ಡಿ.28 ರಂದು ಮೈಸೂರಿನಲ್ಲಿ ಕೃಷ್ಣ ಬಲರಾಮ ರಥಯಾತ್ರೆ

ಮೈಸೂರು,ಡಿಸೆಂಬರ್,26,2024 (www.justkannada.in): ಮೈಸೂರಿನ ಇಸ್ಕಾನ್ ವತಿಯಿಂದ ಡಿಸೆಂಬರ್ 28ರಂದು ಕೃಷ್ಣ ಬಲರಾಮರ ರಥಯಾತ್ರೆ ಆಯೋಜನೆ ಮಾಡಲಾಗಿದೆ ಎಂದು ಇಸ್ಕಾನ್ ಮೈಸೂರು ಪ್ರಧಾನ ವ್ಯವಸ್ಥಾಪಕ ಪಂಕಜಾಂಗ್ರಿ ದಾಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು  ಮಾಹಿತಿ ನೀಡಿದ ಪಂಕಜಾಂಗ್ರಿ ದಾಸ್, ಡಿ. 28ರ ಸಂಜೆ 4.30ಕ್ಕೆ ರಥಯಾತ್ರೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಶಾಸಕ ಶ್ರೀವತ್ಸ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮಾಜಿ ಎಂಎಲ್ಸಿ ಗೋ. ಮಧುಸೂದನ, ಇಸ್ಕಾನ್ ಮೈಸೂರು ಅಧ್ಯಕ್ಷರಾದ ಸ್ತೋಕ ಕೃಷ್ಣ ಸ್ವಾಮಿ ಸೇರಿದಂತೆ ಇನ್ನಿತರ ಗಣ್ಯರು ಭಾಗಿಯಾಗಲಿದ್ದಾರೆ ಎಂದರು.

ಡಿ. 28ರ ಸಂಜೆ 5.30ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಕೃಷ್ಣ ಬಲರಾಮರ ರಥಯಾತ್ರೆಗೆ ಚಾಲನೆ ಸಿಗಲಿದ್ದು, ಗಾಂಧಿ ಚೌಕ, ಸಯ್ಯಾಜಿ ರಾವ್ ರಸ್ತೆ, ಚಿಕ್ಕ ಗಡಿಯಾರ ಗೋಪುರ, ದೇವರಾಜ ಅರಸ್ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್ ಬಿ ರಸ್ತೆ, ಆರ್ ಟಿಒ ವೃತ್ತ, ಬಲ್ಲಾಳ ವೃತ್ತ, ಹೊಸ ಕಂಠೀರವ ಅರಸ್ ರಸ್ತೆ, ಜಯನಗರ 2ನೇ ಮುಖ್ಯರಸ್ತೆಯ ಮೂಲಕ ಸಂಚರಿಸಿ 18ನೇ ಕ್ರಾಸ್ ನಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ರಥಯಾತ್ರೆ ಸಂಪನ್ನವಾಗಲಿದೆ . 35 ಅಡಿ ಎತ್ತರದ ರಥದಲ್ಲಿ ಶ್ರೀ ಕೃಷ್ಣ ಬಲರಾಮರ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಲಿದ್ದು ಈ ವೇಳೆ ಭಕ್ತರಿಂದ ಸಂಕೀರ್ತನೆ ಹಾಡಲಾಗುತ್ತದೆ. ಇಸ್ಕಾನ್ ದೇವಾಲಯದ ಆವರಣದಲ್ಲಿ 30 ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ ಎಂದು ತಿಳಿಸಿದರು.

Key words: Krishna Balarama Rath Yatra, Mysore, December 28