ಬೆಂಗಳೂರು,ಮೇ,24,2021(www.justkannada.in): ಕಿಮ್ಸ್ ಆಸ್ಪತ್ರೆ ವೈದ್ಯರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಹುಬ್ಬಳ್ಳಿಯ ಕಿಮ್ಸ್ ಗೆ ಭೇಟಿ ನೀಡಿದ ವೇಳೆ ಅಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ವರದಿ ನೀಡುವಂತೆ ಸ್ಥಳೀಯ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದ್ದೇನೆ. ಇಂದೇ ವರದಿ ಬಂದರೆ ಈಗಲೇ ಕ್ರಮ ಕೈಗೊಳ್ಳುತ್ತೇನೆ ಎಂದರು.
ಈಗ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಲಸಿಕೆ ನೀಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ದಿನಾಂಕದ ಬಗ್ಗೆ ಶೀಘ್ರವೇ ತಿಳಿಸುತ್ತೇವೆ. ಇದಕ್ಕೆ ಸ್ಪಷ್ಟವಾದ ಯೋಜನೆ ರೂಪಿಸಿದ್ದೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಕೋವಿಡ್ ನಿಂದ ಗುಣಮುಖರಾದ ಬಳಿಕ ಗ್ಯಾಂಗ್ರಿನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಎಲ್ಲದಕ್ಕೂ ಕೋವಿಡ್ ಕಾರಣವಲ್ಲ. ಬೇರೆ ಬೇರೆ ಕಾರಣಕ್ಕೆ ಗ್ಯಾಂಗ್ರಿನ್ ಬರುತ್ತದೆ. ಇನ್ನು ರಾಜ್ಯದಲ್ಲಿ 300 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಜಿಲ್ಲಾಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಅವಕಾಶ ನೀಡಿದ್ಧೇವೆ. ಬ್ಲ್ಯಾಕ್ ಫಂಗಸ್ ಗೆ ಸ್ವಲ್ಪ ಔಷಧ ಕೊರತೆ ಇದೆ. ಡಿವಿ ಸದಾನಂದಗೌಡರು ನಮ್ಮನ್ನ ಸಂಪರ್ಕಿಸಿದ್ದಾರೆ. ಬ್ಲ್ಯಾಕ್ ಫಂಗಸ್ ಗೆ ಔಷಧಿ ಉತ್ಪಾದನೆಯನ್ನ ಹೆಚ್ಚು ಮಾಡುತ್ತೇವೆ. ನಮಗೆ ಕೇಂದ್ರದಿಂದ 1150 ವಯಲ್ಸ್ ಔಷಧ ಬಂದಿದೆ. ನಾವು 20 ಸಾವಿರ ವಯಲ್ಸ್ ಗೆ ಮನವಿ ಮಾಡಿದ್ಧೇವೆ ಎಂದು ತಿಳಿಸಿದರು.
Key words: Kims hospital -doctor –working- private hospitals- Minister -Dr. K. Sudhakar.