ಬೆಂಗಳೂರು, ಅಕ್ಟೋಬರ್ 13, 2022 (www.justkannada.in): ಬೆಂಗಳೂರು ಬುಲ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ನಡುವಿನ ವಿವೋ ಪ್ರೊ ಕಬಡ್ಡಿ ಲೀಗ್ ಸೀಸನ್- 9ರ ಪಂದ್ಯಕ್ಕೂ ಮುನ್ನ ಚಿತ್ರ ನಟ ಸುದೀಪ್ ಅವರು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಬುಲ್ಸ್ ಆಟಗಾರರೊಂದಿಗೆ ಬುಧವಾರ ಸಂವಾದ ನಡೆಸಿ ಪ್ರೇರೇಪಿಸಿದರು.
ಬೆಂಗಳೂರು ಬುಲ್ಸ್ ತಂಡವು ಈ ಋತುವಿನ ತನ್ನ ಮೊದಲ 2 ಪಂದ್ಯಗಳಲ್ಲಿ ತೆಲುಗು ಟೈಟಾನ್ಸ್ ಮತ್ತು ಪುಣೇರಿ ಪಲ್ಟಾನ್ ತಂಡವನ್ನು ಮಣಿಸುವ ಮೂಲಕ ಉತ್ತಮ ಆರಂಭ ಪಡೆದಿದೆ.
ಕಬಡ್ಡಿ ಮತ್ತು ಬೆಂಗಳೂರು ಬುಲ್ಸ್ ಮೇಲಿನ ತಮ್ಮ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ ಸುದೀಪ್, ‘‘ನಾವೆಲ್ಲರೂ ಕಬಡ್ಡಿ ಆಡಿದ್ದೇವೆ. ಕಳೆದ ಸೀಸನ್ ಕಬಡ್ಡಿಯೊಂದಿಗೆ ನನ್ನ ಸವಿನೆನಪಿನ ನೆನಪು ಮೂಡಿದೆ. ಶಾಲಾ ದಿನಗಳಲ್ಲಿ ಕಬಡ್ಡಿ ಆಡಿದ್ದು ನೆನಪಿದೆ. ಕ್ರೀಡೆಯಲ್ಲಿನ ದೈಹಿಕ ಕದನ ನಿಮ್ಮದು, ಅದನ್ನು ಎಂದಿಗೂ ಮರೆಯುವುದಿಲ್ಲ’’ ಎಂದರು.
‘‘ಬೆಂಗಳೂರು ಬುಲ್ಸ್ ತಂಡದ ಆಟಗಾರರ ಮುಖ ನೋಡುವ ಬದಲು, ಅವರ ದೇಹವನ್ನು ನೋಡುತ್ತೇನೆ. ಅವರೆಲ್ಲರೂ ನನ್ನ ದೇಹದ ಮೇಲೆ ಬಿದ್ದರೆ ಏನಾಗುತ್ತದೆ ಎಂದು ಯೋಚಿಸುತ್ತೇನೆ. ಈ ಎಲ್ಲದಕ್ಕೂ ಅವರು ಎಷ್ಟು ತರಬೇತಿ ಪಡೆದಿರಬಹುದೆಂದು ಆಶ್ಚರ್ಯ ಪಡುತ್ತೇನೆ. ವಿಶೇಷವಾಗಿ ಸ್ನಾಯುಶಕ್ತಿ ಹೊಂದಿರುವ ಅಪರೂಪದ ಕ್ರೀಡೆ’’ ಎಂದರು.