ಮೈಸೂರು,ಮೇ,29,2020(www.justkannada.in): ಬಿಜೆಪಿ ಅಧಿಕಾರ ಬಂದಾಗಿನಿಂದ 25 ಸಾರ್ವಜನಿಕ ಕಂಪನಿಗಳನ್ನು ಖಾಸಗೀಕರಣಗೊಳಿಸಿದೆ. ಈಗಾಗಲೇ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ, ರೈಲ್ವೆ ಸೇರಿದಂತೆ ಹಲವು ಕಂಪೆನಿಗಳನ್ನು ಖಾಸಗೀಕರಣಗೊಳಿಸಿದ್ದಾರೆ. ಈಗ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಬಿಜೆಪಿ ವಿರುದ್ದ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕಿಡಿ ಕಾರಿದರು.
ವಿದ್ಯುತ್ ಕಂಪನಿಗಳ ಖಾಸಗೀಕರಣ ವಿರೋಧಿಸಿ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್ , 13000 ಮೆಗಾವ್ಯಾಟ್ ನಷ್ಟು ವಿದ್ಯುತ್ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಏಷ್ಯಾದಲ್ಲೇ ಅತಿ ದೊಡ್ಡ ಸೋಲಾರ್ ವಿದ್ಯುತ್ ಪಾರ್ಕ್ ಮಾಡಿದ ಹೆಗ್ಗಳಿಕೆ ಕಾಂಗ್ರೆಸ್ ಸರ್ಕಾರದ್ದು. ದೇಶಾದ್ಯಂತ 6 ಕೋಟಿ ರೈತರ ವಿದ್ಯುತ್ ಪಂಪ್ ಸೆಟ್ ಇದೆ. ಖಾಸಗೀಕರಣಗೊಂಡರೆ ರೈತರಿಗೆ ಉಚಿತವಾಗಿ ವಿದ್ಯುತ್ ಸಿಗುವುದಿಲ್ಲ. ರಾಜ್ಯದಲ್ಲಿ ಸದ್ಯ ಯುನಿಟ್‌ಗೆ 6.79 ಪೈಸೆ ದರ ಇದೆ. ವಿದ್ಯುತ್ ವಲಯ ಖಾಸಗೀಕರಣಗೊಂಡರೆ ವಿದ್ಯುತ್ ದರ ಯುನಿಟ್‌ಗೆ ದ್ವಿಗುಣವಾಗಲಿದೆ. ಇದರ ಹೊರೆಯನ್ನು ಗ್ರಾಹಕರೇ ಹೊರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಷಯಗಳನ್ನು ಡೈವರ್ಟ್ ಮಾಡುವಲ್ಲಿ ಬಿಜೆಪಿ ನಂಬರ್ ಒನ್. ಈಗಾಗಲೇ ಬೆಂಗಳೂರಿನ ಫ್ಲೈ ಒವರ್ಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹೆಸರಿಡಲಾಗಿದೆ. ಅದನ್ನು ತೆಗೆದು ಸಾವರ್ಕರ್ ಹೆಸರಿಡಲು ಹೊರಟಿದ್ದಾರೆ. ಬಿಜೆಪಿ ಅಧಿಕಾರಾವಧಿಯಲ್ಲಿ ದೇಶದ ಜಿಡಿಪಿ ಅಧೋಗತಿಗಿಳಿದಿದೆ. ಬಿಜೆಪಿ ಇಡೀ ದೇಶವನ್ನೇ ಖಾಸಗೀಕರಣ ಮಾಡಲು ಹೊರಟಿದೆ. ಮಾನ್ಯ ಸಂಸದ ಪ್ರತಾಪ್ ಸಿಂಹ ಇದಕ್ಕೆ ಉತ್ತರಿಸಬೇಕು ಎಂದು ಲಕ್ಷ್ಮಣ್ ಆಗ್ರಹಿಸಿದರು.
Key words: KPCC- spokesperson- Laxman -opposes – privatization -power companies