ಮೈಸೂರು, ಜುಲೈ 19, 2021 (www.justkannada.in): ಕರ್ನಾಟಕದ ಜೀವನದಿ ಕಾವೇರಿಗೆ ಅಡ್ಡಲಾಗಿ ಕಟ್ಟಿರುವ ಐತಿಹಾಸಿಕ ಕೃಷ್ಣರಾಜಸಾಗರ ಅಣೆಕಟ್ಟು ಬಿರುಕು ಬಿಟ್ಟಿದೆ ಎಂಬ ವಿಷಯ ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ದೊಡ್ಡ ಗದ್ದಲವನ್ನೇ ಎಬ್ಬಿಸಿದೆ. ಮಂಡ್ಯದ ಸಂಸತ್ ಸದಸ್ಯೆ ಸುಮಲತಾ ಅಂಬರೀಶ್ ಅವರು ತಮ್ಮ ಸಂಸತ್ ಪ್ರದೇಶ ವ್ಯಾಪ್ತಿಗೆ ಬರುವ ಕೆಆರ್ಎಸ್ ಅಣೆಕಟ್ಟೆಯ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಗಣಿಗಾರಿಕೆ ಇಂದಾಗಿ ಅಣೆಕಟ್ಟೆ ಬಿರುಕು ಬಿಟ್ಟಿರುವುದಾಗಿ ದೂರಿದ್ದು, ಸರ್ಕಾರಿ ಅಧಿಕಾರಿಗಳು ಈ ಆರೋಪವನ್ನು ಅಲ್ಲಗೆಳೆದಿದ್ದಾರೆ. ಜೊತೆಗೆ ತಮ್ಮ ನಿಲುವಿಗೆ ಸಂಬಂಧಪಟ್ಟಂತೆ ಕೆಲವು ವಿವರಗಳನ್ನೂ ಸಹ ಅಧಿಕಾರಿಗಳು ಒದಗಿಸಿದ್ದಾರೆ.
ಸಂಸತ್ ಸದಸ್ಯೆ ಸುಮಲತಾ ಸಹ ತಮ್ಮ ಹೇಳಿಕೆಗೆ ಪೂರಕವಾಗುವಂತಹ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಆದರೆ ಈ ವಿಷಯದಲ್ಲಿ ಯಾರ ಮಾತುಗಳು ನಿಜ? ಎಂಬುದು ಯಕ್ಷ ಪ್ರಶ್ನೆಯಾಗಿದೆ ಈ ಹಿನ್ನೆಲೆಯಲ್ಲಿ ವಾಸ್ತವಾಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನಗಳೂ ನಡೆದಿವೆ.
ಕೆಆರ್ಎಸ್ ಅಣೆಕಟ್ಟೆಯ ಇತ್ತೀಚಿನ ವಿವಾದವೇನು?
ಕೆಆರ್ಎಸ್ ಅಣೆಕಟ್ಟು ಒಟ್ಟು ೪೯.೪೫ ಸಾವಿರ ದಶಲಕ್ಷ ಕ್ಯೂಬಿಕ್ ಅಡಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ರಾಜ್ಯದಲ್ಲಿರುವ ಇತರೆ ಅಣೆಕಟ್ಟುಗಳ ಹೋಲಿಕೆಯಲ್ಲಿ ಚಿಕ್ಕ ಅಣೆಕಟ್ಟಾಗಿದೆ. ಆದರೆ ಕರ್ನಾಟಕ ಹಾಗೂ ತಮಿಳುನಾಡಿನ ನಾಲ್ಕು ಕೋಟಿ ಜನರು ನೀರಾವರಿ ಹಾಗೂ ಗೃಹೋಪಯೋಗಿ ಮತ್ತು ಕುಡಿಯಲು ಇದನ್ನೇ ಅವಲಂಭಿಸಿದ್ದಾರೆ. ಬೆಂಗಳೂರಿಗೆ ಹಾಗೂ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಜೊತೆಗೆ ರಾಮನಗರ ಜಿಲ್ಲೆಯ ಬಹುತೇಕ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವುದರ ಜೊತೆಗೆ 3.3 ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿಯನ್ನು ಕಲ್ಪಿಸಿದೆ. ಇದಲ್ಲದೆ ಕಾಲವೆಗಳ ಸಂಪರ್ಕಜಾಲದ ಮೂಲಕ ಜಲಾನಯನ ಪ್ರದೇಶದಡಿ ಬರುವ ಎಲ್ಲಾ ಕೆರೆಗಳಿಗೂ ನೀರುಣಿಸುತ್ತದೆ.
ಸಂಸತ್ ಸದಸ್ಯೆ ಸುಮಲತಾ ಅವರ ಆರೋಪವೇನು? ಸರ್ಕಾರ ಅದಕ್ಕೆ ಏನು ಹೇಳುತ್ತದೆ?
ಕರ್ನಾಟಕದ ರಾಜ್ಯಪಾಲರಾದ ಥಾವರ್ಚಂದ್ ಗೆಹಲೋಟ್ ಅವರಿಗೆ ಜುಲೈ 17ರಂದು ಸಲ್ಲಿಸಿರುವ ಅರ್ಜಿಯೊಂದರಲ್ಲಿ ಸುಮಲತಾ ಅಂಬರೀಶ್ ಅವರು ಈ ರೀತಿ ಆರೋಪಿಸಿದ್ದಾರೆ, “ಅಣೆಕಟ್ಟೆಯ ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುತ್ತಿರುವ ತಡೆರಹಿತವಾಗಿ ನಡೆಯುತ್ತಿರುವ ಕಾನೂನುಬಾಹಿರ ಗಣಿಗಾರಿಕೆ ಹಾಗೂ ಸ್ಫೋಟಗಳಿಂದಾಗಿ” ಈ ಪ್ರದೇಶದ ಸುತ್ತಮುತ್ತಲು ಮಾಲಿನ್ಯವನ್ನು ಸೃಷ್ಟಿಸಿರುವುದರ ಜೊತೆಗೆ, ಈ ವ್ಯಾಪ್ತಿಯಲ್ಲಿ ಬರುವ ಮನೆಗಳನ್ನು ಹಾನಿಗೊಳಿಸಿದೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯನ್ನು ಸೃಷ್ಟಿಸಿದೆ. ಅಣೆಕಟ್ಟೆಯ ಒಟ್ಟಾರೆ ಸುರಕ್ಷತೆಯನ್ನು ಅಂದಾಜಿಸಲು ನಾಲ್ವರು ಸದಸ್ಯರಿರುವ ಒಂದು ಕಾರ್ಯಪಡೆಯನ್ನು ರಚಿಸುವಂತೆ ಒತ್ತಾಯಿಸಿದ್ದಾರೆ.
ಅಣೆಕಟ್ಟೆಯ ಮೇಲ್ವಿಚಾರಣೆ ವಹಿಸಿರುವ ಸರ್ಕಾರಿ ಏಜೆನ್ಸಿ ಆಗಿರುವ ಕಾವೇರಿ ನೀರಾವರಿ ನಿಗಮವು ಸುಮಲತಾ ಅವರ ಈ ಆರೋಪವನ್ನು ಅಲ್ಲಗಳೆದಿದ್ದು, ಅಣೆಕಟ್ಟು ಸುರಕ್ಷಿತವಾಗಿದೆ ಹಾಗೂ ಯಾವುದೇ ರೀತಿಯ ಬಿರುಕು ಅಥವಾ ಲೋಪಗಳು ಉದ್ಭವಿಸಿಲ್ಲ ಎನ್ನುತ್ತಾರೆ.
ಹಾಗಾದರೆ ಕೆಆರ್ಎಸ್ ಅಣೆಕಟ್ಟು ಎಷ್ಟು ಸುರಕ್ಷಿತವಾಗಿದೆ?
ಕೆಆರ್ಎಸ್ ಅಣೆಕಟ್ಟೆ 89 ವರ್ಷ ಹಳೆಯದಾಗಿದ್ದು (21 ವರ್ಷಗಳ ನಿರ್ಮಾಣ ಚಟುವಟಿಕೆಗಳ ನಂತರ 1932ರಲ್ಲಿ ಪೂರ್ಣಗೊಂಡಿತು), ಇದರ ಬಾಳಿಕೆ 100 ವರ್ಷ ಎನ್ನಲಾಗಿದೆ. ಆದರೆ, ವಿಶ್ವ ಸಂಸ್ಥೆಯ ವಿಶ್ವವಿದ್ಯಾಲಯದ ನೀರು, ಪರಿಸರ ಹಾಗೂ ಆರೋಗ್ಯದ ಕುರಿತ ಸಂಸ್ಥೆಯ ” Ageing water infrastructure: An emerging global risk ” ಎಂಬ ಶೀರ್ಷಕೆಯುಳ್ಳ ವರದಿಯ ಪ್ರಕಾರ 50 ವರ್ಷ ಅಥವಾ ಅದಕ್ಕಿಂತ ಹಳೆಯ ಎಲ್ಲಾ ಅಣೆಕಟ್ಟುಗಳು ಕಾಳಜಿಯನ್ನುಂಟು ಮಾಡುತ್ತವೆ. 2025ರ ವೇಳೆಗೆ ಭಾರತದಲ್ಲಿ ಸುಮಾರು ೧,೦೦೦ ಬೃಹತ್ ಅಣೆಕಟ್ಟುಗಳು ೫೦ ವರ್ಷಗಳಿಗಿಂತ ಹಳೆಯದಾಗುತ್ತವೆ.
ಅಣೆಕಟ್ಟೆಯ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಹಾಗೂ ಸ್ಫೋಟಗಳ ಕುರಿತು ಏನು?
ಮೇ 12, 2011ರಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪಗಳ ನಿಗಾವಣಾ ಕೇಂದ್ರವು (ಕೆಎಸ್ಎನ್ಡಿಎಂಸಿ) ಕೆಆರ್ಎಸ್ ಅಣೆಕಟ್ಟೆ ವ್ಯಾಪ್ತಿಯಲ್ಲಿ ವಿಎಸ್ಎಟಿ-ಚಾಲಿತ ಖಾಯಂ ಭೂಕಂಪ ನಿಗಾವಣಾ ಕೇಂದ್ರವನ್ನು ಸ್ಥಾಪಿಸಿದೆ. ಕೆಎಸ್ಎನ್ಡಿಎಂಸಿ ಒಂದು ಅಧ್ಯಯನ ವರದಿಯಲ್ಲಿ ಕೆಆರ್ಎಸ್ ಅಣೆಕಟ್ಟೆಯ ೧೫-೨೦ ಕಿ.ಮೀ.ಗಳ ವ್ಯಾಪ್ತಿಯಲ್ಲಿ ತಪಾಸಣೆಯನ್ನು ಕೈಗೊಳ್ಳುವಂತೆ ಹಾಗೂ ದೀರ್ಘ ಅವಧಿಯಲ್ಲಿ ಅಣೆಕಟ್ಟೆಗೆ ಹಾನಿ ಉಂಟು ಮಾಡುವಂತಹ ಯಾವುದೇ ಚಟುವಟಿಕೆಗಳನ್ನು ನಿಷೇಧಿಸಲು ಯೋಜನೆಯನ್ನು ರೂಪಿಸುವಂತೆ ಪ್ರಸ್ತಾಪಿಸಿದೆ.
ಅಣೆಕಟ್ಟೆಯ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸುವಂತೆ ಸ್ಥಳೀಯರು ಹಾಗೂ ಚಳುವಳಿಕಾರರು ಒತ್ತಾಯಸಿದ್ದಾರೆ. ಮಂಡ್ಯ ಜಿಲ್ಲಾಡಳಿತವು ಅಣೆಕಟ್ಟೆಯ ಸುತ್ತಲು 20 ಕಿ.ಮೀ. ವ್ಯಾಪ್ತಿಯಲ್ಲಿ ಆಗಾಗ ಗಣಿಗಾರಿಕೆಯನ್ನು ನಿಷೇಧಿಸುತ್ತಿದೆ. ಆದರೆ 2018ರಿಂದ ಪಾಂಡವಪುರ ತಾಲ್ಲೂಕಿನಲ್ಲಿರುವ ಬೇಬಿ ಗ್ರಾಮದ ಸರ್ವೆ ಸಂಖ್ಯೆ 1ರಡಿ ಬರುವ ೧,೬೨೩ ಎಕರೆ ಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆಯನ್ನು ಅಧಿಕೃತವಾಗಿ ನಿಲ್ಲಿಸಿದೆ. ಆದರೆ ಇಲ್ಲಿ ಒಂದೇ ಒಂದು ಕಾನೂನು ಪ್ರಕಾರ ನಡೆಯುತ್ತಿರುವ ಗಣಿ ಇದೆ, ಅದರಲ್ಲಿಯೂ ವಿಶೇಷವಾಗಿ ಬೇಬಿ ಬೆಟ್ಟದಲ್ಲಿರುವ ಖಾಸಗಿ ಭೂಮಿಯಲ್ಲಿ. ೨೦೧೮ರಲ್ಲಿ ೩೨ ಕ್ವಾರಿಗಳ ಗುತ್ತಿಗೆ ರದ್ದುಗೊಳಿಸಲಾಗಿದ್ದರೂ ಸಹ, ಬೇಬಿ ಬೆಟ್ಟದ ಕವಲಿನಲ್ಲಿ ೨೩ ಕಲ್ಲು ಗಣಿಗಳಿಗೆ ಪರವಾನಗಿಗಳನ್ನು ನೀಡಿದ್ದು ಇವು ಇನ್ನೂ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ, ಬೇಬಿ ಬೆಟ್ಟದಲ್ಲಿ ಕೇವಲ ಜಲ್ಲಿ ಕಲ್ಲು ಹಾಗೂ ಎಂ-ಸ್ಯಾಂಡ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
ಗಣಿಗಾರಿಕೆಯ ಪರಿಣಾಮದ ಕುರಿತಂತೆ ಯಾವುದಾದರೂ ಅಧ್ಯಯನಗಳನ್ನು ಕೈಗೊಳ್ಳಲಾಗಿವೆಯೇ?
ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಕೇಂದ್ರ ಗಣಿಗಾರಿಕೆ ಹಾಗೂ ಇಂಧನ ಸಂಶೋಧನೆಯ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಪರಿಷತ್ ನ ವಿಜ್ಞಾನಿಗಳು ಅಣೆಕಟ್ಟೆಯ ಮೇಲೆ ಕಲ್ಲು ಗಣಿಗಾರಿಕೆಯಿಂದಾಗಿ ಸಂಭವಿಸುತ್ತಿರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಮೂರು ಸ್ಥಳಗಳನ್ನು ಗುರುತಿಸಿ ಸರ್ಕಾರ ಅನುಮೋದನೆಯನ್ನು ನೀಡಿತು. ಆದರೆ ಕೋವಿಡ್-19 ಎರಡನೆಯ ಅಲೆ ಎದುರಾದ ಕಾರಣ ಅದನ್ನು ನಿಲ್ಲಿಸಲಾಯಿತು.
ಕಾವೇರಿ ನೀರಾವರಿ ನಿಗಮವು ಸಾಧ್ಯವಾದಷ್ಟು ಬೇಗ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ತಜ್ಞರನ್ನು ಕೋರಿದ್ದಾರೆ. ಅಣೆಕಟ್ಟೆಯಿಂದ ನೀರು ಸೋರಿಕೆಯ ಕುರಿತು ಅಥವಾ ಅಣೆಕಟ್ಟೆಯ ಬಲವನ್ನು ಸುಧಾರಿಸುವ ಕುರಿತು ವಿಶ್ವ ಬ್ಯಾಂಕ್ ನ ಅಣೆಕಟ್ಟು ಪುನರ್ವಸತಿ ಹಾಗೂ ಸುಧಾರಣಾ ಯೋಜನೆಯಡಿ ವಿವರವಾದ ತಪಾಸಣೆಗಳನ್ನು ಪ್ರತ್ಯೇಕವಾಗಿ ಕೈಗೊಳ್ಳಲಾಗುತ್ತಿದೆ. ಅಣೆಕಟ್ಟೆಯ ೧೩೬ ಗೇಟುಗಳನ್ನು ಬದಲಾಯಿಸುವುದು, ಎರಡು ಕ್ರೇನ್ಗಳು ಹಾಗೂ ೧೩೬ ಸ್ಕಿಡ್ ಮೌಂಟೆಡ್ ಕಾಂಪ್ಯಾಕ್ಟ್ ಹಾಯಿಸ್ಟ್ ಗಳ ಬದಲಾವಣೆಯ ಜೊತೆಗೆ ಅಣೆಕಟ್ಟೆ ಸುಧಾರಣೆಯ ಅಗತ್ಯ ಈ ತಪಾಸಣೆಯಲ್ಲಿ ಸೇರಿದೆ.
Key words: KRS Dam –crack-what – reality