ಬೆಂಗಳೂರು, ಜೂ.09, 2019 : (www.justkannada.in news ) ಮತ್ತೊಮ್ಮೆ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಮುಂದೆ ಪ್ರತಿಭಟನೆ ಮಾಡುವ ಅಗತ್ಯತೆ ಉಂಟಾಗಿದೆ ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಶಾಸಕ ಎಸ್.ಸುರೇಶ್ ಕುಮಾರ್ ಹೇಳಿರುವುದಿಷ್ಟು….
ನಾನು ಕಳೆದ ಏಳು ತಿಂಗಳಲ್ಲಿ ಕನಿಷ್ಟ ಇಪ್ಪತೈದು ಬಾರಿಯಾದರೂ ಲೋಕಸೇವಾ ಆಯೋಗದ ಕಛೇರಿಗೆ ಹೋಗಿ ಸಂತ್ರಸ್ಥ ಅಭ್ಯರ್ಥಿಗಳ ಸಮಸ್ಯೆಗಳ ಪರಿಹಾರ ಕುರಿತು ಆಗ್ರಹಿಸಿದ್ದೇನೆ. 27, ಡಿಸೆಂಬರ್ 2018 ರಲ್ಲಿ ಒಮ್ಮೆ ಕೆಪಿಎಸ್ ಸಿ ಕಟ್ಟಡದ “ಕದ ತಟ್ಟುವ ಕಾರ್ಯಕ್ರಮ” ವನ್ನೂ ಹಮ್ಮಿಕೊಂಡಿದ್ದೆ. ಕೆಲವು ಬೇಡಿಕೆಗಳಿಗೆ ಪರಿಹಾರ ದೊರಕಿರುವುದು ಸಮಾಧಾನ ತಂದಿದೆಯಾದರೂ ಬಹು ಮುಖ್ಯವಾದ, ಕರ್ನಾಟಕ ರಾಜ್ಯದ ಆಡಳಿತಕ್ಕೆ ಸಂಬಂಧ ಪಟ್ಟ ಬೇಡಿಕೆ ಇದುವರೆಗೂ ಇತ್ಯರ್ಥವಾಗಿಲ್ಲ.
#2015ರಸಾಲಿನಕೆಎಎಸ್ಪರೀಕ್ಷೆಯಅಧಿಸೂಚನೆ_ಪ್ರಕಟವಾಗಿದ್ದು :12.5.2017.
#ಪೂರ್ವಭಾವಿ( Priliminary) ಪರೀಕ್ಷೆ ನಡೆದದ್ದು; ಆಗಸ್ಟ್, 18, 2017.
ಮುಖ್ಯ (Mains) ಪರೀಕ್ಷೆ ನಡೆದ ಕೊನೆಯ ದಿನಾಂಕ ಡಿಸೆಂಬರ್, 22, 2017.
ಆದರೆ ಫಲಿತಾಂಶ ಪ್ರಕಟವಾಗಲೇ ಇಲ್ಲ.
2018 ರ ಆಗಸ್ಟ್ ತಿಂಗಳಿನಿಂದ ನಾನು ಆಯೋಗದ ಅಧ್ಯಕ್ಷರು, ರಾಜ್ಯದ ಮುಖ್ಯ ಕಾರ್ಯದರ್ಶಿ ಗಳು ಮುಂತಾದವರೊಡನೆ, ನಿರಂತರ ಪ್ರಯತ್ನ, ಆಗ್ರಹ ಮಾಡುತ್ತಾ ಬಂದರೂ, (ನವೆಂಬರ್ ನಲ್ಲಿ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದರೂ) ಅನೇಕ ಭರವಸೆಯ ದಿನಾಂಕಗಳನ್ನು ನೀಡಲ್ಪಟ್ಟರೂ ಫಲಿತಾಂಶ ಬಂದಿದ್ದು 28.1.2019 ರಂದು.
ಆದರೆ ಈ ಆರು ತಿಂಗಳ ನಂತರವೂ ಸಂದರ್ಶನ ಪ್ರಕ್ರಿಯೆ ನಡೆಯಲೇ ಇಲ್ಲ. ಈ ಅಭ್ಯರ್ಥಿಗಳೆಲ್ಲಾ ಆತಂಕ-ಹತಾಶೆ….ಎದುರಿಸುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಚುನಾವಣಾ ನೀತಿ ಸಂಹಿತೆಯ ಕಾರಣ ನೀಡಲಾಗಿತ್ತು. ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದಿದ್ದರೂ ಈಗಲೂ ಸಹ ಸಂದರ್ಶನದ ವೇಳಾಪಟ್ಟಿ ಘೋಷಣೆಯಾಗಿಲ್ಲ.
ಈ ಎಲ್ಲಾ ಕಾರಣಗಳಿಂದ ಹತಾಶೆಯ ಅಂಚಿನಲ್ಲಿರುವ ಸಂತ್ರಸ್ಥ ಅಭ್ಯರ್ಥಿಗಳ ಪರವಾಗಿ ನಾಳೆ (10.6.2019) ಸೋಮವಾರ, ಬೆಳಿಗ್ಗೆ 10.30 ಗಂಟೆಗೆ KPSC ಕಟ್ಟಡದ ಮುಂದೆ ಸಂದರ್ಶನ ವೇಳಾಪಟ್ಟಿ ಆಗ್ರಹಿಸಿ ಮತ್ತು ಸಂದರ್ಶನ ಪಾರದರ್ಶಕವಾಗಿರಬೇಕೆಂದು ಒತ್ತಾಯಿಸಿ ನಾನು ಮತ್ತು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಇಬ್ಬರೂ ಹೋರಾಟ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಶಾಸಕ ಎಸ್.ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
—
key words : KPSC-BJP-protest-MLA-bangalore