ಬೆಂಗಳೂರು, ಅಕ್ಟೋಬರ್ 21, 2021 (www.justkannada.in): ಕರ್ನಾಟಕ ಮಾಹಿತಿ ಆಯೋಗದಲ್ಲಿ (ಕೆಐಸಿ) ಬಾಕಿ ಉಳಿದುಕೊಂಡಿರುವ ಪ್ರಕರಣಗಳ ಸಂಖ್ಯೆ 30,000 ದಾಟಿದ್ದು, ಇದು 15 ವರ್ಷಗಳ ಹಿಂದೆ ಆಯೋಗ ಸ್ಥಾಪನೆಯಾದಾಗಿನಿಂದ ಈವರೆಗಿನ ಅತೀ ಹೆಚ್ಚಿನ ಸಂಖ್ಯೆಯ ಬಾಕಿ ಉಳಿದಿರುವ ಪ್ರಕರಣಗಳು ಎನ್ನಲಾಗಿದೆ.
ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿಯಲ್ಲಿ ಶೇ.೫೦ರಷ್ಟು ಇಳಿಕೆಯಾಗಿದೆ. ಆಯೋಗದ ವತಿಯಿಂದ ಬೇಗನೆ ಪರಿಹಾರ ದೊರಕುವ ವಿಶ್ವಾಸವಿಲ್ಲದ ಕಾರಣದಿಂದಾಗಿ ಕೆಲವು ಆರ್ಟಿಐ ಕಾರ್ಯಕರ್ತರು ಮನವಿ ಅರ್ಜಿಗಳನ್ನು ಸಲ್ಲಿಸುವುದನ್ನೇ ನಿಲ್ಲಿಸಿದ್ದಾರೆ.
ಮುಖ್ಯ ಆಯುಕ್ತರನ್ನು ಒಳಗೊಂಡಂತೆ 11 ಪೀಠಗಳನ್ನು ಹೊಂದಿರುವಂತಹ ಕೆಐಸಿ ಕಳೆದ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಪ್ರತಿ ದಿನ 50 ಪ್ರಕರಣಗಳ ವಿಚಾರಣೆಯನ್ನು ನಡೆಸುತಿತ್ತು. ಆದರೆ ಆ ಸಂಖ್ಯೆ ಈಗ 20 ರಿಂದ 30ಕ್ಕೆ ಇಳಿದಿದೆ. ದಾಖಲೆಗಳೇ ಹೇಳುವಂತೆ ಮುಖ್ಯ ಆಯುಕ್ತರೇ ಸ್ವತಃ ಒಂದು ತಿಂಗಳಲ್ಲಿ ಕೇವಲ 400 ಪ್ರಕರಣಗಳನ್ನು ವಿಲೇವಾರಿ ಮಾಡುತ್ತಿರುವುದಾಗಿ ತಿಳಿಸುತ್ತದೆ. ಉಳಿದ ಪೀಠಗಳ ಪೈಕಿ ಮೂರು ಖಾಲಿಯಿದ್ದು, ಮಾಸಿಕ ಕೇವಲ 100 ರಿಂದ 200 ಪ್ರಕರಣಗಳನ್ನು ಮಾತ್ರ ಪೂರ್ಣಗೊಳಿಸುತ್ತಿವೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದುಕೊಂಡು, ಸಾವಿರಾರು ಆರ್ಟಿಐ ಕಾರ್ಯಕರ್ತರಿಗೆ ನಿರಾಸೆ ಮೂಡಿಸಿದೆ.
ಸೆಪ್ಟೆಂಬರ್ 2021ರಲ್ಲಿ ಕೆಐಸಿ ವತಿಯಿಂದ ನಡೆದಿರುವಂತಹ ವಿಚಾರಣೆಗಳು ಹಾಗೂ ಪ್ರಕರಣಳ ವಿಲೇವಾರಿಗೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ನಡೆಸಿರುವಂತಹ ಒಂದು ವಿಶ್ಲೇಷಣೆಯ ಪ್ರಕಾರ ಆಯೋಗ 30 ದಿನಗಳಲ್ಲಿ ಕೇವಲ ೩,೯೬೮ ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಿದೆ. ಈ ಪೈಕಿ ಕೆಐಸಿ ೧,೪೦೯ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, ಉಳಿದ ೨,೫೫೯ ಪ್ರಕರಣಗಳನ್ನು ಮುಂದೂಡಲಾಗಿವೆ ಅಥವಾ ತೀರ್ಪನ್ನು ಉಳಿಸಿಕೊಂಡಿದೆ.
ಈ ರೀತಿ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿಗೆ ತಗಲುವ ವೆಚ್ಚಗಳನ್ನು ವಿಶ್ಲೇಷಣೆ ಹೊರ ಹಾಕಿದೆ. ಒಂದು ಪ್ರಕರಣಕ್ಕೆ ಆಯೋಗಕ್ಕೆ ತಗಲುವ ಸರಾಸರಿ ವೆಚ್ಚ ರೂ.೧,೨೦೯ಕ್ಕೆ ಏರಿಕೆಯಾಗಿದೆ. ಒಂದು ಪ್ರಕರಣದ ವಿಲೇವಾರಿಗೆ ರೂ.೩,೪೦೬ ವೆಚ್ಚವಾಗುತ್ತಿದೆ. ಈ ವೆಚ್ಚಗಳನ್ನು ಆಯುಕ್ತರು ಹಾಗೂ ಬೆಂಬಲ ಸಿಬ್ಬಂದಿಗಳಿಗೆ ನೀಡುವ ವೇತನಗಳು ಹಾಗೂ ಇತರೆ ಲಾಭಗಳನ್ನು ಒಳಗೊಂಡಂತೆ ಲೆಕ್ಕ ಮಾಡಲಾಗಿದೆ.
ಕೇಂದ್ರದ ಟ್ರಸ್ಟಿ ಬಿ.ಹೆಚ್. ವೀರೇಶ್ ಅವರು ತಿಳಿಸಿರುವಂತೆ ಆಯೋಗ ನಿಷ್ಟ್ರಯೋಜಕವಾಗಿದೆ. “ಒಂದು ಪ್ರಕರಣದ ಕುರಿತು ಮಾಹಿತಿ ಎರಡು ವರ್ಷಗಳಾದ ನಂತರ ದೊರೆತರೇ ಪ್ರಯೋಜನವೇನು? ಒಂದು ಯೋಜನೆಗೆ ಹೊರಡಿಸಿರುವ ಕಾರ್ಯಾದೇಶಕ್ಕೆ ಸಂಬಂಧಪಟ್ಟಂತೆ ಅರ್ಜಿದಾರರು ಕೇಳಿರುವ ಅತ್ಯಂತ ಸರಳವಾದಂತಹ ಪ್ರಕರಣದಲ್ಲಿಯೂ ಸಹ ಆಯೋಗ ಕೂಡಲೆ ಆದೇಶ ಹೊರಡಿಸುವುದಿಲ್ಲ. ವಾಸ್ತವದಲ್ಲಿ ಇಂತಹ ಮಾಹಿತಿ ವೆಬ್ ಸೈಟ್ ನಲ್ಲೇ ಲಭಿಸುವಂತಿರಬೇಕು,” ಎನ್ನುತ್ತಾರೆ. ಈ ರೀತಿಯ ವಿಳಂಬ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವಲ್ಲಿ ನೆರವಾಗುತ್ತದೆ ಎಂದರು.
ಅಮರೇಶ್ ಎಂಬ ಹೆಸರಿನ ಆರ್ಟಿಐ ಕಾರ್ಯಕರ್ತರೊಬ್ಬರು ಮನವಿಗಳನ್ನು ಸಲ್ಲಿಸುವುದನ್ನೇ ನಿಲ್ಲಿಸಿದ್ದಾರೆ. “ಆಯೋಗ ಅದಕ್ಕೆ ಬೇಕಾದಂತಹ ಪ್ರಕರಣಗಳನ್ನು ಮಾತ್ರ ಆಯ್ಕೆ ಮಾಡುತ್ತಿದೆ; ಮನವಿಗಳ ಸೀನಿಯಾರಿಟಿ ಪ್ರಕಾರ ಏನೂ ನಡೆಯುತ್ತಿಲ್ಲ. ಒಂದು ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲು 6ರಿಂದ 8 ತಿಂಗಳು ತೆಗೆದುಕೊಳ್ಳುತ್ತಿದೆ. ಇದರಿಂದ ಭ್ರಷ್ಟ ಅಧಿಕಾರಿಗಳು ಹಾಗೂ ಆಯೋಗದ ನಡುವೆ ನಡೆದಿರುವ ಅಪವಿತ್ರ ಮೈತ್ರಿ ಸ್ಪಷ್ಟವಾಗುತ್ತದೆ,” ಎಂದರು.
ಅಮರೇಶ್ ಅವರ ಪ್ರಕಾರ ಆರ್ಟಿಐ ಮನವಿಗಳ ವಿಚಾರಣೆ ಹಾಗೂ ವಿಲೇವಾರಿ ಇತರೆ ಮಾಮೂಲಿ ನ್ಯಾಯಾಲಯಗಳಲ್ಲಿ ಸಿವಿಲ್ ಪ್ರಕರಣಗಳಲ್ಲಾಗುವಂತೆ ಕ್ಲಿಷ್ಟವಾಗಿರುವುದಿಲ್ಲ. ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಒಂದು ಪೀಠ ಏನೂ ಸಮಸ್ಯೆ ಇಲ್ಲದೆ 50ಕ್ಕೂ ಹೆಚ್ಚಿನ ಪ್ರಕರಣಗಳ ವಿಚಾರಣೆ ನಡೆಸಬಹುದು. ಮಾಹಿತಿ ಒದಗಿಸಲು ನಿರಾಕರಿಸುವ ಅಧಿಕಾರಿಗಳಿಗೆ ದಂಡ ವಿಧಿಸುವ ಅಧಿಕಾರವೂ ಆಯೋಗಕ್ಕೆ ಇದೆ. ಇಂತಹ ಅಧಿಕಾರಿಗಳಿಗೆ ಆಯೋಗ ರೂ.೨೫,೦೦೦ದವರೆಗೆ ದಂಡ ವಿಧಿಸಬಹುದು. ಆದರೆ ಕೆಐಸಿ ಪ್ರಸ್ತುತ ಅದರ ಉದ್ದೇಶದ ಪ್ರಕಾರ ಕಾರ್ಯನಿರ್ವಹಿಸುತ್ತಿಲ್ಲ,” ಎಂದರು.
ಆದರೆ ಮುಖ್ಯ ಆಯುಕ್ತರಾದ ಎನ್.ಸಿ. ಶ್ರೀನಿವಾಸ್ ಅವರು ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬಕ್ಕೆ ಸಿಬ್ಬಂದಿಗಳ ಕಳಪೆ ಸೇವಾ ಗುಣಮಟ್ಟ ಹಾಗೂ ಸಾಕಷ್ಟು ಸಿಬ್ಬಂದಿಗಳ ಕೊರತೆಯೇ ಕಾರಣ ಎನ್ನುತ್ತಾರೆ. “ಆಯೋಗಕ್ಕೆ ಕೇವಲ ಉತ್ತಮವಾಗಿ ಕಾಣುವಂತಹ ಕಟ್ಟಡ ಹಾಗೂ ಸಾಕಷ್ಟು ಸಂಖ್ಯೆಯ ಪೀಠಗಳಿದ್ದರೆ ಸಾಲದು. ನಮ್ಮಲ್ಲಿ ಉತ್ತಮ ಬೆರಳಚ್ಚುಗಾರರು ಹಾಗೂ ಶೀಘ್ರಲಿಪಿಗಾರರಿಲ್ಲ, ಏಕೆಂದರೆ ಈ ಎಲ್ಲಾ ಉದ್ಯೋಗಗಳೂ ಹೊರಗುತ್ತಿಗೆಯನ್ನು ಆಧರಿಸಿದೆ. ಮಂಜೂರು ಮಾಡಿರುವ ಒಟ್ಟು 141 ಸಿಬ್ಬಂದಿಗಳ ಪೈಕಿ 30 ಉದ್ಯೋಗಗಳು ಖಾಲಿ ಇವೆ,” ಎಂದು ಸ್ಪಷ್ಟಪಡಿಸಿದ್ದಾರೆ.
“ಕೆಐಸಿಗಾಗಿ ನಾವು ಪದವೃಂದ ಹಾಗೂ ನೇಮಕಾತಿ (ಸಿ&ಆರ್) ನಿಯಮಗಳ ಕರಡನ್ನು ಸಿದ್ಧಪಡಿಸುತ್ತಿದ್ದೇವೆ. ಒಮ್ಮೆ ಸರ್ಕಾರ ಇದನ್ನು ಅನುಮೋದಿಸಿದರೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ಬಾಕಿ ಉಳಿದಿರುವ ೩೦,೦೦೦ ಪ್ರಕರಣಗಳನ್ನು ಪೂರ್ಣಗೊಳಿಸುತ್ತೇವೆ,” ಎಂದರು.
ಸುದ್ದಿ ಮೂಲ: ಬೆಂಳೂರ್ ಮಿರರ್
Key words: KIC- worthless- pending -applications – more than-30,000.