ಬೆಂಗಳೂರು, ಸೆಪ್ಟೆಂಬರ್ 03,2021 (www.justkannada.in): ಮಡಿವಾಳ ಸಮುದಾಯದ ಮುಖಂಡರ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂವಾದ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಇತಿಹಾಸದ ಶ್ರೇಷ್ಠ ವ್ಯಕ್ತಿ ಮಡಿವಾಳ ಮಾಚಯ್ಯ ಅವರ ಪಾದಗಳಿಗೆ ನಮಿಸುತ್ತೇನೆ. ನಿಮ್ಮ ಸಮುದಾಯಕ್ಕೂ ನನಗೂ ಬಹಳ ಆತ್ಮೀಯ ಸಂಬಂಧ ಇದೆ. ನೀವು ನಿಮ್ಮ ನೋವು ಹೇಳಿಕೊಂಡಿದ್ದೀರಿ. ನೀವು ಯಾರಿ ಗೂ ಕಮ್ಮಿ ಇಲ್ಲ. ನಾನು ಪಕ್ಷದ ಅಧ್ಯಕ್ಷನಾದ ನಂತರ ಅನೇಕ ಸಮುದಾಯದ ನಾಯಕರು ನನ್ನನ್ನು ಭೇಟಿ ಮಾಡಿ ಸನ್ಮಾನ ಮಾಡಲು ಅವಕಾಶ ಕೋರಿದರು. ಆಗ ನಾನು, ಯಾರೂ ಬರಬೇಡಿ, ನಾನೇ ನಿಮ್ಮ ಬಳಿಗೆ ಬರುತ್ತೇನೆ ಎಂದು ಹೇಳಿದ್ದೆ. ಪಕ್ಷದ ಅಧ್ಯಕ್ಷನಾಗಿ ಎಲ್ಲ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ. ಬಸವಣ್ಣ, ಗಾಂಧಿ ಸೇರಿದಂತೆ ಹಲವರ ವಿಚಾರ ನಮ್ಮ ಸಿದ್ಧಾಂತ. ಯಾರಿಗೆ ಧ್ವನಿ ಇಲ್ಲವೋ ಅವರಿಗೆ ಧ್ವನಿ ನೀಡಬೇಕು. ನೊಂದವರ ಪರ ನಿಲ್ಲಬೇಕು ಎಂದು ನಾನೇ ಎಲ್ಲ ಸಮುದಾಯದವರನ್ನು ಭೇಟಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಮೀನುಗಾರರನ್ನು ಭೇಟಿ ಮಾಡಿದ್ದೇನೆ. ಒಬ್ಬ ಮೀನುಗಾರರನಿಂದ 10 ಉದ್ಯೋಗ ಸೃಷ್ಟಿಯಾಗುತ್ತದೆ. ನೇಕಾರರನ್ನು ಭೇಟಿ ಮಾಡಿದ್ದೇನೆ. ತಿಗಳರ ಸಮುದಾಯದವರನ್ನು ಭೇಟಿ ಮಾಡಿದ್ದೇನೆ. ಇಂದು ನಿಮ್ಮ ಬಳಿ ಬಂದಿದ್ದೇನೆ. ನೀವಿಲ್ಲದೇ ಈ ಸಮಾಜ ಇಲ್ಲ. ನೀವು ಬಟ್ಟೆ ಸ್ವಚ್ಛ ಮಾಡಿಕೊಡದಿದ್ದರೆ ಆಗುವುದಿಲ್ಲ. ನೀವು ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಬರುತ್ತಿರುವವರು. ನಿಮಗೆ ನಾವು ಶಕ್ತಿ ತುಂಬಬೇಕು. ನಿಮ್ಮಲ್ಲಿ ಕೆಲವರು ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ. ರಾಜಕೀಯವಾಗಿ ನೀವು ಇನ್ನು ಶಕ್ತಿ ಪಡೆಯಬೇಕು, ಬೆಳೆಯಬೇಕು ಎಂದಿದ್ದಾರೆ.
ದೇವರು ಬಲಿ ತೆಗೆದುಕೊಳ್ಳುವಾಗ ಕುದುರೆ, ಆನೆ, ಹುಲಿಯನ್ನು ಬಲಿ ಕೇಳುವುದಿಲ್ಲ. ಬಲಿ ಕೇಳುವುದು ಕುರಿ, ಕೋಳಿ, ಹೆಚ್ಚೆಂದರೆ ಕೋಣ ಮಾತ್ರ. ಅವು ಸಾದು ಪ್ರಾಣಿಗಳೆಂದು. ಆದೇರೀತಿ ಬಿಜೆಪಿ ಅವರು ಶಂಕರ್ ಅವರನ್ನು (ಮಾಜಿ ಸಚಿವ) ಬಲಿ ತೆಗೆದುಕೊಂಡಿದೆ. ಇಲ್ಲಿರುವ ಅನೇಕ ನಾಯಕರು ನಮ್ಮ ಸ್ನೇಹಿತರು. ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ನಾನು ನಿಮ್ಮ ಜತೆ ಇದ್ದೇನೆ ಎಂದು ಹೇಳಲು ಬಂದಿದ್ದೇನೆ. ನಾನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷ ರಾಷ್ಟ್ರ ಮಟ್ಟದಲ್ಲಿ ಜಾತಿ, ಧರ್ಮಗಳ ವಿಚಾರವಾಗಿ ಚರ್ಚೆ ಮಾಡುತ್ತಿದೆ. ನಿಮ್ಮ ನೋವು, ಸಮಸ್ಯೆಗೆ ಧ್ವನಿಯಾಗಿ ಕಾಂಗ್ರೆಸ್ ಪಕ್ಷ ಇರುತ್ತದೆ. ನಾನು ಕೂಡ ನಿಂತಿರುತ್ತೇನೆ. ನಿಮ್ಮ ಬೇಡಿಕೆಯನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ನಾವು ಪ್ರಣಾಳಿಕೆಯಲ್ಲಿ ಈ ವಿಚಾರ ಸೇರಿಸಿದ ಮೇಲೆ ಅದನ್ನು ಪೂರೈಸದೇ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗ ಎಲ್ಲರಿಗೂ ಜಾತಿ ಪಿಡುಗು ಬಂದಿದೆ. ಎಲ್ಲರೂ ಬಂದು ತಮ್ಮ, ತಮ್ಮ ಅಮುದಾಯಗಳ ಬಗ್ಗೆ ಲಕ್ಷ, ಲಕ್ಷಗಳಲ್ಲಿ ಲೆಕ್ಕ ಕೊಡುತ್ತಾರೆ. ಅವರ ಲೆಕ್ಕ ಕೇಳಿದರೆ ರಾಜ್ಯದ ಜನಸಂಖ್ಯೆ 20 ಕೋಟಿ ದಾಟುತ್ತದೆ. ನಿಮ್ಮ ನೋವು ಕೇಳಲು ಬೇರೆಯವರು ಬಂದಿದ್ದರೋ ಇಲ್ಲವೋ ನನಗೆ ಬೇಕಿಲ್ಲ. ಆದರೆ ರಾಜಕಾರಣಿಗಳು ನಿಮಗೆ ಅನ್ಯಾಯ ಮಾಡಿಕೊಂಡು ಬಂದಿರುವುದು ನಿಜ. ಅದನ್ನು ಸರಿಪಡಿಸಿ ನಿಮಗೆ ನ್ಯಾಯ ಒದಗಿಸಬೇಕು ಎಂಬುದು ನನ್ನ ಸಂಕಲ್ಪ ಎಂದು ಭರವಸೆ ನೀಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ನಿಮ್ಮ ಸಮುದಾಯಕ್ಕೆ ಅನೇಕ ನೆರವು ನೀಡಿದೆ. ಮುಂದೆಯೂ ನೀಡಲಿದೆ. ಕಾಂಗ್ರೆಸ್ ಮನೆ ಬಾಗಿಲು ನಿಮಗೆ ಸದಾ ತೆರೆದಿರುತ್ತದೆ. ನೀವು ಎಷ್ಟೇ ದೊಡ್ಡವರಾಗಿ ಬೆಳೆದರೂ ನಿಮ್ಮ ವೃತ್ತಿಯನ್ನು ಮಾತ್ರ ಬಿಡಬೇಡಿ. ಅದೇ ನಿಮ್ಮ ಹೆಮ್ಮೆ. ನಿಮ್ಮ ಪರವಾಗಿ ಎಲ್ಲಿ, ಯಾವ ರೀತಿ ಹೋರಾಡಬೇಕೋ ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಿಳಿಸಿದ್ದಾರೆ.