ಬೆಂಗಳೂರು,ನ,26,2019(www.justkannada.in): ಮಧ್ಯರಾತ್ರಿಯಲ್ಲಿ ಸಂವಿಧಾನ ಕೆಲಸ ಮಾಡುತ್ತಿದೆ. ರಾಷ್ಟ್ರಪತಿಗಳು , ಪ್ರಧಾನಿ , ಕಾರ್ಯಾಲಯವೂ ಮಧ್ಯರಾತ್ರಿಯಲ್ಲಿ ಅ್ಯಕ್ಟೀವ್ ಆಗುತ್ತಿದೆ. ಸಂವಿಧಾನ ದುರ್ಬಳಕೆ ಚಟುವಟಿಕೆಗಳಿಗೆ ಸುಪ್ರೀಂಕೋರ್ಟ್ ಕಡಿವಾಣ ಹಾಕಿದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿ ವರ್ಮ ಕುಮಾರ್ ತಿಳಿಸಿದರು.
ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದಿಂದ ಕೆಪಿಸಿಸಿ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ, ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿ ವರ್ಮ ಕುಮಾರ್, ಹಿರಿಯ ನಾಯಕ ಬಿ.ಎಲ್. ಶಂಕರ್, ವಿಭಾಗದ ಅಧ್ಯಕ್ಷ ಸಿ.ಎಂ.ಧನಂಜಯ ಭಾಗಿಯಾಗಿದ್ದರು. ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷ ವೊಂದರ ಕಚೇರಿಗೆ ರವಿವರ್ಮ ಕುಮಾರ್ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ , ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ನ್ಯಾಯಾಲಯಗಳು ಮಾಡುತ್ತಿವೆ. ಕೋರ್ಟ್ ತೋರಿಸಿ ಜನರ ಅಸಮಾಧಾನದಿಂದ ತಪ್ಪಿಸಿಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳು ಅಧಿಕಾರವನ್ನು ಬುದ್ದಿಪೂರ್ವಕವಾಗಿಯೇ ನ್ಯಾಯಾಲಯಗಳಿಗೆ ಬಿಟ್ಟುಕೊಟ್ಟಿರುವುದು ವಿಷಾದಕರ. ಶಾಸಕಾಂಗವೇ ಇಂತಹ ಅಪಸವ್ಯಕ್ಕೆ ಕಾರಣ. ನ್ಯಾಯಾಲಯಕ್ಕೆ ದೋಷ ಕೊಡಲು ಹೋಗಲ್ಲ. ಕಾಂಗ್ರೆಸ್ ಪಕ್ಷ ಸೇರಿ ಎಲ್ಲ ಪಕ್ಷಗಳ ತಪ್ಪಿನಿಂದ ಪ್ರತಿಯೊಂದಕ್ಕೂ ನ್ಯಾಯಾಲಯಗಳನ್ನೇ ಅವಲಂಬಿಸಬೇಕಾಗಿದೆ. ಈಗ ಬರುತ್ತಿರುವ ತೀರ್ಪುಗಳಲ್ಲೂ ಇದು ಕಣ್ಣಿಗೆ ರಾಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನದ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿದೆ. ಮಧ್ಯರಾತ್ರಿಯಲ್ಲಿ ಸಂವಿಧಾನ ಕೆಲಸ ಮಾಡುತ್ತಿದೆ. ರಾಷ್ಟ್ರಪತಿಗಳು , ಪ್ರಧಾನಿ , ಕಾರ್ಯಾಲಯವೂ ಮಧ್ಯರಾತ್ರಿಯಲ್ಲಿ ಅ್ಯಕ್ಟೀವ್ ಆಗುತ್ತಿದೆ ಎಂದು ವ್ಯಂಗ್ಯವಾಡಿದ ರವಿವರ್ಮ ಕುಮಾರ್, ಕೇಂದ್ರ ಸಂಪುಟದ ಶಿಫಾರಸ್ಸು ಇಲ್ಲದೆ ಮಹಾರಾಷ್ಟ್ರದ ರಾಷ್ಟಪತಿ ಅಳ್ವಿಕೆಯನ್ನು ತೆಗೆಯಲಾಗುತ್ತದೆ. ಅಂತಹ ಸಂವಿಧಾನ ದುರ್ಬಳಕೆ ಚಟುವಟಿಕೆಗಳಿಗೆ ಸುಪ್ರೀಂಕೋರ್ಟ್ ಕಡಿವಾಣ ಹಾಕಿದೆ. ಇದು ಸ್ವಾಗತಾರ್ಹ. ಸಂವಿಧಾನದ ಮೂಲ ಉದ್ದೇಶ ಎಲ್ಲಾ ಸಂಸ್ಥೆಗಳು ಹಾಗೂ ಅಂಗಗಳಿಗೆ ಚೌಕಟ್ಟು ಹಾಕುವುದು. ಸುಪ್ರೀಂ ಕೋರ್ಟ್ ಸಂವಿಧಾನದ ದಿನಾಚರಣೆ ದಿನ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ವಿಚಾರದಲ್ಲಿ ಸಂವಿಧಾನವನ್ನು ಎತ್ತಿಹಿಡಿದಿದೆ ಎಂದು ನುಡಿದರು.
ಎಲ್ಲ ಕಾನೂನುಗಳ ತಾಯಿ ಸಂವಿಧಾನ- ಬಿ.ಎಲ್ .ಶಂಕರ್.
ಇದೇ ವೇಳೆ ಮಾತನಾಡಿದ ಬಿ.ಎಲ್ .ಶಂಕರ್, ಎಲ್ಲ ಕಾನೂನುಗಳ ತಾಯಿ ಸಂವಿಧಾನವಾಗಿದೆ. ಸಂವಿಧಾನಕ್ಕೆ ಅನುಗುಣವಾಗಿ ಕಾನೂನುಗಳು ಇರಬೇಕು. ದೇಶ ಎಂದರೆ ಮಣ್ಣಲ್ಲ ಮನುಷ್ಯರು ಎಂದು ಕವಿಯೊಬ್ಬರು ಹೇಳಿದ್ದಾರೆ. ಮನುಷ್ಯರಿಗಾಗಿಯೇ ಸಂವಿಧಾನ ಇದೆ ಎಂದು ತಿಳಿಸಿದರು.
ಈ ದೇಶಕ್ಕೆ ಸಂವಿಧಾನ ಬೇಕೆಂದು ಪ್ರತಿಪಾದಿಸಿದವರು ಪಂಡಿತ ಜವಾಹರ್ ಲಾಲ್ ನೆಹರು. ಅದಕ್ಕಾಗಿ ಒಂದು ವರದಿ ನೀಡಿದ್ದರು. ಅದು ನೆಹರು ವರದಿ ಎಂದು ಕರೆಯಲಾಗುತ್ತದೆ. 1930 ರಲ್ಲಿ ಬ್ರಿಟಿಷ್ ಸರ್ಕಾರದ ಮುಂದೆ ಈ ವರದಿ ಇರಿಸಲಾಗಿತ್ತು. ಮುಂದೆ ಸ್ವಾತಂತ್ರ್ಯ ನಂತರ 1947ರಲ್ಲಿ ಸಂವಿಧಾನ ರಚನಾ ಸಮಿತಿ ರಚಿಸಲಾಯಿತು ಎಂದು ಮಾಹಿತಿ ನೀಡಿದರು.
Key words: kpcc office- Constitution Day-Former Advocate General- Pro. Ravi Verma Kumar