ಮೈಸೂರು,ಜೂನ್,7,2021(www.justkannada.in): ಸಂಸದ ಪ್ರತಾಪ್ಸಿಂಹ ರವರ ಸಾಧನೆ ಏನು..? ಮೈಸೂರನ್ನ ಪ್ಯಾರೀಸ್ ಮಾಡುತ್ತೇವೆ ಎಂದು ನಿಮ್ಮ ಮೋದಿ ಹೇಳಿದ್ದರು. ಫೇಸ್ಬುಕ್ ಲೈವ್ ಮಾಡುವುದನ್ನು ಬಿಟ್ಟು ಜನತೆಗೆ ಏನು ಮಾಡಿದ್ದೀರಾ..? ಕೊಡಗಿನ ಜನತೆಗೆ ಏನು ಮಾಡಿದ್ದೀರಿ..?ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಮೆಡಿಕಲ್ ಮಾಫಿಯಾ, ಭೂ ಮಾಫಿಯಾ ಕುರಿತು ತನಿಖೆಯಾಗಬೇಕು. ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ಮಾಡಿರುವ ಆಪಾದನೆಗಳ ಕುರಿತು ನ್ಯಾಯಾಂಗ ತನಿಖೆಯಾಗಬೇಕು. ಐಎಎಸ್ ಅಧಿಕಾರಿಗಳ ಆಪಾದನೆಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದರು.
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಹರಹಾಯ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಈಗಾಗಲೇ ರಾಜ್ಯದ ಐದು ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಶತಕದ ಗಾಡಿ ದಾಟಿದೆ. ಜನರಿಂದ ಕೇಂದ್ರ ಸರ್ಕಾರ ಸುಲಿಗೆ ಮಾಡುತ್ತಿದೆ. ದಿನಬಳಕೆಯ ವಸ್ತುಗಳ ಬೆಲೆಯೂ ಸಹ ಗಗನಕ್ಕೇರಿದೆ. ಜನರು ಬದುಕಲಿಕ್ಕೆ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಯುಪಿಎ ಸರ್ಕಾರವಿದ್ದಾಗ ಪೆಟ್ರೋಲ್ ಬೆಲೆ 18 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಬಿಜೆಪಿಯವರು ರಸ್ತೆಗಿಳಿದು ಪ್ರತಿಭಟಿಸಿದ್ದರು. ಹೀಗಾಗಿ ಈಗ ಕಾಂಗ್ರೆಸ್ ಹೋರಾಟಕ್ಕೆ ಜನ ಸ್ಪಂದಿಸಬೇಕು. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದ ಎಲ್ಲರೂ ಹೋರಾಡಬೇಕು ಎಂದು ಮನವಿ ಮಾಡಿದರು.
ಮೊದಲು ಕೊರೊನಾ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಿ.
ರಾಜ್ಯದಲ್ಲಿ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಮೊದಲು ಕೊರೋನಾ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಿ. ಆ ಮೇಲೆ ಬೇಕಿದ್ದರೆ ಯಾರನ್ನು ಬೇಕಿದ್ದರೂ ಬದಲಾವಣೆ ಮಾಡಿಕೊಳ್ಳಿ. ಜನರು ಸಾಯುವ ಸಂದರ್ಭದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ಕೊರೊನಾ ಪರಿಸ್ಥಿತಿ ನಿರ್ವಹಣೆಗಿಂತ ಅಧಿಕಾರವೇ ಮುಖ್ಯ. ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.
ಸತ್ತವರ ಮನೆಗೆ ಹೋಗಿ ಸಾಂತ್ವನ ಹೇಳುತ್ತೀರಾ. ನಾಚಿಕೆ ಆಗಬೇಕು ಬಿಜೆಪಿಯವರಿಗೆ. ಇದುವರೆಗೂ ದೇಶದಲ್ಲಿ 42 ಲಕ್ಷ ಜನ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಸತ್ತವರಿಗೆ ಪರಿಹಾರ ನೀಡುವುದು ಬಿಟ್ಟು ಕಾವೇರಿ ಅಸ್ಥಿ ವಿಸರ್ಜಿಸುವ ನಾಟಕವಾಡುತ್ತಿದ್ದಾರೆ. ಸಾಂತ್ವನ ಹೇಳುವುದು ಬಿಟ್ಟು ಕೊರೊನಾದಿಂದ ಮೃತಪಟ್ಟವರಿಗೆ ಮೊದಲು ಪರಿಹಾರ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಎಂ. ಲಕ್ಷ್ಮಣ್ ಆಗ್ರಹಿಸಿದರು.
Key words: KPCC-Spokesperson- M Laxman- against- government – MP Pratap simha