ಕೋಲಾರ,ನವೆಂಬರ್,1,2022(www.justkannada.in): ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಹಣದ ಅಬ್ಬರ ಇದೆ. ಇದಕ್ಕೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕುಟುಕಿದರು.
ಮುಳಬಾಗಲು ತಾಲ್ಲೂಕು ಕುರುಡುಮಲೆ ಕ್ಷೇತ್ರದ ಗಣಪತಿ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಂತರ ಬಹುನಿರೀಕ್ಷಿತ ‘ಪಂಚರತ್ನ ಕಾರ್ಯಕ್ರಮ’ಗಳಿಗೆ ಚಾಲನೆ ನೀಡಿ ಮಾತನಾಡಿದರು.
‘ಕರ್ನಾಟಕದ ಜನರಿಗಾಗಿ ಈ ಕಾರ್ಯಕ್ರಮ ರೂಪಿಸಿದ್ದೇನೆ. ರಾಜ್ಯದ 22 ಜಿಲ್ಲೆಗಳ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 30ರಿಂದ 40 ಗ್ರಾಮಗಳಿಗೆ ಭೇಟಿ ನೀಡಿ ನಮ್ಮ ಕಾರ್ಯಕ್ರಮಗಳ ವಿವರಗಳನ್ನು ಒದಗಿಸುತ್ತೇವೆ’ ಎಂದು ಕುಮಾರಸ್ವಾಮಿ ಘೋಷಿಸಿದರು.
‘ರಥಯಾತ್ರೆಗಾಗಿ ಆಕರ್ಷಕ ಟ್ಯಾಬ್ಲೋಗಳನ್ನು ರೂಪಿಸಲಾಗಿದೆ. ಉಚಿತ ಶಿಕ್ಷಣ, ಉಚಿತ ಆರೋಗ್ಯ, ರೈತರಿಗೆ ರೈತ ಚೈತನ್ಯ ಕಾರ್ಯಕ್ರಮ, ಕೃಷಿಯಲ್ಲಿ ರೈತ ಸಾಲಗಾರ ಆಗದಂತೆ ಕಾರ್ಯಕ್ರಮ, ಪ್ರತಿ ಕುಟುಂಬಕ್ಕೆ ಉದ್ಯೋಗ ಭರವಸೆ, ಹಿರಿಯ ನಾಗರಿಕರಿಗೆ ಗೌರವ ಧನ, ವಿಕಲಚೇತನರು, ವಿಧವೆಯರಿಗೆ ಗೌರವಧನ ವ್ಯವಸ್ಥೆ ಸೇರಿದಂತೆ ಹಲವು ಜನಸ್ನೇಹಿ ಕಾರ್ಯಕ್ರಮಗಳನ್ನು ನಾವು ಅಧಿಕಾರಕ್ಕೆ ಬಂದರೆ ಜನರಿಗೆ ಕೊಡುತ್ತೇವೆ’ ಎಂದು ಹೆಚ್.ಡಿ ಕುಮಾರಸ್ವಾಮಿ ನುಡಿದರು.
‘ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಹಣದ ಅಬ್ಬರ ಇದೆ. ಇದಕ್ಕೆ ಜನರು ತಕ್ಕ ಉತ್ತರ ಕೊಡುತ್ತಾರೆ. ಜೆಡಿಎಸ್ ಮುಗಿದು ಹೋಗಿದೆ ಎನ್ನುವವರಿಗೆ ಇಲ್ಲಿಂದಲೇ ಉತ್ತರ ಕೊಡುತ್ತೇವೆ. ಇಂದಿನಿಂದ ಒಂದು ತಿಂಗಳು ಮೊದಲ ಹಂತದ ರಥಯಾತ್ರೆ ನಡೆಸಲಿದ್ದೇವೆ ಎಂದು ಹೆಚ್.ಡಿಕೆ ತಿಳಿಸಿದರು.
Key words: kolar-jds-pancharatna rathayatre-Former CM-HD Kumaraswamy