ಬೆಂಗಳೂರು ಅಕ್ಟೋಬರ್, 2,2024 (www.justkannada.in): ಸ್ವಾಭಿಮಾನ-ನಾಡಭಕ್ತಿ, ದೇಶಭಕ್ತಿಗೆ ಮತ್ತೊಂದು ಹೆಸರು ರಾಣಿ ಚನ್ನಮ್ಮ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದರು.
ವಿಧಾನಸೌಧ ಮುಂದಿನ ಮೆಟ್ಟಿಲುಗಳ ಬಳಿ “ಕಿತ್ತೂರು ವಿಜಯೋತ್ಸವದ ಜ್ಯೋತಿ” ಗೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಇಲ್ಲಿಂದ ಹೊರಟ ಜ್ಯೋತಿ ಎಲ್ಲಾ ಜಿಲ್ಲೆಗಳನ್ನು ಹಾದು ಕಿತ್ತೂರು ತಲುಪಲಿದೆ.
ಬ್ರಿಟಿಷರ ವಿರುದ್ಧ ನೇರ ಸವಾಲೊಡ್ಡಿದ ದಿಟ್ಟ ಮಹಿಳೆ. ಸಂಗೊಳ್ಳಿ ರಾಯಣ್ಣ ಕೂಡ ರಾಣಿ ಚನ್ನಮ್ಮ ಅವರ ಸೈನ್ಯದಲ್ಲಿದ್ದರು. ಬ್ರಿಟೀಷರಿಗೆ ತೆರಿಗೆ ಕೊಡಲು ವಿರೋಧಿಸಿ ವಿರೋಚಿತವಾಗಿ ಹೋರಾಡಿದ ದೇಶಪ್ರೇಮಿಗಳು ಇವರು ಎಂದರು.
ನಾಡಪ್ರೇಮ, ದೇಶಪ್ರೇಮ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ರಾಣಿ ಚನ್ನಮ್ಮ. ಕಿತ್ತೂರಿನಲ್ಲಿ ಆಚರಿಸಲ್ಪಡುತ್ತಿರುವ ಕಿತ್ತೂರು ಉತ್ಸವಕ್ಕೆ ಮತ್ತು ಕಿತ್ತೂರಿನ ಅಭಿವೃದ್ಧಿಗೆ ಸರ್ಕಾರ ಸಕಲ ನೆರವನ್ನು ನೀಡುತ್ತಿದೆ. ಅಗತ್ಯ ಅನುದಾನವನ್ನೂ ನೀಡುತ್ತಿದೆ. ಇಂದು ಮಹಾತ್ಮ ಗಾಂಧಿಯವರ ಜಯಂತಿ. ಜೊತೆಗೆ ಲಾಲ್ ಬಹದ್ದೂರು ಶಾಸ್ತ್ರಿ ಅವರ ಜನುಮದಿನವೂ ಹೌದು. ಗಾಂಧಿ ನಡಿಗೆ ಮೂಲಕ ಗಾಂಧಿ ತತ್ವಾದರ್ಶಗಳು ಇವತ್ತಿನ ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ ಎಂದರು.
ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ವಹಿಸಿ ಶಾಂತಿಯುತವಾಗಿ ಸ್ವಾತಂತ್ರ್ಯ ದೊರಕಿಸಿಕೊಟ್ಟರು. 1920 ರಿಂದ 1947 ರ ವರೆಗಿನ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದರು ಎಂದು ವಿವರಿಸಿದರು.
Key words: Kittur vijayotsav, Rani Channamma, CM Siddaramaiah