ಬೆಂಗಳೂರು, ಸೆಪ್ಟೆಂಬರ್ 14, 2022(www.justkannada.in): ಇತ್ತೀಚೆಗೆ ಬ್ರಿಟನ್ ರಾಣಿ ಎಲಿಜಬತ್ ಅವರು ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು. ಆಗ ಅವರ ವಶದಲ್ಲಿರುವ ವಿಶ್ವದ ಅತ್ಯಂತ ದುಬಾರಿ ಕೋಹಿನೂರ್ ವಜ್ರದ ಕುರಿತು ಎಲ್ಲೆಡೆ ಚರ್ಚೆಗಳಾದವು. ಆ ಅಮೂಲ್ಯ ವಜ್ರವನ್ನು ಭಾರತಕ್ಕೆ ಹಿಂದಿರುಗಿಸಬೇಕು ಎನ್ನುವುದು ಅನೇಕರ ಒತ್ತಾಯವಾಗಿದೆ.
ಅನೇಕರು ತಿಳಿಸುವ ಪ್ರಕಾರ ಈ ಅಮೂಲ್ಯವಾದ ವಜ್ರವನ್ನು ಮೂಲತಃ ಕರ್ನಾಟಕದಲ್ಲಿ ಪಡೆಯಲಾಯಿತಂತೆ. ಆದರೆ ಇಲ್ಲಿ ದುಃಖ ಪಡಬೇಕಾದ ಸಂಗತಿ ಏನೆಂದರೆ ಈ ಅತ್ಯಮೂಲ್ಯ ವಜ್ರ ದೊರೆತಂತಹ ಆ ಸ್ಥಳ ಪ್ರಸ್ತುತ ನಿರ್ಲಕ್ಷಕ್ಕೀಡಾಗಿದೆ. ಕೋಹಿನೂರ್ ವಜ್ರ ೧೦೫.೬ ಕ್ಯಾರೆಟ್ ತೂಕವಿದ್ದು, ಇದನ್ನು ವಿಶ್ವದ ಅತ್ಯಂತ ಅಮೂಲ್ಯ ಹಾಗೂ ದುಬಾರಿ ವಜ್ರವೆಂದೇ ಹೇಳಲಾಗುತ್ತದೆ. ಈ ವಜ್ರದ ಹರಳನ್ನು ೧೪ನೇ ಶತಮಾನದಲ್ಲಿ ಭಾರತದಲ್ಲಿ ಆವಿಷ್ಕರಿಸಲಾಯಿತು.
ಕರ್ನಾಟಕದ ಇತಿಹಾಸಕಾರರ ಪ್ರಕಾರ ಈ ಕೋಹಿನೂರ್ ವಜ್ರವನ್ನು ಯಾದಗಿರಿ ಜಿಲ್ಲೆಯ ಷಹಾಪುರ ತಾಲ್ಲೂಕಿನ ಕೃಷ್ಣ ನದಿಯ ದಂಡೆಯ ಮೇಲಿರುವ ಕೊಲ್ಲೂ ಗ್ರಾಮದಲ್ಲಿ ಪತ್ತೆ ಮಾಡಲಾಯಿತಂತೆ. ಆದರೆ ಆ ಸ್ಥಳ ಪ್ರಸ್ತುತ ಬಹಳ ನಿರ್ಲಕ್ಷ್ಯ ಸ್ಥಿತಿಯಲ್ಲಿದೆ. ಈ ಹಿಂದೆ ಈ ಸ್ಥಳದಲ್ಲಿ ಈ ಸ್ಥಳದ ಮಹತ್ವವನ್ನು ತಿಳಿಸುವ ಒಂದು ಫಲಕವಿತ್ತು. ಆದರೆ ಈ ಫಲಕವನ್ನು ತೆಗೆಯಲಾಗಿದ್ದು ಇಡೀ ಪ್ರದೇಶ ಅನಗತ್ಯ ಕಳೆಗಳಿಂದ ತುಂಬಿ ಹೋಗಿದೆ.
ಈ ಕುರಿತು ಮಾತನಾಡಿದ ಕಾಲೇಜು ವಿದ್ಯಾರ್ಥಿ ಸಂದೀಪ್ ಆರ್. ಅವರು, “ನಮ್ಮ ದೇಶದಲ್ಲಿ ನಮಗೆ ಇಂತಹ ಅತ್ಯಮೂಲ್ಯ ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಅದನ್ನು ಸ್ಮಾರಕ ರೂಪದಲ್ಲಿ ಸಂರಕ್ಷಿಸಿ ಪ್ರೋತ್ಸಾಹಿಸುವ ಪದ್ಧತಿಯೇ ಇಲ್ಲ. ಇದು ನಿಜವಾದ ಐತಿಹಾಸಿಕ ಸ್ಥಳವಾಗಿದ್ದು, ಸ್ಥಳೀಯ ಆಡಳಿತ ಹಾಗೂ ರಾಜ್ಯ ಸರ್ಕಾರ ಇಂತಹ ಸ್ಥಳಗಳನ್ನು ಅಭಿವೃದ್ಧಿಪಡಿಸಬೇಕು. ಅದರಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಆಗಲೇ ಹೇಳಿದಂತೆ ನಮಗೆ ನಮ್ಮ ಪಾರಂಪರಿಕ ಸ್ಥಳಗಳನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಪರಿಪಾಠವೇ ಇಲ್ಲ,” ಎಂದರು.
‘ದಿ ಫರ್ಗಟನ್ ಎಂಪೈರ್’ ಎಂಬ ಪುಸ್ತಕದ ಸಂಪಾದಕರಾದ ಜಡ್ಜ್ ರಾಬರ್ಟ್ ಸೀವೆಲ್ ಅವರು ಈ ವಜ್ರವನ್ನು ಇಲ್ಲಿಂದಲೇ ಪಡೆಯಲಾಯಿತು ಎಂದು ಬರೆದಿರುವುದಾಗಿ ಮೂಲಗಳು ತಿಳಿಸುತ್ತವೆ.
ಆದರೆ ಇನ್ನೂ ಕೆಲವರು ಈ ವಿಷಯವನ್ನು ಒಪ್ಪುವುದಿಲ್ಲ. ಇತರರು ಈ ಅಮೂಲ್ಯವಾದ ವಜ್ರ, ಕಾಕತೀಯ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಪತ್ತೆಯಾಯಿತು. ಇದು ಆಗಿನ ಒಂದು ದೇವತೆಯ ಕಣ್ಣಾಗಿತ್ತು ಎನ್ನುತ್ತಾರೆ. ನಂತರದ ದಿನಗಳಲ್ಲಿ ಈ ಅಮೂಲ್ಯ ವಜ್ರವನ್ನು ಮಲಿಕ್ ಕಫೂರ್ (ಅಲ್ಲಾವುದ್ದಿನ್ ಖಿಲ್ಜಿಯ ಮಂತ್ರಿ) ಅದನ್ನು ಲೂಟಿ ಮಾಡಿದನಂತೆ. ನಂತರದಲ್ಲಿ ಈ ವಜ್ರ ಅನೇಕ ಮೊಘಲ್ ಸಾಮ್ರಾಜ್ಯದ ರಾಜರ ಕೈಬದಲಾಯಿತು. ಸಿಖ್ ಮಹಾರಾಜ ರಣಜಿತ್ ಸಿಂಗ್ ಲಾಹೋರ್ ನಲ್ಲಿ ಈ ವಜ್ರವನ್ನು ವಶಕ್ಕೆ ಪಡೆದುಕೊಂಡನಂತೆ. ನಂತರದಲ್ಲಿ ಈತ ಈಗಿನ ಭಾರತದ ಪಂಜಾಬ್ಗೆ ಆಗಮಿಸಿದನಂತೆ.
ಈ ವಜ್ರವನ್ನು ೧೮೪೯ರಲ್ಲಿ ಮಹಾರಾಜ ರಣಜಿತ್ ಸಿಂಗ್ ನ ಮಗ ದಿಲೀಪ್ ಸಿಂಗ್ ನ ಆಡಳಿತಾವಧಿಯಲ್ಲಿ ಬ್ರಿಟಿಷರು ಪಂಜಾಬ್ ಅನ್ನು ವಶಕ್ಕೆ ಪಡೆದುಕೊಂಡಾಗ ರಾಣಿ ವಿಕ್ಟೋರಿಯಾ ಈ ವಜ್ರದ ಒಡತಿಯಾದರಂತೆ.
ಒರಿಸ್ಸಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯೊಂದು ಈ ಕೋಹಿನೂರ್ ವಜ್ರ ಭಗವಾನ್ ಜಗನ್ನಾಥನ ಸ್ವತ್ತು ಎಂದು ಹೇಳಿಕೊಂಡಿದ್ದು, ಆ ವಜ್ರವನ್ನು ಪುರಿ ದೇವಾಲಯಕ್ಕೆ ಹಿಂದಿರುಗಿಸುವಂತೆ ಭಾರತದ ಈಗಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೋರಿದೆ.
ಸಂಪಾದಕ ಹಾಗೂ ಇತಿಹಾಸಕಾರ ವಿಲಿಯಂ ಡಾಲ್ರಿಂಪೈಲ್ ಅವರು ತಮ್ಮ ಪುಸ್ತಕದಲ್ಲಿ ಬರೆದಿರುವಂತೆ, ಸಿಖ್ ದೊರೆ ದುಲೀಪ್ ಸಿಂಗ್ ಈ ಅಮೂಲ್ಯವಾದ ಕೋಹಿನೂರ್ ವಜ್ರವನ್ನು ರಾಣಿ ವಿಕ್ಟೋರಿಯಾಗಿ ಹಸ್ತಾಂತರಿಸಿದ ನಂತರ ಬಹಳ ವ್ಯಥೆ ಪಟ್ಟಿದ್ದಾಗಿ ಬರೆದಿದ್ದಾರೆ.
ಭಾರತ ಸರ್ಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಹಿಂದೆ ತಿಳಿಸಿದಂತೆ ಕೋಹಿನೂರ್ ವಜ್ರದ ಅಂದಾಜು ಮೌಲ್ಯ ೨೦೦ ಮಿಲಿಯನ್ ದಶಲಕ್ಷ ಯುಎಸ್ ಡಾಲರ್ ಗಳು. ಆದರೆ ಈ ವಜ್ರವನ್ನು ಕದಿಯಲಿಲ್ಲ ಅಥವಾ ಒತ್ತಾಯಪೂರ್ವಕವಾಗಿ ಬ್ರಿಟಿಷರು ಅದನ್ನು ಕಸಿದುಕೊಳ್ಳಲಿಲ್ಲ, ಬದಲಿಗೆ ಪಂಜಾಬ್ನ ಆಗಿನ ಆಡಳಿತಗಾರರು ಈಸ್ಟ್ ಇಂಡಿಯಾ ಕಂಪನಿಗೆ ಅದನ್ನು ನೀಡಿದ್ದರಂತೆ.
೯೬-ವರ್ಷ-ವಯಸ್ಸಿನ ರಾಣಿ ಎಲಿಜಿಬತ್ ಅವರು ಯುಕೆನ ಅತ್ಯಂತ ದೀರ್ಘಾವಧಿ ರಾಣಿಯಾಗಿದ್ದರು. ಅವರು ಕಳೆದ ಗುರುವಾರದಂದು ಇಹಲೋಕ ತ್ಯಜಿಸಿದರು. ಈ ಅತ್ಯಮೂಲ್ಯ ಕೋಹಿನೂರ್ ವಜ್ರದಿಂದ ಅಲಂಕರಿಸಿರುವ ಕಿರೀಟ ಈಗ ಮುಂದಿನ ರಾಜ/ರಾಣಿಗೆ ಹಸ್ತಾಂತರವಾಗುತ್ತದೆ. ಅಂದರೆ ಯುಕೆನ ಮುಂದಿನ ರಾಣಿ ಕ್ಯಾಮಿಲ್ಲಾ ಪಾರ್ಕರ್ ಬೌಲ್ಸ್ ವಶವಾಗಲಿದೆ.
ಪ್ರಸ್ತುತ ಕೋಹಿನೂರ್ ವಜ್ರವನ್ನು, ಇಂಗ್ಲೆಂಡ್ ನ ರಾಣಿಯಾಗಿ ಆಡಳಿತ ನಡೆಸಿದಂತಹ ರಾಣಿ ಎಲಿಜಿಬತ್ II ಅವರು ಧರಿಸುತ್ತಿದ್ದ ಪ್ಲಾಟಿನಂನಿಂದ ತಯಾರಿಸಿರುವ ಕಿರೀಟಕ್ಕೆ ಅಲಂಕರಿಸಲಾಗಿದೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Kohinoor- diamond, birthplace – sad