ಕೊಳ್ಳೇಗಾಲ, ಜು.23, 2020 : (www.justkannada.in news) ಇಲ್ಲಿನ ಮರಡಿಗುಡ್ಡದ ಮೇಲಿಂದ ಕ್ಯಾಮೆರಾ ಕಣ್ಣಿಗೆ ಮೈಸೂರಿನ ಚಾಮುಂಡಿಬೆಟ್ಟ ಗೋಚರಿಸಿರುವ ದೃಶ್ಯ ಕುತೂಹಲ ಮೂಡಿಸಿದ್ದು, ಇದೀಗ ಹಲವಾರು ಚರ್ಚೆಗೆ ಗ್ರಾಸವಾಗಿದೆ.
ಅವಿಭಜಿತ ಮೈಸೂರು ಜಿಲ್ಲೆಗೆ ಸೇರಿದ್ದ ಕೊಳ್ಳೇಗಾಲ ಆನಂತರ 90 ರ ದಶಕದಲ್ಲಿ ಚಾಮರಾಜನಗರ ಜಿಲ್ಲೆಗೆ ಸೇರಿತು. ಕೊಳ್ಳೇಗಾಲ ಅಂದ್ರೆ ಈಗಲೂ ಬಹುತೇಕರು ನೆನಪಿಸಿಕೊಳ್ಳುವುದು ಮಾಟ,ಮಂತ್ರಕ್ಕೆ ಫೇಮಸ್ ಅಂಥ. ಆದರೆ ಅದು, ರೇಷ್ಮೆ, ಚಿನ್ನದ ವ್ಯಾಪಾರಕ್ಕೂ ಹೆಚ್ಚು ಜನಪ್ರಿಯತೆ ಪಡೆದಿರುವುದು ವಿಶೇಷ.
ಇಂಥ ಕೊಳ್ಳೇಗಾಲ, ಇದೀಗ ಕರೋನಾ ಕಾಲದಲ್ಲಿ ಮೈಸೂರಿನ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಯೊಂದಕ್ಕೆ ನಾಂದಿಯಾಡಿದೆ. ಅದಕ್ಕೆ ಕಾರಣ, ಇಲ್ಲಿನ ಮರಡಿಗುಡ್ಡದ ಮೇಲಿಂದ ತೆಗೆದಿರುವ ಮೈಸೂರಿನ ಚಾಮುಂಡಿಬೆಟ್ಟದ ಫೋಟೋ.
ಕೊಳ್ಳೇಗಾಲದ ಭಗತ್ ಸತ್ಯ ಎಂಬುವವರು ಈ ಚಿತ್ರ ಸೆರೆ ಹಿಡಿದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟು ದೂರದಿಂದ ಮೈಸೂರಿನ ಚಾಮುಂಡಿಬೆಟ್ಟ ಕಾಣಿಸುವ ಬಗ್ಗೆ ಕೆಲ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿ, ಇದ್ಯಾವುದೋ ಬೇರೆ ಪರ್ವತಗಳ ಸಾಲು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಜಸ್ಟ್ ಕನ್ನಡ ಡಾಟ್ ಇನ್, ಮೂಲತಃ ಕೊಳ್ಳೇಗಾಲದವರೇ ಆಗಿರುವ ಹಾಗೂ ಚಾಮುಂಡಿಬೆಟ್ಟವನ್ನು ಮಲಗಿರುವ ಮಹಿಷನಿಗೆ ಹೋಲಿಸಿ ವಿವಿರವಾದ ಮಾಹಿತಿ ಸಂಗ್ರಹಿಸಿ ಪ್ರಕಟಿಸಿರುವ ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ನಿರ್ದೇಶಕ ಡಾ. ಆರ್. ಗೋಪಾಲ್ ಅವರನ್ನು ಈ ಬಗ್ಗೆ ಮಾತನಾಡಿಸಿತು.
ದಶಕಗಳಿಗೂ ಹಿಂದೆ ಕೊಳ್ಳೇಗಾಲದ ಮರಡಿಗುಡ್ಡದಿಂದ ಮೈಸೂರಿನ ಚಾಮುಂಡಿಬೆಟ್ಟ ಗೋಚರಿಸುತ್ತಿತ್ತು. ಆಗೆಲ್ಲಾ ಪಟದ ಹಬ್ಬವೆಂದರೆ ಸಂಭ್ರಮವೋ ಸಂಭ್ರಮ. ಈ ವೇಳೆ ಮರಡಿಗುಡ್ಡದ ಮೇಲೆ ಸಾವಿರಾರು ಮಂದಿ ಸೇರಿ ಪಟ ಹಾರಿಸಿ ಖುಷಿ ಪಡುತ್ತಿದ್ದರು. ಜತೆಗೆ ಮೈಸೂರಿನ ಚಾಮುಂಡಿಬೆಟ್ಟವನ್ನು ನೋಡಿ ಕಣ್ ತುಂಬಿಕೊಳ್ಳುತ್ತಿದ್ದೆವು.
ಆದರೆ ಬಳಿಕ ಕಾಲಾನಂತರದಲ್ಲಿ ಬೆಟ್ಟ ಬರಿಗಣ್ಣಿಗೆ ಗೋಚರಿಸದಂತಾಯಿತು. ಬಹುಶಃ ಇದಕ್ಕೆ ಪರಿಸರದಲ್ಲಿನ ಮಾಲಿನ್ಯದ ಹೆಚ್ಚಳವೇ ಕಾರಣ ಇರಬೇಕು. ಈಗ ಮತ್ತೆ ಗೋಚರಿಸುತ್ತಿದೆ. ಇದಕ್ಕೆ ಕಾರಣ, ಲಾಕ್ ಡೌನ್ ಹಿನ್ನೆಲೆಯಲ್ಲಿ ಜನ-ಜೀವನ ಬಹುತೇಕ ಸಂಪೂರ್ಣ ಸ್ಥಬ್ಧಗೊಂಡಿದ್ದದ್ದು. ಪರಿಣಾಮ ಪರಿಸರದಲ್ಲಿನ ವಾಯು ಮಾಲಿನ್ಯ ಕಡಿಮೆಗೊಂಡು ಶುಭ್ರ ವಾತಾವರಣ ನಿರ್ಮಾಣವಾಗಿ ಈಗ ಬೆಟ್ಟ ಗೋಚರಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇತಿಹಾಸದ ಪುಟಗಳನ್ನು ಅವಲೋಕಿಸಿದರೆ, ಅಶೋಕ ಚಕ್ರವರ್ತಿ ಬೌಧ ಧರ್ಮದ ಪ್ರಚಾರಕ್ಕಾಗಿ ಮಹಾವಂಶ, ದೀಪವಂಶ ಎಂಬ ಬೌಧ ಪ್ರತಿಪಾಧಕರನ್ನು ಮಹಿಷಮಂಡಲದಿಂದ (ಇಂದಿನ ಮೈಸೂರು) ಕಳುಹಿಸಿದ್ದು, ಅಲ್ಲಿ ಮರಡಿಗುಡ್ಡದ ಉಲ್ಲೇಖವಿರುವುದು ಗಮನಿಸಬಹುದು ಎಂದು ಡಾ. ಆರ್.ಗೋಪಾಲ್ ನೆನಪಿಸಿಕೊಳ್ಳುತ್ತಾರೆ.
ಜಾನಪದದಲ್ಲೂ ಇದೆ ಪುರಾವೆ..
ಮೈಸೂರಿನ ಸುನಿತಾ ಮಂಜುನಾಥ್ ಅವರು ವಿವಿವರಿಸಿದ ಚಾಮುಂಡಿ ಹಾಗೂ ಮಹದೇಶ್ವರದ ಜಾನಪದ ಕಥೆಯಲ್ಲಿ ಕೊಳ್ಳೇಗಾಲದ ಮರಡಿಗುಡ್ಡದಿಂದ ಚಾಮುಂಡಿ ಬೆಟ್ಟ ಕಾಣುವ ಉಲ್ಲೇಖವಿದೆ. ಇದಕ್ಕೆ ಪೂರಕವಾಗಿ ಅವರ ಹಿರಿಯರು ಹೇಳುತ್ತಿದ್ದ ಕಥೆ ಹೀಗಿದೆ..
ಬೆಳಿಗ್ಗೆ ಬೆಳಿಗ್ಗೆ ಮಹದೇಶ್ವರ ಬೆಟ್ಟಕ್ಕೆ ‘ಪರಿಸೆ’ ಹೋಗೋ ಜೋಗಯ್ಯ ಬಂದಿದ್ದ. ‘ಪೆರ್ಸೆಗೋಂಟ್ವನಿ, ಏನಾದ್ರ ಕೊಡಿ’ ಅಂದ.. ಒಂಚ್ಚುರು ಅಕ್ಕಿ ಹಾಕಿ ಕಳಿಸಿದೆ ..
ಈ ಮಹದೇಶ್ವರ ಬೆಟ್ಟಕ್ಕೆ ಪರಿಸೆಗೆ ಹೋಗೋರನ್ನ ಅಜ್ಜಿ ಜೋಗಯ್ಯ ಅಂತ ಕರೀತಿದ್ಲು. ಮನೆಮನೆಯಲ್ಲಿ ಕೇಳಿ ಕೊಟ್ಟಿದ್ದನ್ನ ಪಡೆದು ಯಾವುದಾದ್ರೂ ದೇವಸ್ಥಾನದಲ್ಲಿ ಅಡುಗೆ ಮಾಡಿಕೊಂಡು ನಡೆದೇ ಬೆಟ್ಟ ಹತ್ತುತ್ತ ಇದ್ದರಂತೆ, ಮತ್ತೆ ಹಿಂದಕ್ಕೆ ಬರುವಾಗ ಬೆಟ್ಟದ ವಿಭೂತಿ ಕೊಟ್ಟು ಹೋಗ್ತಾ ಇದ್ರಂತೆ, ಪ್ರತಿ ವರ್ಷ ಹೀಗೆ ನಡೀತ್ತಿತ್ತಂತೆ..ಪೆರ್ಸೆಗೆ ಹೋಗೋರೋ ಅಂದ್ರೆ ಒಂದ್ ತರ ಗೌರವ ಇತ್ತಂತೆ. ಅಜ್ಜಿ ಇದ್ದಾಗ ಮಹದೇಶ್ವರನ ಕಥೆ ಹೇಳ್ತಾ ಇದ್ಳು. ಇದು ಅವಳ ‘version’ ..
ನಂಜುಂಡೇಶ್ವರ ಹೆಂಡ್ತಿ ಇದ್ರೂ ಚಾಮುಂಡಿನ ಪ್ರೀತಿಸ್ತಾನೆ (ಅಜ್ಜಿ ಹೇಳ್ತಾ ಇದ್ಳು ಮಡಿಕಂಡ್ಬಿಡ್ತಾನೆ!!).. ಸರಿ ಅವನ ಹೆಂಡ್ತಿ ಪಾರ್ವತಿ ಕೋಪಮಾಡ್ಕೊಳ್ತಾಳೆ .. ಚಾಮುಂಡಿನ ಬೈತಾಳೆ, ಚಾಮುಂಡಿ ನಂಜುಂಡೇಶ್ವರನಿಗೆ ‘ನೀ ಬರ್ಬೇಡ ನನ್ನ ನೋಡೋಕೆ’ ಅಂತಾಳೆ. ಸಿಟ್ಟುಮಾಡಿಕೊಂಡ ನಂಜುಂಡ ‘ನಿನ್ನ ಮುಖ ನೋಡೋದಿಲ್ಲ’ ಅಂತ ನಂಜನಗೂಡು ಬಿಟ್ಟು ದಕ್ಷಿಣಕ್ಕೆ ಹೊರಡ್ತಾನೆ. ಒಂದಷ್ಟು ದೂರ ಬಂದು ನೋಡ್ತಾನೆ ಚಾಮುಂಡಿ ಕಾಣ್ತಾಳೆ.. ಕೊಳ್ಳೇಗಾಲಕ್ಕೆ ಬರ್ತಾನೆ ಅಲ್ಲಿಯೂ ಚಾಮುಂಡಿ ಕಾಣ್ತಾಳೆ. (ಒಂದು ಪುಟ್ಟ ಗುಡ್ಡ ಇದೆ ಕೊಳ್ಳೇಗಾಲದಲ್ಲಿ ‘ಮರಡಿ (ಮಂಡಿ )ಗುಡ್ಡ ಅಂತಾರೆ . ಅಲ್ಲಿ ಮಹದೇಶ್ವರ ಮಂಡಿ ಊರಿದ ಗುರುತಿದೆ !!) ಇನ್ನೂ ಮುಂದೆ ಹೋಗಿ ಬೆಟ್ಟಗುಡ್ಡಗಳ ದಾಟಿ ನೋಡಿದಾಗ ಅಲ್ಲೂ ಚಾಮುಂಡಿ (ಬೆಟ್ಟ!) ಕಾಣ್ತಾಳೆ. ಮತ್ತಷ್ಟು ಮುಂದಕ್ಕೆ ಹೋಗಿ ಸಿಟ್ಟಿನಿಂದ ನೆಲವನ್ನ ಅದುಮುತ್ತಾನೆ ಮಹದೇಶ್ವರ.. ಏಳು ಬೆಟ್ಟಗಳ ನಡುವೆ ಅವನು ಅದುಮಿದ ಸ್ಥಳದಿಂದ ಚಾಮುಂಡಿ ಕಾಣೋದಿಲ್ಲ… ಅಲ್ಲೇ ನೆಲೆಸಿಬಿಡ್ತಾನೆ . ಹೀಗೆ ಸಾಗುವ ಕಥೆ ಮಹದೇಶ್ವರನ ಮಹಿಮೆಗಳನ್ನ ಕೂಡ ಹೇಳ್ತಾ ಹೋಗುತ್ತೆ …
ooooooo
key words : kollegal-maradigudda-Mysore-chamundi-hills-visible