ಮೈಸೂರು,ಸೆಪ್ಟಂಬರ್,30,2021(www.justkannada.in): ಕೆ.ಆರ್.ಕ್ಷೇತ್ರ ರಾಜ್ಯದಲ್ಲೇ ಶೇ.100ರಷ್ಟು ವ್ಯಾಕ್ಸಿನೇಷನ್ ಕ್ಷೇತ್ರ. ಇದನ್ನ ಇಂದು ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮೈಸೂರಿನ ಕೆ ಆರ್ ಕ್ಷೇತ್ರದಲ್ಲಿ ನಡೆದ ಮೋದಿ ಯುಗ್ ಉತ್ಸವ್ ನಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲೇ ಮೊದಲ ಅತಿ ಹೆಚ್ಚು ವಾಕ್ಸಿನೆಷನ್ ಕ್ಷೇತ್ರ ಕೆ.ಆರ್.ಕ್ಷೇತ್ರ. ಶಾಸಕ ರಾಮದಾಸ್ ನೇತೃತ್ವದಲ್ಲಿ ಈ ಬೃಹತ್ ಲಸಿಕಾ ಅಭಿಯಾನ ನಡೆದಿದೆ. ಇದಕ್ಕೆ ಹಲವು ಸಂಘ ಸಂಸ್ಥೆಗಳು ಕೂಡ ಸಹಕಾರ ನೀಡಿವೆ. ರಾಜ್ಯದಲ್ಲಿಯು ಕೂಡ ಶೇ.80 ರಷ್ಟು ವಾಕ್ಸಿನ್ ಆಗಿದೆ. ಆದರೆ ಕೆಲ ಗ್ರಾಮ, ಗುಡ್ಡಗಾಡು ಪ್ರದೇಶದಲ್ಲಿ ವಾಕ್ಸಿನ್ ಅಭಿಯಾನ ಆಗಬೇಕಿದೆ. ಅಲ್ಲಿ ಜನರು ಮುಂದೆ ಬಂದು ವಾಕ್ಸಿನ್ ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಅವರಿಗೂ ವಾಕ್ಸಿನ್ ಅರಿವು ಮೂಡಿಸಿ ವಾಕ್ಸಿನ್ ನೀಡುತ್ತೇವೆ ಎಂದರು.
ರಾಮದಾಸ್ ಗೆ ಮಂತ್ರಿ ಆಗುವ ಎಲ್ಲ ಅರ್ಹತೆ ಇದೆ.
ರಾಮದಾಸ್ಗೆ ಮಂತ್ರಿ ಆಗುವ ಎಲ್ಲ ಅರ್ಹತೆ ಇದೆ. ಆದರೆ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. ಅವರ ನೇತೃತ್ವದಲ್ಲಿ ಮುಂದಿನ ದಸರಾ ನಡೆಯುತ್ತದೆ. ಅಂದರೆ ಅವರು ಪಕ್ಷದ ಹಿರಿಯರಿದ್ದಾರೆ. ಹಾಗಾಗಿ ಅವರ ಮಾರ್ಗದರ್ಶನದಲ್ಲಿ ದಸರಾ ನಡೆಯಲಿದೆ. ಇದರಲ್ಲಿ ಬೇರೆ ಅರ್ಥ ಏನು ಇಲ್ಲ ಎಂದು ಸಚಿವ ಡಾ.ಸುಧಾಕರ್ ಹೇಳಿದರು.
ಪ್ರತಿಪಕ್ಷ ಕಾಂಗ್ರೆಸ್ ಕೊರೊನಾ ವಿಚಾರದಲ್ಲೂ ರಾಜಕಾರಣ ಮಾಡುತ್ತಿದೆ
ಪ್ರತಿಪಕ್ಷ ಕಾಂಗ್ರೆಸ್ ಕೊರೊನಾ ವಿಚಾರದಲ್ಲೂ ರಾಜಕಾರಣ ಮಾಡುತ್ತಿದೆ. ಕೊರೊನಾದ ಮೊದಲ ಅಲೆಯಲ್ಲಿ ಭಾರತ ಬೇರೆ ರಾಷ್ಟ್ರಗಳಿಗೆ ಕೊರೊನಾ ಲಸಿಕೆಯನ್ನು ರವಾನಿಸಿದ ಪರಿಣಾಮ, ಎರಡನೇ ಅಲೆಯಲ್ಲಿ ಭಾರತಕ್ಕೆ ವಿದೇಶಗಳಿಂದ ನೆರವಿನ ಮಹಾಪೂರವೇ ಹರಿದುಬಂದಿದೆ. ಇದಕ್ಕೆಲ್ಲಾ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ, ದೂರದರ್ಶಿತ್ವ ಕಾರಣವಾಗಿದೆ. ಕೊರೊನಾ ಲಸಿಕೆಯನ್ನು ಕೂಡ ಪ್ರತಿಪಕ್ಷಗಳು ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದೆಲ್ಲಾ ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದವು. ಆದರೆ ನಂತರದ ದಿನಗಳಲ್ಲಿ ಕೊರೊನಾ ಲಸಿಕೆಯ ಮಹತ್ವ ಪ್ರತಿಪಕ್ಷಗಳ ಅರಿವಿಗೆ ಬಂತು. ಕೊರೊನಾದಿಂದ ರಕ್ಷಣೆ ಪಡೆಯಬೇಕಾದರೆ ಎರಡು ಡೋಸ್ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಆಗ ಮಾತ್ರ ಕೊರೊನಾ ಮುಕ್ತ ಮಾಡಲು ಸಾಧ್ಯವಾಗಲಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಕೆ ಆರ್ ಕ್ಷೇತ್ರದಲ್ಲಿ ಇದುವರೆಗೆ ಸುಮಾರು ಎರಡೂವರೆ ಲಕ್ಷ ಕೊರೊನಾ ಲಸಿಕೆ ನೀಡಲಾಗಿದೆ. ಕೊರೊನಾ ಲಸಿಕೆ ನೀಡುವಲ್ಲಿ ಕೆ ಆರ್ ಕ್ಷೇತ್ರ ಇಡೀ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ರಾಜ್ಯದ ಶೇಕಡಾ 80% ರಷ್ಟು ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಕೊರೊನಾ ಲಸಿಕೆ ವಿತರಣೆಯಲ್ಲಿ ದೇಶದ ದೊಡ್ಡ ರಾಜ್ಯಗಳನ್ನು ಕರ್ನಾಟಕ ಹಿಂದಿಕ್ಕಿದೆ. ಕೊರೊನಾದ ಮೂರನೇ ಅಲೆ ಬರುವುದು ಬೇಡ. ಒಂದು ವೇಳೆ ಬಂದರೂ ಅದನ್ನು ಎದುರಿಸಲು ಸರ್ಕಾರ ಸನ್ನದ್ದವಾಗಿದೆ ಎಂದು ಹೇಳಿದರು.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 500 ಮಂದಿಗೆ ಅವಕಾಶ ಕೇಳಿದ್ದೇವೆ.
ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 500 ಮಂದಿಗೆ ಅವಕಾಶ ಕೇಳಿದ್ದೇವೆ. ತಾಂತ್ರಿಕ ಸಲಹಾ ಸಮಿತಿಗೆ ಈ ಬಗ್ಗೆ ವರದಿ ನೀಡಿದ್ದೇವೆ. ದಸರಾ ಜಂಬೂಸವಾರಿಗೆ ಅರಮನೆ ಒಳಗೆ ಮೂರುವರೆ ಮೀಟರ್ ಅಂತರ ಕಾಯ್ದುಕೊಳ್ಳಬೇಕಿದೆ. ಹಾಗೇ ಕಾಯ್ದುಕೊಂಡು ಜಂಬೂಸವಾರಿ ವೀಕ್ಷಣೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ವರದಿ ಬಂದ ಬಳಿಕ ಅವರು ಅನುಮತಿ ಕೊಟ್ಟರೆ ಅದರಂತೆ ನಡೆಸುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.
Key words: KR constituency- Mysore – 100% vaccination – state- Health Minister -Dr. K. Sudhakar