ಕೊಯ್ನಾ ಕಂಪನ ಗಡಿ ಜನತೆ ತಲ್ಲಣ: ಮಹಾರಾಷ್ಟ್ರದ ಜತೆಗೆ ರಾಜ್ಯಕ್ಕೂ ಆತಂಕ

ಬೆಂಗಳೂರು:ಆ-3: ಭಾರಿ ಮಳೆಯಿಂದಾಗಿ ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಕೊಯ್ನಾ ಜಲಾಶಯ ವ್ಯಾಪ್ತಿಯಲ್ಲಿ ಪ್ರವಾಹ ಸ್ಥಿತಿ ನಿರ್ವಣವಾಗಿರು ವಾಗಲೇ ಡ್ಯಾಂನ ಸಮೀಪದಲ್ಲೇ ಭೂಮಿ ಕಂಪಿಸಿರುವುದು ಕರ್ನಾಟಕದ ಗಡಿ ಭಾಗದ ಜನತೆಯನ್ನು ಕಂಗಾಲಾಗಿಸಿದೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೊಯ್ನಾ ಜಲಾಶಯದ ಬಳಿ ಗುರುವಾರ ರಾತ್ರಿ 9.30ಕ್ಕೆ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆ 3.1 ಇತ್ತೆಂದು ಮಹಾರಾಷ್ಟ› ನೀರಾವರಿ ಇಲಾಖೆ ಮಾಹಿತಿ ನೀಡಿದೆ. ಸಹ್ಯಾದ್ರಿ ಘಟ್ಟಪ್ರದೇಶದಲ್ಲಿ ಉಗಮಸ್ಥಾನವಾದ ಮಹಾಬಲೇಶ್ವರದಿಂದ ಹರಿದು ಬರುವ ಕೃಷ್ಣಾ ನದಿಗೆ ಕೊಯ್ನಾ ಬಳಿ ನಿರ್ವಿುಸಿದ ಡ್ಯಾಂ 2,648 ಅಡಿ ಉದ್ದವಾಗಿದ್ದು, 105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಮಹಾರಾಷ್ಟ್ರದಲ್ಲೇ ಅತಿ ಎತ್ತರದ ಜಲಾಶಯ ಎಂಬ ಹೆಗ್ಗಳಿಕೆ ಹೊಂದಿದೆ. ಡ್ಯಾಂನಿಂದ 20 ಕಿ.ಮೀ. ದೂರದವರೆಗೂ ಗುರುವಾರ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದೆ. ಕೊಯ್ನಾ ಡ್ಯಾಂ 1964ರಲ್ಲಿ ನಿರ್ವಣಗೊಂಡಿದ್ದು, ಡ್ಯಾಂ ಸುತ್ತಮುತ್ತಲ ಪ್ರದೇಶದಲ್ಲಿ ಭೂಕಂಪನದ ಅನುಭವ ಹೊಸದಲ್ಲ. 1967ರ ಡಿಸೆಂಬರ್ 11ರಂದು ಕೊಯ್ನಾ ಪ್ರದೇಶದಲ್ಲಿ ಸಂಭವಿಸಿದ ಭೂಕಂಪನದಿಂದ (ರಿಕ್ಟರ್ ಮಾಪನದಲ್ಲಿ 6.6ರಷ್ಟು ತೀವ್ರತೆ) ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದರು; ಹಲವು ಸಾವಿರ ಜನ ಗಾಯಗೊಂಡಿದ್ದರು ಮತ್ತು ನಿರಾಶ್ರಿತರಾಗಿದ್ದರು. ನಂತರದ ದಿನಗಳಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಅಥಣಿ, ನಿಪ್ಪಾಣಿ, ಕಾಗವಾಡ ತಾಲೂಕುಗಳಲ್ಲಿ ನೆರೆ ಹಾವಳಿ ಉಂಟಾಗುವ ಸಾಧ್ಯತೆಯಿರು ವುದರಿಂದ ಜಿಲ್ಲಾಡಳಿತ 10 ಬೋಟ್​ಗಳ ಮೂಲಕ ಸಂತ್ರಸ್ತರನ್ನು ತೆರವುಗೊಳಿಸುವುದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರು ಮರಾಠಾ ಲಘು ಪದಾತಿದಳದ ಬ್ರಿಗೇಡಿಯರ್​ಗೆ ಪತ್ರ ಬರೆದಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿ ಹೇಳಿದ್ದಾರೆ.

ಎಲ್ಲೆಲ್ಲಿ ಆತಂಕ?

ಕೊಯ್ನಾ ಪ್ರದೇಶದಲ್ಲಿ ಭೂಕಂಪ ಸಂಭವಿಸಿದಲ್ಲಿ ಸತಾರಾ, ಸಾಂಗಲಿ, ಕೊಲ್ಲಾಪುರ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿರುವ ಕೃಷ್ಣಾ ನದಿ ತೀರದ ಸಾವಿರಾರು ಹಳ್ಳಿಗಳ ಜನತೆಗೆ ತೊಂದರೆಯಾಗಲಿದೆ. ಈ ಜಲಾಶಯದ ಎರಡೂ ಬದಿಗಳಲ್ಲಿ ಎತ್ತರದ ಗುಡ್ಡವಿರುವ ಕಾರಣ, ಬೃಹತ್ ಪ್ರಮಾಣದ ಜಲರಾಶಿ ಸಂಗ್ರಹ ವಾಗುವುದರಿಂದ ಇಲ್ಲಿ ಭೂಕಂಪ ಉಂಟಾಗಲು ಕಾರಣವಾಗುತ್ತದೆ. ಹೀಗಾಗಿಯೇ ಇದು ವೈಜ್ಞಾನಿಕವಾಗಿ ಅಷ್ಟೊಂದು ಸೂಕ್ತವಲ್ಲ ಎಂದು ಸರ್.ಎಂ. ವಿಶ್ವೇಶ್ವರಯ್ಯನವರು ಅಂದೇ ಹೇಳಿದ್ದರು.
ಕೃಪೆ:ವಿಜಯವಾಣಿ

ಕೊಯ್ನಾ ಕಂಪನ ಗಡಿ ಜನತೆ ತಲ್ಲಣ: ಮಹಾರಾಷ್ಟ್ರದ ಜತೆಗೆ ರಾಜ್ಯಕ್ಕೂ ಆತಂಕ

koyna-dam-maharashtra-karnataka-earthquake-magnitude-north-karnataka