ಮೈಸೂರು, ಜುಲೈ 07, 2019 (www.justkannada.in): ಕೊಡಗು ಮೂಲದ ಯುವತಿ ಪುಣ್ಯಾ ನಂಜಪ್ಪ, ಭಾರತೀಯ ವಾಯುಸೇನೆಗೆ ಟ್ರೈನಿ ಪೈಲೆಟ್ ಆಗಿ ಆಯ್ಕೆಯಾಗಿರುವ ಏಕೈಕ ಕನ್ನಡತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಷ್ಟಕ್ಕೂ ಅವರು ವಾಯು ಸೇನೆ ಪೈಲಟ್ ಆಗಲು ಪ್ರೇರಣೆಯಾಗಿದ್ದು, ದಸರಾ ಏರ್ ಶೋ ! ದಸರಾ ಏರ್ ಶೋ ನೋಡಿದ ಬಳಿಕ ಭಾರತೀಯ ವಾಯುಸೇನೆ ಸೇರಬೇಕೆಂಬ ಆಸೆ ಚಿಗುರೊಡೆಯಿತು ಎಂದು ಪುಣ್ಯಾ ನಂಜಪ್ಪ ಹೇಳಿದ್ದಾರೆ.
‘ಅಪ್ಪನ ಜತೆ ದಸರಾ ಏರ್ ಶೋ ನೋಡಿದ ಸಂದರ್ಭ ನಾನು ಪೈಲೆಟ್ ಆಗಬೇಕೆಂಬ ಕನಸು ಚಿಗುರೊಡೆಯಿತು. ಅದಕ್ಕೆ ಅಪ್ಪ ನೀರೆರೆದರು. ಆರಂಭದಲ್ಲಿ ಅಮ್ಮ ತುಸು ಆತಂಕಗೊಂಡು ಬೇಡವೆಂದರೂ, ನಂತರ ಪ್ರೋತ್ಸಾಹಿಸಿದರು’ ಎಂದು ಅವರು ಹೇಳಿಕೊಂಡಿದ್ದಾರೆ.
ಫ್ಲೈಯಿಂಗ್ ಬ್ರಾಂಚ್, ಗ್ರೌಂಡ್ ಡ್ಯೂಟಿ ಟೆಕ್ನಿಕಲ್, ನಾನ್ ಟೆಕ್ನಿಕಲ್, ಲಾಜಿಸ್ಟಿಕ್ಸ್, ಅಕೌಂಟ್ಸ್, ಎಜುಕೇಷನ್, ಮಿಟಿಯೋರಾಲಜಿ ವಿಭಾಗಗಳ ಒಟ್ಟು 114 ಹುದ್ದೆಗಳ ನೇಮಕಾತಿಗೆ ನಡೆಸಲಾದ ಪರೀಕ್ಷೆಯಲ್ಲಿ ಫ್ಲೈಯಿಂಗ್ ಬ್ರಾಂಚ್ಗೆ ಆಯ್ಕೆಯಾದೆ. ಪ್ರವೇಶ ಪರೀಕ್ಷೆ ನಂತರ 5 ದಿನದ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ನಡೆಯಿತು.
ಇನ್ನಿತರ ಪ್ರಕ್ರಿಯೆ ಬಳಿಕ ಅಂತಿಮ ಪಟ್ಟಿಯನ್ನು ಇದೇ ಜೂ.11ರಂದು ಪ್ರಕಟಿಸಲಾಯಿತು. ಹೈದರಾಬಾದ್ನ ದುಂಡಿಗಲ್ ಏರ್ಫೋರ್ಸ್ ಅಕಾಡೆಮಿಯಲ್ಲಿ ಜುಲೈ 8ರಿಂದ ತರಬೇತಿ ಕೋರ್ಸ್ ಆರಂಭವಾಗಲಿದೆ. ನಂತರ ಆರ್ಮಿ ಟ್ರೈನಿಂಗ್, ಇನ್ನಷ್ಟು ಟ್ರೈನಿಂಗ್ ಬಳಿಕ ಭಾರತೀಯ ವಾಯುಪಡೆ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಲು ಅರ್ಹತೆ ಪಡೆಯಲಿದ್ದೇನೆ,” ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನು ಪುಣ್ಯ ನಂಜಪ್ಪ ಕೊಡಗಿನ ವಿರಾಜಪೇಟೆ ತಾಲೂಕು, ಚೆಂಬೆಬೆಳ್ಳೂರು ಮೂಲದ ಕೊಳುವಂಡ ಪಿ.ನಂಜಪ್ಪ ಹಾಗೂ ಅನುರಾಧಾ ನಂಜಪ್ಪ ದಂಪತಿ ಪುತ್ರಿ. ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ. ತಾಯಿ ಅನುರಾಧಾ ವಿಜಯನಗರದಲ್ಲಿರುವ ಸೇಂಟ್ ಜೋಸೆಫ್ ಸೆಂಟ್ರಲ್ ಸೂಲ್ಕ್ನಲ್ಲಿ ಶಿಕ್ಷ ಕಿಯಾಗಿದ್ದಾರೆ. ವರ್ಷದ ಹಿಂದೆ ನಿಧನರಾದ ತಂದೆ ನಂಜಪ್ಪ ಪ್ರಭಾ ಚಿತ್ರಮಂದಿರದಲ್ಲಿ ಮ್ಯಾನೇಜರ್ ಆಗಿದ್ದರು. ವಿಜಯನಗರದ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ನಲ್ಲಿ ಪ್ರೌಢಶಾಲೆವರೆಗೆ ವಿದ್ಯಾಭ್ಯಾಸ ಮಾಡಿದರು. ಸರಸ್ವತಿಪುರಂ ವಿಜಯವಿಠಲ ಶಾಲೆಯಲ್ಲಿ ಪಿಯುಸಿ, ಎನ್ಐಇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.