ಕೊಡಗು,ಅಕ್ಟೊಬರ್,08,2020(www.justkannada.in) : ಕೊಡಗು ಪೊಲೀಸ್ ಶ್ವಾನದಳದ ಅತ್ಯಂತ ವಿಶ್ವಸಾಹ೯ ಶ್ವಾನ ರ‍್ಯಾಂಬೋ ಹೃದಯಾಘಾತದಿಂದ ಮೃತಪಟ್ಟಿದೆ.2013 ಅಕ್ಟೋಬರ್ 15 ರಂದು ಜನಿಸಿದ ಈ ನಾಯಿಯನ್ನು ನಾಲ್ಕು ತಿಂಗಳ ಬಳಿಕ ಬೆಂಗಳೂರಿನ ಆಡುಗೋಡಿಯಲ್ಲಿನ ಪೊಲೀಸ್ ಶ್ವಾನ ತರಬೇತಿ ಶಿಬಿರದಲ್ಲಿ 9 ತಿಂಗಳ ತರಬೇತಿಗೆ ಒಳಪಡಿಸಿ ಮಡಿಕೇರಿಯ ಪೊಲೀಸ್ ಶ್ವಾನದಳದ ಕರ್ತವ್ಯಕ್ಕೆ ಕರೆತರಲಾಗಿತ್ತು.ರ‍್ಯಾಂಬೋನ ಕತ೯ವ್ಯದಿಂದಾಗಿ ಇಲಾಖೆಯ ಎಲ್ಲರಿಗೂ ಚಿರಪರಿಚಿತವಾಗಿತ್ತು. ಅತ್ಯಂತ ಚುರುಕಿನ ಮತ್ತು ಸಾಹಸಮಯ ಪ್ರವೃತ್ತಿಗೆ ಖ್ಯಾತಿ ಪಡದಿತ್ತು. ಹೀಗಾಗಿಯೇ ಇವನಿಗೆ ರ‍್ಯಾಂಬೋ ಎಂದು ನಾಮಕರಣ ಮಾಡಲಾಗಿತ್ತು.
ಮಡಿಕೇರಿಯ ತಂಪಿನಲ್ಲಿದ್ದ ರ‍್ಯಾಂಬೋ ದಕ್ಷಿಣ ಕನ್ನಡದ 33 ಡಿಗ್ರಿ ಹವೆಗೆ ದಿಡೀರನೆ ಹೊಂದಿಕೊಳ್ಳಲಿಲ್ಲವೋ ಏನೋ. ಸುರತ್ಕಲ್ ನಲ್ಲಿ ಬುಧವಾರ ಸಂಜೆ ಕತ೯ವ್ಯ ಮುಗಿಸಿದಾಗ 108 ಡಿಗ್ರಿ ಜ್ವರದಿಂದ ಬಳಲುತ್ತಿತ್ತು. ತೀವ್ರ ನಿತ್ರಾಣಗೊಂಡಿದ್ದ ರ‍್ಯಾಂಬೋಗೆ ವೈದ್ಯರು ನಡುರಾತ್ರಿಯವರೆಗೂ ಏನೆಲ್ಲಾ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ ಎಂದು ತರಬೇತುದಾರ ಹೆಡ್ ಕಾನ್ಸೇಟೇಬಲ್ ಎಚ್.ಎಸ್.ಸುಕುಮಾರ್ ತಿಳಿಸಿದರು.
ಸ್ಪೋಟಕ ಪತ್ತೆಯಂಥ ಕಾಯ೯ದಲ್ಲಿ ಮೊದಲಿದ್ದ ರ್ಯಾಂಬೋಸ್ಪೋಟಕ ಪತ್ತೆ ಕಾಯ೯ಕ್ಕೆ ಮುಖ್ಯವಾಗಿ ರ‍್ಯಾಂಬೋ ಸಾಗುತ್ತಿದ್ದ. ಜತೆಗೆ ಕೊಡಗಿನಲ್ಲಿ ಅಪರಾಧ ಪತ್ತೆ ಕಾಯ೯ದ ವಿವಿಧ ಕತ೯ವ್ಯಕ್ಕೂ ನಿಯೋಜಿತನಾಗುತ್ತಿದ್ದ. ಪ್ರಧಾನಿ ಮೋದಿ ಕಾಯ೯ಕ್ರಮಗಳು ಇದ್ದಾಗ ಮೊದಲು ಸ್ಥಳ ತಪಾಸಣೆ ಮಾಡುತ್ತಿದ್ದ ಡಾಗ್ ಸ್ಯ್ಕಾಡ್ ನಲ್ಲಿ ಕೊಡಗಿನ ರ‍್ಯಾಂಬೋ ಕೂಡ ಇರುತ್ತಿದ್ದ. ಗಣ್ಯಾತಿಗಣ್ಯರ ಕಾಯ೯ಕ್ರಮಗಳು, ಸ್ಪೋಟಕ ಪತ್ತೆಯಂಥ ಕಾಯ೯ಗಳಿಗೆ ರ‍್ಯಾಂಬೋ ರಾಜ್ಯದ ಬಹುತೇಕ ಕಡೆ ಕತ೯ವ್ಯ ನಿವ೯ಹಿಸಿ ಮರಳಿ ಮಡಿಕೇರಿಯ ಗೂಡಿಗೆ ಸೇರುತ್ತಿತ್ತು.
ಅಂತರರಾಷ್ಟ್ರೀಯ ಏರ್ ಶೋ ನಲ್ಲಿ ರ‍್ಯಾಂಬೋ ಗೆ ಪ್ರಶಂಸನಾ ಪತ್ರ
ಬೆಂಗಳೂರಿನ ಪ್ರತಿಷ್ಟಿತ ಅಂತರರಾಷ್ಟ್ರೀಯ ಏರ್ ಶೋ ನಲ್ಲಿ ಅತ್ಯುತ್ತಮ ಕತ೯ವ್ಯ ನಿವ೯ಹಣೆಗಾಗಿ ರ‍್ಯಾಂಬೋ ಗೆ ಪ್ರಶಂಸನಾ ಪತ್ರ ಕೂಡ ಸಿಕ್ಕಿದ್ದು ಕೊಡಗು ಪೊಲೀಸ್ ಗೆ ಹೆಮ್ಮೆ ತಂದಿತ್ತು. ಹಾರಂಗಿ ಅಣೆಕಟ್ಟು, ರಾಜಾಸೀಟ್,. ಕೋಟ್೯, ಬಸ್ ಸ್ಟಾಂಡ್ ಸೇರಿದಂತೆ ಕೊಡಗಿನ ಪ್ರಮುಖ ಸ್ಥಳಗಳಲ್ಲಿಯೂ ವಾರಕ್ಕೊಮ್ಮೆ ರ‍್ಯಾಂಬೋ ಪೊಲೀಸ್ ತಪಾಸಣೆ ನಡೆಸಲಾಗುತಿತ್ತು. ಸಾಹಸಿ ಮನೋಭಾವದ ರ‍್ಯಾಂಬೋ ಸವಾಲಿನ ಕಾರ್ಯಕ್ಕೆ ಸೈ ಎನ್ನುತ್ತಿತ್ತು.
ವಿಧೇಯ ಮತ್ತು ಕತ೯ವ್ಯ ಪ್ರಜ್ಞೆಯ ರ‍್ಯಾಂಬೋ 7 ವಷ೯ಗಳಿಂದ ಸಲುಹಿದ್ದೆ
ಇಂಥ ಶ್ವಾನ ದೊರಕುವುದು ಬಹಳ ಅಪರೂಪ, ರ‍್ಯಾಂಬೋ ಇಲ್ಲದ ನಾಳೆಗಳನ್ನು ಯೋಚನೆ ಮಾಡಲಾಗುತ್ತಿಲ್ಲ. ಎಂದು ವಿಷಾಧ ವ್ಯಕ್ತಪಡಿಸಿದವರು ರ‍್ಯಾಂಬೋ ತರಬೇತುದಾರರಾಗಿದ್ದ ಹೆಡ್ ಕಾನ್ಸೇಟೇಬಲ್ ಎಚ್.ಎಸ್.ಸುಕುಮಾರ್.
ಇನ್ನೊಂದು ವಾರದಲ್ಲಿ ರ‍್ಯಾಂಬೋ ಹುಟ್ಟು ಹಬ್ಬವಿತ್ತು
ಇನ್ನು 7 ದಿನ ಕಳೆದಿದ್ದರೆ ರ‍್ಯಾಂಬೋವಿನ ಹುಟ್ಟು ಹಬ್ಬವಿತ್ತು. ಅಕ್ಟೋಬರ್ 15 ರಂದು ರ‍್ಯಾಂಬೋ ಜನ್ಮದಿನವಾಗಿತ್ತು. ಆದರೆ ದಿನ ಹತ್ತಿರ ಬರುತ್ತಿರುವಂತೆಯೇ ರ‍್ಯಾಂಬೋ ಶಾಶ್ವತವಾಗಿ ಕಣ್ಣು ಮುಚ್ಚಿದ ಎಂದು ಶ್ವಾನದಳದ ಮುಖ್ಯಸ್ಥ ಜಿತೇಂದ್ರ ರೈ ಕಂಬನಿ ಮಿಡಿದರು.
ಸಕಲ ಗೌರವದೊಂದಿಗೆ ಅಂತಿಮನಮನ
ಪ್ರಸ್ತುತ ಕೊಡಗು ಶ್ಲಾನದಳದಲ್ಲಿ ಪ್ರಥ್ವಿ, ಶೌಯ೯ , ಲಿಯೋ ಎಂಬ ಮೂರು ಶ್ವಾನಗಳಿದೆ. ಮಡಿಕೇರಿಯ ಪೊಲೀಸ್ ಕವಾಯತು ಮೈದಾನದ ಪಕ್ಕದ ಜಾಗದಲ್ಲಿ ರ‍್ಯಾಂಬೋ ಅಂತ್ಯಕ್ರಿಯೆ. ಕಾನೂನು ಸಂರಕ್ಷಕನಾಗಿದ್ದ ದುಡಿದ ರ‍್ಯಾಂಬೋ ಗೆ ಪೊಲೀಸ್ ಇಲಾಖೆಯು ಗೌರವಪೂರ್ವಕವಾಗಿ ಅಂತಿಮನಮನ ಸಲ್ಲಿಸಿದೆ.
key words : Kodagu’s-Rambo-formerly-explosive-etection-only-memory