ಮೈಸೂರು,ಮಾರ್ಚ್,11,2023(www.justkannada.in): ದೀನ ದಲಿತರ ಏಳಿಗೆಗೆ ಶ್ರಮಿಸಿದ ಕಾಂಗ್ರೆಸ್ ಧೀಮಂತ ನಾಯಕ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೃದಯಾಘಾತದಿಂದ ಇಂದು ಬೆಳಿಗ್ಗೆ 6:30ಕ್ಕೆ ನಿಧನರಾಗಿದ್ದು ಕಾಂಗ್ರೆಸ್ ಪಾಳಯಕ್ಕೆ ಬರಸಿಡಿಲು ಬಡಿದಂತಾಗಿದೆ.
ಸರಳ ಸಜ್ಜನಿಗೆ ಅಪಾರ ಜನಮನ್ನಣೆ ಗಳಿಸಿದ್ದ ಆರ್.ಧೃವನಾರಾಯಣ್ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಧ್ರುವನಾರಾಯಣ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ. ಆರ್. ಧೃವನಾರಾಯಣ್ ಅವರ ಬಾಲ್ಯ , ರಾಜಕೀಯ ಜೀವನ ಹೇಗಿತ್ತು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ 1961 ಜುಲೈ 31ರಂದು ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ರಂಗಸ್ವಾಮಿ ಮತ್ತು ತಾಯಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್ ಸಿ ಕೃಷಿ ಪದವಿ ಪಡೆದಕೊಂಡಿದ್ದಾರೆ. ಧ್ರುವನಾರಾಯಣ ಅವರಿಗೆ ಮೂವರು ಸಹೋದರಿಯರು ಇದ್ದಾರೆ. ಧ್ರುವನಾರಾಯಣ ಅವರ ಪತ್ನಿ ವೀಣಾ ಧೃವನಾರಾಯಣ್. ದಂಪತಿಗೆ ಇಬ್ಬರು ಪುತ್ರರಿದ್ದಾರೆ.
ಧ್ರುವನಾರಾಯಣ್ ಅವರು 1983ರಲ್ಲಿ ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತನಾಗಿ ಸೇರ್ಪಡೆಗೊಂಡಿದ್ದರು. 1999ರಲ್ಲಿ ಸಂತೇಮರಹಳ್ಳಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎ.ಆರ್. ಕೃಷ್ಣಮೂರ್ತಿ ಅವರ ಎದುರು ಸೋಲನುಭವಿಸಿದರು. ಆದರೆ ಇದೇ ಎ.ಆರ್. ಕೃಷ್ಣಮೂರ್ತಿ ಅವರ ವಿರುದ್ಧ 2004ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1 ಮತದ ಅಂತದರಲ್ಲಿ ಗೆದ್ದು ಇತಿಹಾಸ ರಚನೆ ಮಾಡಿದ್ದರು. 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ ನಂತರ 2009ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. ನಂತರ 2014ರಲ್ಲಿ ಚಾಮರಾಜನಗರದಿಂದ 2ನೇ ಬಾರಿ ಸಂಸದರಾಗಿ ಜಯಗಳಿದರು. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
Key words: kpcc working president-R.Dhruvanarayan-death-Congress-political