ಮೈಸೂರು,ಜುಲೈ,9,2021(www.justkannada.in): ಕಳೆದೊಂದು ವಾರದಿಂದ ಭಾರೀ ಸದ್ದು ಮಾಡುತ್ತಿರುವ ವಿಚಾರ ಕೆಆರ್ಎಸ್ ಜಲಾಶಯದ ಬಿರುಕು. ಕಾವೇರಿ ಕಣಿವೆಯ ರೈತರ ಜಂಘಾಬಲವನ್ನೇ ಉಡುಗಿಸುವ ಸುದ್ದಿಯಿದು. ಭಾರತದಲ್ಲಿಯೇ ಮೊಟ್ಟಮೊದಲು ನಿರ್ಮಾಣವಾದ ಅಣೆಕಟ್ಟು ಎಂಬ ಇತಿಹಾಸ ಹೊಂದಿರುವ ಕನ್ನಂಬಾಡಿ ಬಿರುಕಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ಮೈಸೂರು, ಮಂಡ್ಯ,ಚಾಮರಾಜನಗರ,ಬೆಂಗಳೂರು ಪ್ರಾಂತ್ಯಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾದಾಗ ರೂಪುಗೊಂಡ ಮಹಾನ್ ಯೋಜನೆಯ ಬಗ್ಗೆ ಇದೀಗ ಕಾವೇರಿ ಕಣಿವೆಯ ರೈತರಲ್ಲಿ ಆತಂಕ ಮನೆಮಾಡಿದೆ. ಕೆಆರ್ಎಸ್ ಅಣೆಕಟ್ಟು ಕಟ್ಟಲು 25 ಹಳ್ಳಿಗಳು ಮುಳುಗಡೆಯಾಗಿವೆ. ಇದರಿಂದ ಸುಮಾರು 15 ಸಾವಿರ ಮಂದಿ ನಿರ್ವಸತಿಗರಾದರು. ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಅಂದಿನ ಮೈಸೂರು ಸರ್ಕಾರ ನಿವೇಶನ ಒದಗಿಸಿತ್ತು. ಅಣೆಕಟ್ಟು ಕಟ್ಟಲು ಹಣದ ಅಭಾವವುಂಟಾದಾಗ ರಾಜಮನೆತನದ ಹೆಣ್ಣುಮಕ್ಕಳು ತಮ್ಮ ಒಡವೆಗಳನ್ನೇ ಮಾರಿ ಹಣ ನೀಡಿದ್ದು ಎಲ್ಲರಿಗೂ ತಿಳಿದ ವಿಚಾರ. ಹೀಗೆ ಸಾಕಷ್ಟು ಮಂದಿಯ ತ್ಯಾಗ,ಪರಿಶ್ರಮದ ಫಲವಾಗಿ ರೂಪುಗೊಂಡ ಅಣೆಕಟ್ಟಿಗೆ ಗಂಡಾಂತರ ಬಂದೊದಗಿದೆ ಎಂಬ ವಿಷಯ ರಾಜಕಾರಣಿಗಳಿಂದಾಗಿ ಹಾದಿಬೀದಿಯಲ್ಲಿ ಚರ್ಚೆಯಾಗುತ್ತಿದೆ.
ರಾಜಪ್ರಭುತ್ವ ಮತ್ತು ಪ್ರಜೆಗಳ ನಡುವಿನ ಸಂಕೇತವಾಗಿರುವ ಕನ್ನಂಬಾಡಿ ಅಣೆಕಟ್ಟಿನ ಜೊತೆ ಮೈಸೂರು ಭಾಗದ ರೈತರಿಗೆ ಭಾವನಾತ್ಮಕ ಸಂಬಂಧವಿದೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದ ಕೃಷಿಗೆ ನೀರುಣಿಸುವ ಕಾವೇರಿಯನ್ನು ತಮ್ಮ ತಾಯಿಯೆಂದೇ ರೈತರು ಪೂಜಿಸುತ್ತಾರೆ. ಕನ್ನಂಬಾಡಿ ಬಿರುಕು ಬಿಟ್ಟಿದೆ ಅನ್ನೋದು ಎಂಥಹವರಿಗೂ ಆತಂಕ ಉಂಟುಮಾಡುವ ಸುದ್ದಿಯೇ. ಆದರೆ ಈ ವಿಚಾರವೇನಾದರೂ ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಳಕೆಯಾಗಿದ್ದರೆ ಮಾತ್ರ ಕ್ಷಮಿಸಲಾಸಾಧ್ಯ. ಮಂಡ್ಯ ಸಂಸದರು ಜಲಾಶಯ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡಿದ್ದೇ ತಡ ದಳಪತಿಗಳು ಸಂಸದರ ಮೇಲೆ ಮುಗಿಬಿದ್ರು. ಮಾಜಿ ಮುಖ್ಯಮಂತ್ರಿಗಳು ಸಂಸದರನ್ನೇ ಕೆಆರ್ಎಸ್ಗೆ ಅಡ್ಡಲಾಗಿ ಮಲಗಿಸಿ ಎಂಬ ಹೇಳಿಕೆ ನೀಡಿದ್ದು ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಯಿತು. ಅಲ್ಲಿಂದ ಆರಂಭವಾದ ವಾದ-ಪ್ರತಿವಾದ ಇನ್ನೂ ನಿಂತಿಲ್ಲ. ಬಹುಶಃ ಕೊರೊನಾ ಮೂರನೇ ಅಲೆ ಶುರುವಾಗುವವರೆಗೂ ಮುಗಿಯೋದು ಡೌಟ್!.
ಸಂಸದೆ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮರೆತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹರಿಹಾಯಲು ಆರಂಭಿಸಿದ್ರು. ಮಾಧ್ಯಮಗಳಲ್ಲಿ ಇದರ ಕುರಿತು ವರದಿಯಾಗಿದ್ದೇ ತಡ, ಎಚ್ಚೆತ್ತ ಸಂಸದರು ಮಂಡ್ಯ ಕ್ಷೇತ್ರ ಪ್ರವಾಸಕ್ಕೆ ರೆಡಿಯಾದ್ರು. ಮಂಡ್ಯದಲ್ಲಿ ದಿಶಾ ಸಭೆ ವೇಳೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಬಳಿ ಕೆಆರ್ಎಸ್ ಜಲಾಶಯದ ಬಿರುಕಿನ ಬಗ್ಗೆ ಮಾಹಿತಿ ಪಡೆದುಕೊಂಡ್ರು. ಕ್ರ್ಯಾಕ್ ಬಿಟ್ಟಿದೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದ್ದು ಸಂಸದರ ಆತಂಕಕ್ಕೆ ಕಾರಣವಾಗಿತ್ತು. ಇದರ ಕುರಿತು ವಿವರಣೆ ನೀಡಿದ ಅಧಿಕಾರಿಗಳು ಅದು ಬಿರುಕು ಬಿಟ್ಟಿದ್ದಲ್ಲ. ಗೇಟ್ ಬದಲಾವಣೆ ಮಾಡುವಾಗ ಕಲ್ಲು ಹೊರಗೆ ಬರುತ್ತದೆ ಅದನ್ನು ಗೇಟ್ ಅಳವಡಿಸಿದ ಬಳಿಕ ಸರಿಪಡಿಸಲಾಗುತ್ತದೆ ಎಂದು ಸ್ಪಷ್ಟನೆಯನ್ನೂ ನೀಡಿದ್ರು.
ಜಲಾಶಯದ ಸುತ್ತಮುತ್ತ ಸಾಕಷ್ಟು ಮಂದಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿ ಮಾಲೀಕರೆಲ್ಲರೂ ಪ್ರಭಾವಿಗಳೇ ಆಗಿರೋದ್ರಿಂದ ಮತ್ತು ಎಲ್ಲಾ ಪಕ್ಷಗಳ ರಾಜಕಾರಣಿಗಳೂ ಗಣಿಗಾರಿಕೆ ನಡೆಸುತ್ತಿರೋದ್ರಿಂದ ಇಲ್ಲಿಯವರೆಗೂ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಲು ಯಾವುದೇ ಸರ್ಕಾರಗಳಿಗೂ ಸಾಧ್ಯವಾಗಿಲ್ಲ. ಕೆಆರ್ಎಸ್ ಜಲಾಶಯದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಆದ್ರೆ ಅಕ್ರಮ ಗಣಿಗಾರಿಕೆಯಿಂದ ಕೆಅರ್ಎಸ್ಗೆ ಅಪಾಯವಿದೆ ಹೀಗಾಗಿ ಅಕ್ರಮ ಗಣಿಗಾರಿಕೆ ನಿಲ್ಲಿಸುವವರೆಗೆ ಸುಮ್ಮನೆ ಕೂರಲ್ಲ ಎಂದ ಸಂಸದೆ ಸುಮಲತಾ ಅಂಬರೀಶ್ ಹಲವು ಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇದರಿಂದ ರೊಚ್ಚಿಗೆದ್ದ ದಳಪತಿಗಳು , ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡೋದು ಸಂಸದರ ಕೆಲಸನಾ? ಮೋದಲು ಜನರ ಸಂಕಷ್ಟ ಆಲಿಸಿ ಎಂದ್ರು. ಸಂಸದರು ಹಂಗರಹಳ್ಳಿ,ಚನ್ನನಕೆರೆಗಳಿಗೆ ಭೇಟಿ ಕೊಟ್ಟ ವೇಳೆ ಗಣಿಗಾರಿಕೆಯಿಂದ ಜನರಿಗೆ ಆಗುತ್ತಿರುವ ಸಂಕಷ್ಟಗಳನ್ನು ಆಲಿಸಿದ್ರು. ಕ್ಷೇತ್ರದ ನೆಲ,ಜಲ ಸಂರಕ್ಷಣೆ ಮಾಡೋದು ಸಂಸದರ ಕರ್ತವ್ಯ ಎಂದ ಸುಮಲತಾ ಗಣಿಗಾರಿಕೆ ಪ್ರದೇಶಗಳ ಭೇಟಿ ವೇಳೆ ದಳಪತಿಗಳ ಬೆಂಬಲಿಗರು ಅಡ್ಡಿಪಡಿಸಿದ ಘಟನೆ ನಡೆಯಿತು.
ಇದೆಲ್ಲಾ ಶಾಸಕರ ಕಿತಾಪತಿ ಅಂತಾ ಸಂಸದರು ಆರೋಪ ಮಾಡಿದ್ರೆ, ಅನುಕಂಪ ಗಿಟ್ಟಿಸಲು ಸಂಸದರ ಬೆಂಬಲಿಗರೇ ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿಸಿದ್ರು ಎಂದು ಶಾಸಕರು ಆರೋಪಿಸಿದ್ರು. ಅವರು ಸುಮಲತಾ ನಟೋರಿಯಸ್ ಲೇಡಿ ಅಂದ್ರೆ ಇವರು ಜೆಡಿಎಸ್ನವರು ರಾಜಕಾರಣಿಗಳೋ?ಭಯೋತ್ಪಾದಕರೋ? ಅಂದ್ರು. ದಾಖಲೆ ಕೊಡ್ತೀವಿ ಅಂದ್ರು,ಸಿಡಿ ರಿಲೀಸ್ ಮಾಡ್ತೀವಿ ಅಂದ್ರು, ಫೋನ್ ಟ್ಯಾಪ್ ಮಾಡಿದ್ದಾರೆ ಎಂದ್ರು, ಸುದ್ದಿಗೋಷ್ಠಿ ನಡೆಸಿದ್ರು. ಅಂಬರೀಶ್ ನಿಧನರಾದಾಗ ನಮ್ಮ ಸರ್ಕಾರದಿಂದ ಅಂತಿಮ ದರ್ಶನಕ್ಕೆ ಹೆಲಿಕಾಪ್ಟರ್ನಲ್ಲಿ ಮಂಡ್ಯಕ್ಕೆ ತಂದೆವು, ಸ್ಮಾರಕ ಮಾಡಿದೆವು, ನಾವಿಲ್ಲದೆ ಇದ್ದಿದ್ರೆ ಇದ್ಯಾವುದೂ ಆಗುತ್ತಿರಲಿಲ್ಲ ಎಂಬಿತ್ಯಾದಿ ಮಾತುಗಳೆಲ್ಲಾ ಆಚೆಗೆ ಬಂದವು. ಒಟ್ಟಿನಲ್ಲಿ ಜಲಾಶಯದ ಬಿರುಕಿನ ವಿಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಲಾಭ ಮಾಡಿಕೊಂಡು ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಸರ್ವಪ್ರಯತ್ನಗಳನ್ನೂ ನಡೆಸಿದ್ರು. ಇವರೆಲ್ಲಾ ಮುಂದಿನ ಚುನಾವಣೆಗೆ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ರೆ ನಮ್ಮ ರೈತರು ಮಾತ್ರ ಇವರಿಬ್ಬರಲ್ಲಿ ಯಾರು ಸರಿ ಯಾರು ತಪ್ಪು ಎಂದು ನಿರ್ಧರಿಸಲಾಗದೆ ಜಲಾಶಯದ ಬಿರುಕಿನ ಬಗೆಗಿನ ಆತಂಕ ಬಗೆಹರಿಸಿಕೊಳ್ಳಲಾಗದೆ ಒದ್ದಾಡುತ್ತಿದ್ರು. ಇತ್ತ ಸರ್ಕಾರವೂ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತಿತ್ತು.
ಕೆಆರ್ಎಸ್ ಜಲಾಶಯ ನಿರ್ಮಾಣದಲ್ಲಿ ಗಟ್ಟಿತನದಿಂದ ಕೂಡಿದ ಕಪ್ಪು ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದೆ. ಮಧ್ಯದಲ್ಲಿ ಮುರುಡುಕಲ್ಲು ಮತ್ತು ಸುರಕಿ ಗಾರೆ ಅಂದರೆ ಸುಣ್ಣದ ಕಲ್ಲು ಮರಳು ಸುಟ್ಟ ಇಟ್ಟಿಗೆ ಪುಡಿಯನ್ನು ಮತ್ತು ಮರವಜ್ರವನ್ನು ಅರೆದು ಗಾರೆ ಹಾಕಲಾಗಿದೆ. ಕಲ್ಲುಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಅವುಗಳ ಮಧ್ಯೆ ಈ ಸುರಕಿ ಗಾರೆ ಹಾಕಲಾಗಿದೆಯಂತೆ. ಹೀಗಾಗಿ ಜಲಾಶಯ ಗಟ್ಟಿಮುಟ್ಟಾಗಿದೆ ಎಂದು ಹೇಳಲಾಗಿದೆ. ಹಾಗಂತ ಯಾವುದೇ ಕಾಲಕ್ಕೂ ಜಲಾಶಯ ಅಲ್ಲಾಡುವುದಿಲ್ಲ ಎಂದಲ್ಲ. ಜಲಾಶಯದ ಸಮೀಪ ದೊಡ್ಡಮಟ್ಟದ ಸ್ಪೋಟ ಸಂಭವಿಸಿದ್ರೆ ಜಲಾಶಯಕ್ಕೆ ತೊಂದರೆಯಾಗಲಿದೆ. ಗಣಿಗಾರಿಕೆ ನಡೆಸಲು ಕಡಿಮೆ ಪ್ರಮಾಣದ ಡೈನಾಮೇಟ್ ಬಳಕೆ ಮಾಡುವುದರಿಂದ ಜಲಾಶಯಕ್ಕೆ ಧಕ್ಕೆಯಾಗಲಿದೆ ಅನ್ನೋದು ನಿಜವಲ್ಲ. ಆದರೆ ಕೆಆರ್ಎಸ್ನಿಂದ ೧೫-೨೦ಕಿಲೋಮೀಟರ್ ದೂರದಲ್ಲಿ ಗಣಿಗಾರಿಕೆ ನಡೆಯೋದ್ರಿಂದ ಹೆಚ್ಚಿನ ತೊಂದರೆಯಿಲ್ಲ. ಒಂದು ವೇಳೆ ಡೈನಾಮೇಟ್ನ ಸ್ಪೋಟದ ಪ್ರಮಾಣ ಹೆಚ್ಚಾದಲ್ಲಿ ಜಲಾಶಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಇತಿಹಾಸತಜ್ಞ ಪ್ರೋ.ಪಿ.ವಿ.ನಂಜರಾಜ ಅರಸ್. ಸದ್ಯಕ್ಕೆ ಜಲಾಶಯದ ಕ್ರಸ್ಟ್ಗೇಟ್ಗಳಲ್ಲಿ ಸಮಸ್ಯೆ ಇರುವುದರಿಂದ ಅದನ್ನು ಬದಲಾವಣೆ ಮಾಡುವುದು ಸೂಕ್ತ ಅನ್ನೋದು ಅವರ ಅಭಿಪ್ರಾಯ. ಜಸ್ಟ್ ಕನ್ನಡದೊಂದಿಗೆ ಮಾತನಾಡುವ ವೇಳೆ ಗಣಿಗಾರಿಕೆಗಳಿಂದಲೇ ಜಲಾಶಯಕ್ಕೆ ತೊಂದರೆ ಇದೆ ಎಂದಾದರೆ ಸರ್ಕಾರ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಿ ಎಂದು ಅವರು ಆಗ್ರಹಿಸಿದ್ರು.
ಇನ್ನು ಜಲಾಶಯದ ಸುರಕ್ಷತೆ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಕಾವೇರಿ ನೀರಾವರಿ ನಿಗಮ, ಕೃಷ್ಣರಾಜಸಾಗರ ಜಲಾಶಯ ಬಿರುಕು ಬಿಟ್ಟಿದೆ ಅನ್ನೋದು ಸತ್ಯಕ್ಕೆ ದೂರವಾದ ಆರೋಪ ಎಂದು ಸ್ಪಷ್ಟೀಕರಣ ಕೊಟ್ಟಿದೆ. ಅಣೆಕಟ್ಟು ಸುರಕ್ಷತಾ ಸಮಿತಿ ನೀಡಿರುವ ಸಲಹೆಗಳ ಆಧಾರದ ಮೇಲೆ ಅಣೆಕಟ್ಟೆಯ ಬಲ ವೃದ್ಧಿಸಲು ಅವಶ್ಯಕವಿರುವ ಕಾಮಗಾರಿಗಳನ್ನು ನಡೆಸಲಾಗಿದೆ. ಹೀಗಾಗಿ ಅಣೆಕಟ್ಟೆಯಲ್ಲಿ ಯಾವುದೇ ಬಿರುಕುಗಳಿಲ್ಲ ಎಂದು ತಿಳಿಸಿದೆ. ಇದು ಸದ್ಯದ ಸ್ಥಿತಿ ಇರಬಹುದು ಆದರೆ ಗಣಿಗಾರಿಕೆಗಳಲ್ಲಿ ಬಳಸುವ ಸ್ಪೋಟಕಗಳಿಂದ ಜಲಾಶಯಕ್ಕೆ ಅಪಾಯವಿಲ್ಲ ಅನ್ನೋದನ್ನ ನಿಶ್ಚಿತವಾಗಿ ಹೇಳಲಾಗದು. ಪ್ರತಿಯೊಂದು ವಿಚಾರವನ್ನು ತಮ್ಮ ರಾಜಕೀಯ ಲಾಭಕ್ಕೆ ಹೇಗೆ ಬಳಸಿಕೊಳ್ಳಬೇಕು ಅನ್ನೋದು ನಮ್ಮ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿದೆ.
ಆದ್ರೆ ಜನರ ಜೀವನಾಡಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೆಆರ್ಎಸ್ ಜಲಾಶಯದ ವಿಚಾರ ಇಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟರೆ ರೈತರು ಸುಮ್ಮನಿರುವುದಿಲ್ಲ. ಜಲಾಶಯ ಇನ್ನೂ ೨೦೦ ವರ್ಷವಾದರೂ ಏನೂ ಆಗುವುದಿಲ್ಲ ಎಂದು ಹೇಳಬೇಕಾದವರು ಅಕ್ರಮ ಗಣಿಗಾರಿಕೆಯಿಂದ ಜೇಬು ತುಂಬಿಸಿಕೊಳ್ಳುತ್ತಿರುವ ರಾಜಕಾರಣಿಗಳಲ್ಲ. ಅದು ಒಡೆದರೆ ನಷ್ಟ ಅನುಭವಿಸಬೇಕಾಗಿರೋದು ನಾವುಗಳೇ. ಜಲಾಶಯದ ಸುರಕ್ಷತೆ ದೃಷ್ಠಿಯಿಂದ ಸರ್ಕಾರ ಆದಷ್ಟು ಬೇಗ ಎಚ್ಚರಿಕೆಯ ಕ್ರಮಕೈಗೊಳ್ಳೋದು ಒಳ್ಳೆಯದು.
-ಸಾಹಿತ್ಯ, ಹಿರಿಯ ಪತ್ರಕರ್ತರು, ಮೈಸೂರು.
Key words: KRS Dam-crack-sumlatha ambarish-HD kumaraswamy