ಬೆಂಗಳೂರು, ಜನವರಿ, 24,2025 (www.justkannada.in): ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಹಾಗೂ ದೇಶದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎನಿಸಿಕೊಂಡಿರುವ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು 1 ಸಾವಿರ ರೊಬೊಟಿಕ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದೆ.
ಮೊದಲ ಬಾರಿಗೆ ರೋಬೊಟಿಕ್ ಯಂತ್ರ ಅಳವಡಿಕೆ ಮಾಡಿಕೊಂಡ ಏಕೈಕ ಆಸ್ಪತ್ರೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಾಗಿದೆ. ಅತ್ಯಾಧುನಿಕ ರೋಬೊಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇದುವರೆಗೆ ಒಂದು ಸಾವಿರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ವಿಶೇಷ ಮೈಲುಗಲ್ಲು ಸಾಧಿಸಿದೆ. ಸರಕಾರಿ ಸಂಸ್ಥೆಗಳ ಪೈಕಿ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಮಾತ್ರ ರೋಬೋಟಿಕ್ ಸರ್ಜರಿ ಸೌಕರ್ಯ ಇರುವುದು ಮತ್ತೊಂದು ಹೆಗ್ಗಳಿಕೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಹಲವು ಸಾಧನೆಗಳನ್ನು ಮಾಡುವಲ್ಲಿ ದಾಫುಗಾಲಿಡುತ್ತಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಹೆಚ್ಚು ಚಿಕಿತ್ಸೆ ನೀಡಿದ ಆಸ್ಪತ್ರೆಯಾಗಿ ಹೊರ ಹೊಮ್ಮಿದೆ. ಒಳರೋಗಿಗಳಿಗೆ ಹೆಚ್ಚು ಚಿಕಿತ್ಸೆ ನೀಡಿದ ಏಕೈಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಗೌರವಕ್ಕೂ ಕಿದ್ವಾಯಿ ಸಂಸ್ಥೆ ಪಾತ್ರವಾಗಿದೆ. ರಾಜ್ಯದಲ್ಲೇ ಏಕೈಕ ಬೋನ್ ಮ್ಯಾರೋ (ಅಸ್ತಿಮಜ್ಜೆ ಶಸ್ತ್ರಚಿಕಿತ್ಸಾ) ಘಟಕ ಕಿದ್ವಾಯಿಯಲ್ಲಿ ಇದ್ದು, ಅಲೋಜೆನಿಕ್, ಆಟೋಲೋಗಸ್ ಅಸ್ತಿಮಜ್ಜೆ ಕಸಿ ಚಿಕಿತ್ಸೆ ಯಶಸ್ವಿಗೊಳಿಸಲಾಗಿದೆ.
ಕಿದ್ವಾಯಿ ಸಂಸ್ಥೆಯಲ್ಲಿ ರೋಗಿಗಳಿಗೆ ಅನುಕೂಲವಾಗಲು ಕೆಸಿಡಿಎಫ್ ಔಷಧಿ ಮಳಿಗೆ 24 ಗಂಟೆಯೂ ಔಷಧ ಮಳಿಗೆ ತೆರೆಯಲಾಗಿದೆ. ಕೆಎಸ್ ಆರ್ ಟಿಸಿ ನೌಕರರಿಗೆ ಕ್ಯಾಷ್ ಲೆಸ್ ಚಿಕಿತ್ಸೆ ನೀಡಲೂ ತೀರ್ಮಾನಿಸಲಾಗಿದೆ. ಬಿಪಿಎಲ್ ಸೌಲಭ್ಯ ಇಲ್ಲದ ಕುಟುಂಬಗಳಿಗೆ ಹಾಗೂ ಹಣದ ಸಮಸ್ಯೆ ಇರುವವರಿಗೆ ಚಿಕಿತ್ಸಾ ವೆಚ್ಚ ಕಡಿಮೆ ಮಾಡಲು ಪ್ರತ್ಯೇಕ ಸಮಿತಿ ರಚಿಸಲಾಗಿದೆ.
ಸಚಿವ ಶರಣ್ ಪ್ರಕಾಶ್ ಪಾಟೀಲ್ ಶ್ಲಾಘನೆ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು 1 ಸಾವಿರ ರೋಬೊಟಿಕ್ ಶಸ್ತ್ರ ಚಿಕಿತ್ಸೆ ಪೂರೈಸಿರುವುದು ಶ್ಲಾಘನೀಯ. ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ಹಾಗೂ ಕೈಗೆಟುಕುವ ಬೆಲೆಯಲ್ಲಿ ವಿಶ್ವ ದರ್ಜೆಯ ಕ್ಯಾನ್ಸರ್ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಭಿವೃದ್ದಿ , ಜೀವನೋಪಾಯ ಇಲಾಖೆಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯು ನೂತನ ವೈದ್ಯಕೀಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೋಗಿಗಳಿಗೆ ಶೀಘ್ರಗತಿಯಲ್ಲಿ ಉತ್ತಮಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ ರೋಬೊಟಿಕ್ ತಂತ್ರಜ್ಞಾನದಿಂದ 9 ವರ್ಷದಲ್ಲಿ 1 ಸಾವಿರ ಶಸ್ತ್ರ ಚಿಕಿತ್ಸೆ ನೀಡಿರುವುದು ಇತಿಹಾಸವಾಗಿದೆ. ರೋಗಿಗಳ ಆರೈಕೆಯಲ್ಲಿ ಕಿದ್ವಾಯಿ ಸಂಸ್ಥೆ ಮುಂಚೂಣಿಯಲ್ಲಿದೆ. ಅಲ್ಲದೇ ನಮ್ಮ ಸಂಸ್ಥೆಯು ವಿಶ್ವಮಟ್ಟದಲ್ಲಿ ಹಾಗೂ ದೇಶದಲ್ಲಿಯೇ ಭಾರತದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಿದ್ವಾಯಿ ಸಂಸ್ಥೆಯ ಸಾಧನೆ ಗಮನಾರ್ಹ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
Key words: Kidwai Memorial Ganthi Hospital, one thousand, robotic surgeries