ಮಂಡ್ಯ,ಜುಲೈ,14,2021(www.justkannada.in): ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ವಿಚಾರ ಸಂಬಂಧ, ಅಪಾಯ ಆಗುವ ಮುನ್ನ ಎಚ್ಚೆತ್ತುಕೊಳ್ಳುವುದು ಜವಾಬ್ದಾರಿ. ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ನಿಶ್ಚಿತ. ಕೆಆರ್ಎಸ್ ಡ್ಯಾಂನಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಕೆಆರ್ ಎಸ್ ಡ್ಯಾಂ ಪರಿಶೀಲನೆ ಬಳಿಕ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸಂಸದೆ ಸುಮಲತಾ ಅಂಬರೀಶ್ ಸಭೆ ನಡೆಸಿದರು. ಸಭೆ ನಡೆಸಿದ ನಂತರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಕೆಆರ್ಎಸ್ ಡ್ಯಾಂನಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕಾಗಿದೆ. ಈ ಸಂಬಂಧ ಗಣಿ ಮತ್ತು ಭೂವಿಜ್ಞಾನ ಸಚಿವರಿಗೆ ಆಗ್ರಹಿಸುವೆ. ಮಹಾರಾಜರ ತ್ಯಾಗದಿಂದ ಕೆಆರ್ಎಸ್ ಡ್ಯಾಂ ನಿರ್ಮಾಣ ಆಗಿದೆ. 10 ಸಾವಿರ ಜನರನ್ನು ಬಳಸಿಕೊಂಡು ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಇಂತಹ ಆಸ್ತಿಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲವೆಂದು ತಾತ್ಸಾರ ಸಲ್ಲದು. ಒಂದು ವೇಳೆ ಸಮಸ್ಯೆಯಾದರೆ ಹೊಣೆ ಹೊರುವವರು, ಮತ್ತೆ ನಾವು ಇಂತಹ ಜಲಾಶಯ ನಿರ್ಮಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಡ್ಯಾಂನಲ್ಲಿ ಸಣ್ಣಪುಟ್ಟ ಬಿರುಕು ಕಾಣಿಸಿಕೊಂಡಿದ್ದರಿಂದ ದುರಸ್ತಿ ಮಾಡಲಾಗಿದೆ. 67 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ ಮಾಡಿದ್ದಾರೆ. ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ, ಒಳ್ಳೆಯದು. ಆದರೆ, ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಕೆಆರ್ಎಸ್ ಡ್ಯಾಂ ವಿಚಾರದಲ್ಲಿ ಟಾಸ್ಕ್ಫೋರ್ಸ್ ರಚಿಸಿ..
ಕೆಆರ್ಎಸ್ ಡ್ಯಾಂ ವಿಚಾರದಲ್ಲಿ ಟಾಸ್ಕ್ಫೋರ್ಸ್ ರಚಿಸುವಂತೆ ಮಂಡ್ಯ ಡಿಸಿಗೆ ಸೂಚಿಸಿದ್ದೇನೆ. ಕಳೆದ 3 ತಿಂಗಳ ಹಿಂದೆ ಸೂಚನೆ ನೀಡಿದ್ದರೂ ಸಹ ಅವರಿಮದ ಈವರೆಗೆ ಪ್ರತಿಕ್ರಿಯೆ ಬಂದಿಲ್ಲ. . ಎಲ್ಲಾ ವಿಭಾಗದ ಅಧಿಕಾರಿಗಳನ್ನು ಒಗ್ಗೂಡಿಸಿ ಟಾಸ್ಕ್ಫೋರ್ಸ್ ರಚಿಸಿ. ಇಂದಿನ ಸಭೆಯಲ್ಲಿ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಉತ್ತರ ಸಿಕ್ಕಿಲ್ಲ. ಇದು ನಮ್ಮ ವ್ಯಾಪ್ತಿಗೆ ಬರಲ್ಲವೆಂದು ಅಧಿಕಾರಿಗಳು ಹೇಳ್ತಾರೆ. ಒಂದು ಇಲಾಖೆ ಅಧಿಕಾರಿಗಳು ಒಂದೊಂದು ಹೇಳುತ್ತಿದ್ದಾರೆ. ಹಾಗಾಗಿ ಟಾಸ್ಕ್ಫೋರ್ಸ್ ರಚನೆ ಅನಿವಾರ್ಯವಾಗಿದೆ. ಕೋ ಆರ್ಡಿನೇಷನ್ ಟಾಸ್ಕ್ಫೋರ್ಸ್ ರಚನೆಗೆ ಸೂಚಿಸಿರುವೆ. ಹಲವು ಸಭೆಗಳಲ್ಲಿ ಮಂಡ್ಯ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದರು.
Key words: KRS dam – crack-inspection- Sumalatha Ambarish