ಬೆಂಗಳೂರು,ಮಾ,17,2020(www.justkannada.in): ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಕೃಷ್ಣಾರೆಡ್ಡಿ ಇಂದು ರಾಜೀನಾಮೆ ನೀಡಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದ ಜೆಡಿಎಸ್ ಶಾಸಕ ಕೃಷ್ಣಾರೆಡ್ಡಿ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಉಪಸಭಾಧ್ಯಕ್ಷರಾಗಿ ಮುಂದುವರೆದಿದ್ದರು. ಇದೀಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ಮಾಡಿ ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ.
2018ರ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾಗ ಕಾಂಗ್ರೆಸ್ ಶಾಸಕ ಕೆ. ಆರ್. ರಮೇಶ್ ಕುಮಾರ್ ಸ್ಪೀಕರ್ ಆಗಿ, ಜೆಡಿಎಸ್ನ ಕೃಷ್ಣಾ ರೆಡ್ಡಿ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ರಮೇಶ್ ಕುಮಾರ್ ರಾಜೀನಾಮೆ ನೀಡಿದರೂ ಕೃಷ್ಣಾ ರೆಡ್ಡಿ ಮುಂದುವರೆದಿದ್ದರು.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸ್ವ ಪಕ್ಷದ ಶಾಸಕರನ್ನೇ ಉಪಸಭಾಧ್ಯಕ್ಷರಾಗಿ ನೇಮಕ ಮಾಡುವ ಕುರಿತು ಚರ್ಚೆ ನಡೆದಿತ್ತು. ಕೃಷ್ಣಾ ರೆಡ್ಡಿ ಅವರು ರಾಜೀನಾಮೆ ನೀಡದಿದ್ದಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡುವ ಅವಕಾಶವೂ ಇತ್ತು.
Key words: Krishna Reddy -resigns -Deputy Speaker