ಬೆಂಗಳೂರು:ಜುಲೈ-27: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿದ ಚೊಚ್ಚಲ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರದ ವತಿಯಿಂದ ಸಣ್ಣ ಹಿಡುವಳಿದಾರರಿಗೆ ವಾರ್ಷಿಕ 4000 ರೂ.ಸಹಾಯಧನ ಹಾಗೂ ನೇಕಾರರ ಸಾಲ 100 ಕೋಟಿ ರೂ.ಮನ್ನಾ ಮಾಡುವ ನಿರ್ಧಾರ ಕೈಗೊಳ್ಳುವ ಮೂಲಕ ತಾವೂ ರೈತನ ಮಗನಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದಾರೆ.
ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧಕ್ಕೆ ಆಗಮಿಸಿದ ಯಡಿಯೂರಪ್ಪ, ಮೂರನೇ ಮಹಡಿಯಲ್ಲಿರುವ ಕಚೇರಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ, ರಾಜ್ಯದಲ್ಲಿ ತೀವ್ರ ಬರ ತಲೆದೋರಿದ್ದು, ರೈತ ಸಮುದಾಯ ಸಂಕಷ್ಟದಲ್ಲಿದ್ದು, ಅವರಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರವು ಸಣ್ಣ ಹಿಡುವಳಿದಾರರಿಗೆ ವಾರ್ಷಿಕ 6,000 ರೂ. ಸಹಾಯಧನ ನೀಡುತ್ತಿದೆ. ಆ ಯೋಜನೆ ಯಡಿ ರಾಜ್ಯ ಸರ್ಕಾರದ ವತಿಯಿಂದ ತಲಾ 2000 ರೂ.ನಂತೆ 2 ಕಂತಿನಲ್ಲಿ ಒಟ್ಟು 4000 ರೂ. ಸಹಾಯಧನವನ್ನು ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದು ಪ್ರಕಟಿಸಿದರು.
ರೈತ ಮತ್ತು ನೇಕಾರರು ರಾಜ್ಯದ ಎರಡು ಕಣ್ಣುಗಳಿದ್ದಂತೆ. ರಾಜ್ಯದ ನೇಕಾರರು ಪಡೆದ ಸಾಲದ ಮೊತ್ತ 2019 ಮಾ.30ಕ್ಕೆ ಕೊನೆಗೊಂಡಂತೆ 100 ಕೋಟಿ ರೂ.ಬಾಕಿ ಇದೆ. ನೇಕಾರರ ಸಾಲದ ಮೊತ್ತವನ್ನು ಮನ್ನಾ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಾಡಿನ ರೈತರು, ನೇಕಾರರು, ಮೀನುಗಾರರು, ಕೃಷಿ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಲು ವಿಶೇಷ ಗಮನ ನೀಡಲಾಗುವುದು. ರೈತರ ಸಾಲ ಮನ್ನಾ ಸಂಬಂಧ ಮಾಹಿತಿ ಪಡೆದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಸೋಮವಾರ ಅಧಿವೇಶನ: ಸರ್ಕಾರ ರಚನೆಯಾದ ಬೆನ್ನಲ್ಲೇ ವಿಶ್ವಾಸಮತ ಸಾಬೀತುಪಡಿಸಬೇಕಿದ್ದು, ಸೋಮವಾರ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಅಧಿವೇಶನ ಕರೆಯಲಾಗಿದ್ದು, ವಿಶ್ವಾಸಮತ ಸಾಬೀತುಪಡಿಸಿ ಬಳಿಕ ಹಣಕಾಸು ವಿಧೇಯಕಕ್ಕೆ ಅನುಮೋದನೆ ಪಡೆಯಲಾಗುವುದು. ಮಂಗಳವಾರ ವಿಧಾನ ಪರಿಷತ್ ಕಲಾಪ ನಡೆಸಲು ತೀರ್ಮಾನಿಸಲಾಗಿದೆ. ಸರ್ಕಾರಿ ನೌಕರರಿಗೆ ವೇತನ ಪಾವತಿಗೆ ಜು.30ರಂದೇ ಹಣ ಡ್ರಾ ಮಾಡಬೇಕಾದ ಹಿನ್ನೆಲೆಯಲ್ಲಿ ತ್ವರಿತವಾಗಿ ಹಣಕಾಸು ವಿಧೇಯಕಕ್ಕೆ ಅನುಮತಿ ಪಡೆಯಬೇಕಿದೆ ಎಂದು ಹೇಳಿದರು.
ಜನತೆ, ಪ್ರಧಾನಿ, ಶಾಗೆ ಅಭಿನಂದನೆ: ‘ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಿದ ರಾಜ್ಯದ ಆರೂವರೆ ಕೋಟಿ ಜನರಿಗೆ ಶುಭ ಕೋರುತ್ತೇನೆ. ನನಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವುದು ರಾಜ್ಯದ ಜನತೆಗೆ ಸಂದ ಗೌರವವೆಂದು ಭಾವಿಸುತ್ತೇನೆ. ನಾನು ಮುಖ್ಯಮಂತ್ರಿಯಾಗಲು ರಾಜ್ಯದ ಜನತೆ, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರ ಆಶೀರ್ವಾದ ಹಾಗೂ ಲಕ್ಷಾಂತರ ಕಾರ್ಯಕರ್ತರ ಶ್ರಮವಿದೆ’ ಎಂದರು.
ಅಗತ್ಯಬಿದ್ದರೆ ದೆಹಲಿಗೆ
ಸಂಪುಟ ರಚನೆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಗತ್ಯ ಬಿದ್ದರೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದರು.
ಜುಲೈ ತಿಂಗಳ ಕಾಮಗಾರಿ ಟೆಂಡರ್,
ವರ್ಗಾವಣೆ ಪ್ರಸ್ತಾಪ ತಡೆಗೆ ಸೂಚನೆ
ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಪಾಲರಿಂದ ಮುಖ್ಯಮಂತ್ರಿಯಾಗಿ ನಿಯೋಜಿತರಾಗುತ್ತಿದ್ದಂತೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜುಲೈ ತಿಂಗಳಲ್ಲಿ ಅನುಮೋದನೆಗೊಂಡಿರುವ ಎಲ್ಲ ಹೊಸ ಕಾಮಗಾರಿಗಳಿಗೆ ಸಂಬಂಧಿಸಿದ ಆದೇಶಗಳನ್ನು ತಕ್ಷಣವೇ ತಡೆ ಹಿಡಿಯುವಂತೆ ಸೂಚನೆ ನೀಡಿದ್ದಾರೆ. ಮುಂದಿನ ಪರಿಶೀಲನೆ ಆಗುವವರೆಗೆ ತಡೆ ಹಿಡಿಯುವಂತೆ ಸರ್ಕಾರದ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾಯದರ್ಶಿ/ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಸೂಚಿಸಿದ್ದಾರೆ. ಈ ಕುರಿತು ಟಿ.ಎಂ.ವಿಜಯಭಾಸ್ಕರ್ ಅವರು, ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಸಹ ಬರೆದಿದ್ದಾರೆ. ಜುಲೈ ತಿಂಗಳಿನಲ್ಲಿ ಆಗಿರುವ ವರ್ಗಾವಣೆಗೆ ಸಂಬಂಧಿಸಿದ ಪ್ರಸ್ತಾವನೆಗಳ ಮೇಲೆ ಅನುಮೋದನೆಗೊಂಡು ಜಾರಿಯಾಗದೇ ಇರುವ ಆದೇಶಗಳನ್ನು ಮುಂದಿನ ಆದೇಶದವರೆಗೆ ಜಾರಿ ಮಾಡದಂತೆ ಹಾಗೂ ಈಗಾಗಲೇ ಹೊರಡಿಸಿರುವ ಆದರೆ, ಚಾಲನೆಗೊಳ್ಳದಿರುವ ವರ್ಗಾವಣೆ ಸಂಬಂಧಿತ ಪ್ರಸ್ತಾವಗಳ ಮೆಲಿನ ಆದೇಶಗಳನ್ನು ಮುಂದಿನ ಆದೇಶದವರೆಗೆ ಚಾಲನೆಗೊಳಿಸದಂತೆ ಸರ್ಕಾರದ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ. ನಿಯೋಜಿತ ಮುಖ್ಯಮಂತ್ರಿಯವರ ನಿರ್ದೇಶನ ಪಾಲಿಸುವಂತೆ ವಿಜಯಭಾಸ್ಕರ್ ಪತ್ರದ ಮೂಲಕ ಕೋರಿದ್ದಾರೆ
ಕೃಪೆ:ಉದಯವಾಣಿ