ಬೆಂಗಳೂರು, ಜುಲೈ 15, 2022 (www.justkannada.in): ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದಂತಹ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪಂದ್ಯ ನಡೆಯುವಾಗ ಓರ್ವ ಸ್ಪರ್ಧಾಳು ಮೃತಪಟ್ಟ ಘಟನೆಯ ನಂತರ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಆಯೋಜಕರಿಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ.
ನಿಖಿಲ್(23), ಮೈಸೂರು ಮೂಲದ ನಿವಾಸಿಯಾಗಿದ್ದು, ಮಾರ್ಷಿಯಲ್ ಆರ್ಟ್ಸ್ ಸ್ಪರ್ಧಾಳುವಾಗಿದ್ದರು. ಜುಲೈ ೧೦ರಂದು ಬೆಂಗಳೂರಿನ ಪಶ್ಚಿಮ ಭಾಗದಲ್ಲಿ ಆಯೋಜಿಸಲಾಗಿದ್ದಂತಹ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದರು. ಸ್ಪರ್ಧೆ ನಡೆಯುವಾಗ ಎದುರಾಳಿಯು ಮುಖದ ಮೇಲೆ ನೀಡಿದ ಹೊಡೆತದ ನಂತರ ನಿಖಿಲ್ ನೆಲಕ್ಕುರುಳಿ ನಂತರ ಮೃತಪಟ್ಟಿದ್ದರು. ಈ ಘಟನೆ ಸಂಜೆ 6 ಗಂಟೆಯ ಸುಮಾರಿಗೆ ನಡೆದಿದೆ.
ನಿಖಿಲ್ ಅವರನ್ನು ನಾಗರಬಾವಿಯಲ್ಲಿರುವ ಒಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಲಾಯಿತು. ನಂತರ ಅವರನ್ನು ಯಶವಂತಪುರದಲ್ಲಿರುವ ಒಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಜುಲೈ ೧೩ರಂದು ಮಧ್ಯಾಹ್ನ ಸುಮಾರು ೧೨.೩೦ರ ವೇಳೆಗೆ ನಿಖಿಲ್ ಮೃತಪಟ್ಟರು. ನಿಖಿಲ್, ಐಟಿಐ ಪೂರ್ಣಗೊಳಿಸಿ ಎಲೆಕ್ಟ್ರಿಷಿಯನ್ ವೃತ್ತಿಯನ್ನು ಮಾಡಿಕೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಮಾರ್ಷಿಯಲ್ ಆರ್ಟ್ಸ್ ಕಲಿಯುತ್ತಿದ್ದರು.
ಜುಲೈ 9ರಂದು, ನಿಖಿಲ್ ಮೈಸೂರಿನ ಅಕಾಡೆಮಿ ಆಫ್ ಮಾರ್ಷಿಯಲ್ ಸೈನ್ಸ್ ನ ಇತರೆ ಕೆಲವರೊಂದಿಗೆ, ಕೆ೧ ಕಿಕ್‌ಬಾಕ್ಸಿಂಗ್ ಅಸೋಸಿಯೇಷನ್ ಕರ್ನಾಟಕ ಆಯೋಜಿಸಿದ್ದಂತಹ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದರು.
ಜುಲೈ 10ರಂದು, ಕೆಂಗೇರಿಯ ಜ್ಞಾನಜ್ಯೋತಿ ನಗರದ ಆರ್ ಆರ್ ಲೇಔಟ್ ನಲ್ಲಿರುವ ಒಂದು ವಾಣಿಜ್ಯ ಕಟ್ಟಡದ ಐದನೇ ಮಹಡಿಯಲ್ಲಿರುವಂತಹ ರ್ಯಾಪಿಡ್ ಫಿಟ್ನೆಸ್ ಎಂಬ ಜಿಮ್ ನಲ್ಲಿ ಚಾಂಪಿಯನ್ ಷಿಪ್ ಅನ್ನು ಏರ್ಪಡಿಸಲಾಗಿತ್ತು. ಘಟನೆ ನಡೆದ ಮರು ದಿನ, ಅಂದರೆ ನಿಖಿಲ್ ರಿಂಗ್ ನಲ್ಲಿ ಕುಸಿದುಬಿದ್ದ ನಂತರದ ದಿನ ಆಯೋಜಕರು ನಿಖಿಲ್ ಅವರ ತಾಯಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದರು.
ಅವರ ತಂದೆ ಸುರೇಶ್ ಪಿ. ಹಾಗೂ ಮುಖ್ಯ ಕೋಚ್ ವಿಕ್ರಂ ಅವರು ಬೆಂಗಳೂರಿನ ಆಸ್ಪತ್ರೆಗೆ ಆಗಮಿಸಿದರು. ಆಗ ಅಲ್ಲಿನ ವೈದ್ಯರು ಅವರಿಗೆ ನಿಖಿಲ್ ಗೆ ಆಗಿರುವ ದೈಹಿಕ ಅಪಘಾತದ ಬಗ್ಗೆ ವಿವರಿಸಿದರು. ಸುರೇಶ್ ಅವರ ಪ್ರಕಾರ, ನಿಖಿಲ್ ಗಾಯಗೊಂಡ ಕೂಡಲೇ ಕೋಮಾಗೆ ತಲುಪಿದ್ದರು. ಆದರೆ, ಕೆ೧ನ ಭಾರತೀಯ ಮುಖ್ಯ ಕೋಚ್ ನವೀನ್ ರವಿಶಂಕರ್ ಅವರು ನಿಖಿಲ್ ಗೆ ಕೇವಲ ತಲೆಗೆ ಏಟು ಬಿದ್ದಿದೆ ಎಂದು ಮಾತ್ರ ತಿಳಿಸಿದ್ದರು.
ತೀವ್ರ ನಿರ್ಲಕ್ಷ್ಯ
ನಿಖಿಲ್ ಅವರ ತಂದೆ ಸುರೇಶ್ ಅವರು, ಆಯೋಜಕರ ತೀವ್ರ ನಿರ್ಲಕ್ಷ್ಯತೆಯೇ ತಮ್ಮ ಮಗ ನಿಖಿಲ್ ಸಾವಿಗೆ ಕಾರಣ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಸುರೇಶ್ ಅವರ ಪ್ರಕಾರ, ಆಯೋಜಕರು ಸ್ಪರ್ಧೆಯನ್ನು ಐದನೇ ಮಹಡಿಯಲ್ಲಿ ಆಯೋಜಿಸುವ ಮೂಲಕ ಮೊದಲ ತಪ್ಪು ಮಾಡಿದ್ದಾರೆ. ಏಕೆಂದರೆ ಇಂತಹ ತುರ್ತು ಪರಿಸ್ಥಿತಿ ಎದುರಾದಾಗ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ವಿಳಂಬವಾಗುತ್ತದೆ. ಎರಡನೆಯದಾಗಿ ಸ್ಥಳದಲ್ಲಿ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನೂ ಸಹ ಕೈಗೊಂಡಿರಲಿಲ್ಲ. ರಿಂಗ್ ಒಳಗೆ ನೆಲಕ್ಕೆ ಹಾಸಿದ್ದಂತಹ ಸ್ಪಾಂಜ್ ಮ್ಯಾಟ್ ಬಹಳ ತೆಳುವಾಗಿದ್ದು, ಸ್ಪರ್ಧಾಳುಗಳು ಕೆಳಗೆ ಬಿದ್ದಾಗ ತಲೆಗೆ ಪೆಟ್ಟಾಗದಿರುವಂತೆ ಕಾಪಾಡುವ ರೀತಿ ಇರಲಿಲ್ಲ, ಎಂದು ದೂರಿದ್ದಾರೆ.
ಮುಂದುವರೆದು, ಆಂಬ್ಯುಲೆನ್ಸ್ ವ್ಯವಸ್ಥೆಯನ್ನೂ ಸಹ ಮಾಡಿರಲಿಲ್ಲ. ಪ್ಯಾರಾಮೆಡಿಕಲ್ ಸಹಾಯಕರಾಗಲೀ ಅಥವಾ ಆಮ್ಲಜನಕದ ವ್ಯವಸ್ಥೆಯಾಗಲೀ ಅಲ್ಲಿ ಇರಲಿಲ್ಲ. ಇದರಿಂದಾಗಿ ನಿಖಿಲ್ ರಿಂಗ್ ನಲ್ಲಿ ಗಾಯಗೊಂಡಾಗ ಪ್ರಥಮ ಚಿಕಿತ್ಸೆ ಲಭಿಸಲಿಲ್ಲ. ಹಾಗಾಗಿ ಅತನನ್ನು ಖಾಸಗಿ ವಾಹನವೊಂದರಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ, ಎಂದು ಕರಾಟೆ ಶಿಕ್ಷಕರೂ ಸಹ ಆಗಿರುವ ಸುರೇಶ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
“ನನಗೆ ಕರಾಟೆ ಕಲಿಸುವ ಅನುಭವವಿದೆ. ನನ್ನ ಮಗನನ್ನು ಆಯೋಜಕರೇ ಕೊಂದಿದ್ದಾರೆ,” ಎಂದು ಗುರುವಾರ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಮ್ಮ ಅಳಲನ್ನು ತೋಡಿಕೊಂಡರು.
ಸುರೇಶ್ ಅವರ ದೂರನ್ನು ಆಧರಿಸಿ, ಕೆ೧ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಹಾಗೂ ಆಯೋಜಕರಾದ ರವಿಶಂಕರ್ ಅವರ ವಿರುದ್ಧ ನಿರ್ಲಕ್ಷ್ಯತನದಿಂದಾಗಿ ಮೃತಪಟ್ಟ ಕಾರಣದ ಹಿನ್ನೆಲೆಯಲ್ಲಿ ಜ್ಞಾನಭಾರತಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ಅವರನ್ನು ಹುಡುಕುವ ಕೆಲಸ ನಡೆಸಲಾಗುತ್ತಿದೆ.
Key words: kickboxing –match- death – competitor – FIR –against-Organizer.