ಮಂಡ್ಯ, ಜೂನ್. 24,2021(www.justkannada.in): ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನಲ್ಲಿ ಅತ್ಯಂತ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಕ್ರೀಡಾಂಗಣ ಯಾವ ರೀತಿ ಇರಬೇಕು, ಯಾವೆಲ್ಲ ಕ್ರೀಡೆಗೆ ಅಗತ್ಯವಾದ ಸೌಲಭ್ಯ ಇರಬೇಕು. ಎಂಬಿತ್ಯಾದಿ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಇಂದು ವಿಧಾನ ಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಸುಮಾರು ಐದುವರೆ ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಈಗಾಗಲೆ 2 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದ್ದು, ಈಗ ಮತ್ತೆ 5 ಕೋಟಿ ರೂ. ಅನುದಾನ ಬಿಡುಗಡೆಗೆ ಆದೇಶಿಸಲಾಗಿದೆ. ರಾಜ್ಯಮಟ್ಟದ ಕ್ರೀಡಾಂಗಣಕ್ಕೆ ಸರಿಸಮ ಎಂಬ ರೀತಿಯಲ್ಲಿ ಅತ್ಯಂತ ವ್ಯವಸ್ಥಿತ ಹಾಗೂ ಗುಣಮಟ್ಟದೊಂದಿಗೆ ಸಕಲ ಸೌಲಭ್ಯಗಳನ್ನೊಳಗೊಂಡು ಕೆ.ಆರ್.ಪೇಟೆಯಲ್ಲಿ ಕ್ರೀಡಾಂಗಣ ನಿರ್ಮಾಣವಾಗಬೇಕು ಎಂದು ಸಚಿವ ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಹೈಟೆಕ್ ಕ್ರೀಡಾಂಗಣದಲ್ಲಿ ಏನೇನು ಇರಲಿದೆ?
ಉತ್ತಮ ಗುಣಮಟ್ಟದಲ್ಲಿ ಸಕಲ ಸೌಲಭ್ಯಗಳೊಂದಿಗೆ ನಿಮಾಣವಾಗುತ್ತಿರುವ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗೆ ಅನುಕೂಲವಾಗುಂತಹ ವ್ಯವಸ್ಥೆ ಇರಲಿದೆ. ಸುಮಾರು ಐದುವರೆ ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. 200 ಮೀಟರ್ ಸಿಂಥೆಟಿಕ್ ಟ್ರ್ಯಾಕ್. ಈಜುಕೊಳ, ಟೆನ್ನಿಸ್ ಮಡ್ ಕೋರ್ಟ್, ಜಿಮ್, ವಾಲಿಬಾಲ್ ಮಡ್ ಕೋರ್ಟ್, ಶಟಲ್ ಕೋರ್ಟ್, ಪಾರ್ಕಿಂಗ್ ಪಾತ್, ಸ್ಟ್ರೀಟ್ ಲೈಟ್, ವೀಕ್ಷಕರ ಗ್ಯಾಲರಿ ನಿರ್ಮಾಣವಾಗಲಿದೆ. ಪ್ರತಿಯೊಂದು ಕೆಲಸವು ನುರಿತ ವ್ಯಕ್ತಿಗಳಿಂದಲೇ ಆಗಬೇಕು. ಕಾಮಗಾರಿ ಅತ್ಯಂತ ಗುಣಮಟ್ಟದ್ದಾಗಿರಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ. ಅಧಿಕಾರಿಕಾರಿಗಳು ಕ್ರೀಡಾಂಗಣ ನಿರ್ಮಾಣದ ಪ್ರತಿ ಹಂತವನ್ನು ಗಮನಿಸಬೇಕು ಎಂದು ಸಚಿವ ನಾರಾಯಣಗೌಡ ಖಡಕ್ಕಾಗಿ ಸೂಚಿಸಿದರು. 2020-21ನೇ ಸಾಲಿನಲ್ಲಿ ರೂ. 2 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಪ್ರಸ್ತುತ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶಿಸಲಾಗಿದ್ದು, ಒಟ್ಟು 7 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಶೀಘ್ರದಲ್ಲೇ ಟೆಂಡರ್ ಆಹ್ವಾನಿಸಿ, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕೆ.ಆರ್. ಪೇಟೆಯಲ್ಲಿ ಮಾದರಿ ಕ್ರೀಡಾಂಗಣ ನಿರ್ಮಿಸುವುದು ನನ್ನ ಕನಸು. ಜನರ ಆಶೋತ್ತರಗಳನ್ನ ಈಡೇರಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.
ನಾರಾಯಣಗೌಡರು ಯಾಕೆ ಸಚಿವರಾಗಬೇಕಿತ್ತು ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಅಭಿವೃದ್ಧಿಗೆ ವೇಗ ಸಿಕ್ಕಿದೆ. ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಬರುತ್ತಿದೆ. ಕ್ರೀಡೆಗೆ ಎಲ್ಲಿಲ್ಲದ ಪ್ರೋತ್ಸಾಹ ಸಿಗುತ್ತಿದೆ. ಖೇಲೊ ಇಂಡಿಯಾ ಕೇಂದ್ರ, ಕ್ರೀಡಾ ವಿಜ್ಞಾನ ಕೇಂದ್ರ, ಹೈಟೆಕ್ ಜಿಲ್ಲಾ ಕ್ರೀಡಾಂಗಣ, ಕೆ.ಆರ್. ಪೇಟೆಯಲ್ಲೂ ಹೈಟೆಕ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಅಭಿವೃದ್ಧಿ ಮಾಡಬೇಕು ಎಂಬ ಛಲ ಇದ್ದವರಿಂದ ಮಾತ್ರ ಇದೆಲ್ಲ ಸಾಧ್ಯ ಎಂದು. ಕೆ.ಆರ್. ಪೇಟೆ ಬಿಜೆಪಿ ವಕ್ತಾರ ಕೆ. ಕಾಳೆಗೌಡ ತಿಳಿಸಿದರು.
ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Key words: KR Pet-High tech -stadium -Rs. 7 crores- grant-minister-narayanagowda