ಮೈಸೂರು,ಆಗಸ್ಟ್,27,2021(www.justkannada.in): ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿ ಪ್ರಕರಣದ ವಿವರ ನೀಡಲು ಕೆಪಿಸಿಸಿ ವತಿಯಿಂದ ಸತ್ಯ ಶೋಧನ ಸಮಿತಿ ರಚನೆ ಮಾಡಲಾಗಿದ್ದು ಈ ಸಮಿತಿ ಮೈಸೂರಿಗೆ ಆಗಮಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೆಪಿಸಿಸಿ ವತಿಯಿಂದ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ನೇತೃತ್ವದಲ್ಲಿ ಸಾಮೂಹಿಕ ಅತ್ಯಾಚಾರ- ಸತ್ಯಶೋಧನಾ ಸಮಿತಿ ರಚನೆ ಮಾಡಲಾಗಿದ್ದು , ಈ ಸಮಿತಿ 12 ಮಂದಿ ಸದಸ್ಯರನ್ನ ಒಳಗೊಂಡಿದೆ. ಅತ್ಯಾಚಾರ ಪ್ರಕರಣದ ಕೂಲಂಕಷ ಅಧ್ಯಯನ ನಡೆಸಿ ಪ್ರಕರಣದ ವಿವರ ಮತ್ತು ಸರ್ಕಾರದ ವೈಫಲ್ಯಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಿ ಕೆಪಿಸಿಸಿಗೆ ವರದಿ ನೀಡಲು ಕಾಂಗ್ರೆಸ್ ನ ಸತ್ಯ ಶೋಧನ ಸಮಿತಿ ಮೈಸೂರಿಗೆ ಆಗಮಿಸಿದೆ. ಅತ್ಯಾಚಾರ ನೆಡೆದ ಘಟನಾ ಸ್ಥಳ, ಆಸ್ಪತ್ರೆ, ಪೊಲೀಸ್ ಠಾಣೆಗಳಿಗೆ ಈ ಸಮಿತಿಯು ಭೇಟಿ ನೀಡಿ ಮಾಹಿತಿ ಕಲೆ ಹಾಕಲಿದೆ.
ಇದೀಗ ಮೈಸೂರಿನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಘಟನಾ ಸ್ಥಳಕ್ಕೆ ಕೆಪಿಸಿಸಿ ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿಎಸ್ ಉಗ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಗ್ರಪ್ಪ ಜತೆ ಮಾಜಿ ಸಚಿವ ಎಚ್ ಎಂ ರೇವಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್,
ಕೆಪಿಸಿಸಿ ವಕ್ತಾರ ಎಂ ಲಕ್ಣ್ಮಣ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಸೇರಿ ಹಲವರು ಭಾಗಿಯಾಗಿದ್ದಾರೆ.
ಇದಕ್ಕೂ ಮುನ್ನ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿರುವ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಇಲ್ಲಿ ನಾವು ರಾಜಕೀಯ ಮಾಡಲು ಬಂದಿಲ್ಲ. ಮಾನವೀಯ ಮೌಲ್ಯಗಳ ಹರಣ ಆಗಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವ ಉದ್ದೇಶ ನಮ್ಮದಾಗಿದೆ. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಹೆಣ್ಣು ಮಕ್ಕಳ ರಕ್ಷಣೆ ಮಾಡದೇ ಒಂದು ಕಡೆ ಶ್ರೀರಾಮ ಜಪ, ಮತ್ತೊಂದು ಕಡೆ ರಾವಣನ ಪ್ರವೃತ್ತಿಗೆ ಪ್ರೋತ್ಸಾಹ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Key words: KPCC- Truth Finding Committee- arrives -Mysore – study -gang rape -case