% ರಿಯಾಯಿತಿಯೊಂದಿಗೆ ಬಿಲ್ ತಯಾರಿಸಿರುವುದಲ್ಲದೆ ರಿಯಾಯಿತಿಯ ಉಳಿಕೆ ಮೊತ್ತ 200 ರೂಪಾಯಿಗಳನ್ನು ನಿಮಗೆ ಗೂಗಲ್ ಪೇ ಮೂಲಕ ಮರಳಿಸಲಾಗಿದೆ” ಎಂದು ನನಗೆ ತಿಳಿಸಿದರು.ಸೋಮವಾರ ಬಂದು ಬಿಲ್ ಪಡೆದುಕೊಳ್ಳುವಂತೆಯೂ ಹೇಳಿದರು.
ಸತ್ಯ,ನಿಷ್ಠೆ, ಪ್ರಾಮಾಣಿಕತೆ ಇರುವ ವ್ಯಾಪಾರಿ ಮಳಿಗೆಗಳು ಈಗಲೂ ಇವೆಯಲ್ಲಾ ಎಂಬ ಸಮಾಧಾನ ಉಂಟಾಯಿತು.
ಸಾರ್ವಜನಿಕರ ಹಣವನ್ನು ನುಂಗಿ ನೀರು ಕುಡಿಯುವ ನಿಗಮ,ಪ್ರಾಧಿಕಾರಗಳ ಹಗರಣಕೋರರ ಮಧ್ಯದಲ್ಲಿ ಖಾದಿ ವಸ್ತ್ರಾಲಯದಂತಹ ಸಾಮಾನ್ಯ ಮಳಿಗೆಯ ಸಿಬ್ಬಂದಿಯ ನಿಯತ್ತು,ಪ್ರಾಮಾಣಿಕತೆಯು ಸಮಾಜದಲ್ಲಿ ಒಳ್ಳೆಯ ಭರವಸೆಯನ್ನು ಮೂಡಿಸುತ್ತಿದೆ.
ಖಾದಿ ವಸ್ತ್ರಾಲಯದಂತಹ ಸಾಮಾನ್ಯ ಮಳಿಗೆಯ ಸಿಬ್ಬಂದಿಯ ನಿಯತ್ತು,ಪ್ರಾಮಾಣಿಕತೆ ನಿಷ್ಠೆಯು ನಮ್ಮ ಪ್ರಾಧಿಕಾರಗಳು ಹಾಗೂ ನಿಗಮಗಳ ಅಕ್ರಮಾದಿತ್ಯರ ಕಣ್ತೆರೆಸಬಲ್ಲದೇ?
- ಪಿ.ಜೆ.ರಾಘವೇಂದ್ರ ನ್ಯಾಯವಾದಿ ಮೈಸೂರು
key words: Honesty, is a reality, in ‘Khadi Vastralaya’, in Mysuru.