ಕೊಪ್ಪಳ,ಜನವರಿ,30,2021(www.justkannada.in): ನಾನು ಕನಸಿನಲ್ಲಿ ಕೂಡ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವನಾಗುತ್ತೇನೆ ಎಂದು ಭಾವಿಸಿರಲಿಲ್ಲ.ಇದೆಲ್ಲ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಯ ಫಲ ಎಂದು ಕೊಪ್ಪಳ ಉಸ್ತುವಾರಿಗಳೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ, ಕೊಪ್ಪಳ ಜಿಲ್ಲೆಯ ಆರಾಧ್ಯ ದೈವ, ಜ್ಞಾನಜ್ಯೋತಿ, ಕಾಯಕಯೋಗಿ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಸಚಿವ ಬಿಸಿ ಪಾಟೀಲ್ ಮಾತನಾಡಿದರು. ಜಾತ್ರಾ ಮಹೋತ್ಸವಕ್ಕೆ ಇಂದು ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಕೊಪ್ಪಳ ಜಿಲ್ಲೆಯ ಉಸ್ತುವಾರಿಯಾಗದೇ ಹೋಗಿದ್ದರೆ ಈ ಸ್ವಾಮಿಯ ಜಾತ್ರೆ ನೋಡಲು ಸಾಧ್ಯವಾಗುತ್ತಿರಲಿಲ್ಲ. ಕೊಪ್ಪಳ ಉಸ್ತುವಾರಿಯಾಗಿರುವುದು ಪೂರ್ವನಜನ್ಮದ ಪುಣ್ಯ. ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಸಾಧಾರಣ ಜಾತ್ರೆಯಲ್ಲ. ಇತಿಹಾಸ ಪರಂಪರೆಯುಳ್ಳ ಜಾತ್ರೆಯಾಗಿರುವುದರಿಂದ ಲಕ್ಷ ಜನಸ್ತೋಮ ಸೇರುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಜಗತ್ತಿಗೆ ಅಂಟಿರುವ ತಲ್ಲಣಗೊಳಿಸಿರುವ ಕೋವಿಡ್ ಸೋಂಕಿನ ಕಾರಣದಿಂದಾಗಿ ಸರಳವಾಗಿ ಜಾತ್ರೆ ನಡೆಸಲು ಸ್ವಾಮೀಜಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚಿಸಲಾಯಿತು. ಜನರ ಆರೋಗ್ಯದ ದೃಷ್ಟಿಯಿಂದ ಸರಳವಾಗಿ ಆಚರಿಸಲು ತೀರ್ಮಾನಿಸಲಾಯಿತು. ಪದ್ಧತಿ ಪ್ರಕಾರ ಸಾಯಂಕಾಲ ರಥ ಎಳೆಯುವ ಪದ್ಧತಿಯಿದೆ. ಆದರೆ ಕೋವಿಡ್ ಕಾರಣದಿಂದಾಗಿ ಬೆಳಿಗ್ಗೆಯೇ ರಥ ಎಳೆದು, ಪದ್ಧತಿ ಪ್ರಕಾರ ಕಳಸವನ್ನಿಟ್ಟು ಪೂಜೆ ಮಾಡಲಾಗಿದೆ ಎಂದರು.
ಪ್ರತಿ ವರ್ಷ ಗವಿಸಿದ್ದೇಶ್ವರ ಅಜ್ಜನ ಜಾತ್ರೆಗೆ ಅಪಾರ ಭಕ್ತ ಗಣ ಸೇರುತ್ತಿತ್ತು, ಅಲ್ಲದೇ, ಜಾತ್ರೆಯಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂದೇಶ ನೀಡುವ ಕಾರ್ಯಕ್ರಮಗಳನ್ನು ಪೂಜ್ಯರು ಹಮ್ಮಿಕೊಳ್ಳುತ್ತಿದ್ದರು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಸರ್ಕಾರದ ನಿಯಮದಂತೆ ಅತ್ಯಂತ ಸರಳ ಹಾಗೂ ಸುರಕ್ಷಾ ನಿಯಮಗಳ ಪಾಲನೆ ಮಾಡುವುದರೊಂದಿಗೆ, ಪ್ರತಿ ವರ್ಷದ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಜನರು ಆದಷ್ಟು ಸಾಮಾಜಿಕ ಅಂತರದಲ್ಲಿ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಸಚಿವ ಬಿ.ಸಿ ಪಾಟೀಲ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಹಾಲಪ್ಪ ಆಚಾರ್ ಸೇರಿದಂತೆ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು.
Key words: Koppal – in charge minister- pre-eminent – Gavisiddheshwar-jatra mahotsav- minister -BC Patel.