1976ರ ಬಳಿಕ ಕಾವೇರಿ ಕಣಿವೆಗೆ ಕನಿಷ್ಠ ಒಳಹರಿವು

ಬೆಂಗಳೂರು:ಜುಲೈ-8: ಕಾವೇರಿ ಕಣಿವೆಯಲ್ಲಿ 43 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಿದ್ದು, ಈಗಲೂ ತೀವ್ರ ಬರಗಾಲ ಎದುರಾಗುವ ದಟ್ಟ ಛಾಯೆ ಆವರಿಸಿದೆ. ಜಲಸಂಪನ್ಮೂಲ ಇಲಾಖೆ ಪ್ರಕಾರ 1976-77ರ ಜೂನ್​ನಲ್ಲಿ ಬಂದಿದ್ದ ಕೇವಲ 3 ಟಿಎಂಸಿ ಒಳಹರಿವು ಇದುವರೆಗಿನ ಅತಿ ಕಡಿಮೆ ಒಳಹರಿವು ಎಂದು ದಾಖಲಾಗಿದೆ. ಆದರೆ ಈ ವರ್ಷದ ಜೂನ್​ನಲ್ಲಿ ಬರೀ 2 ಟಿಎಂಸಿ ಒಳಹರಿವು ಬಂದಿದ್ದು, ಇದು ಕಳೆದ 43 ವರ್ಷಗಳಲ್ಲಿ ಜೂನ್​ನಲ್ಲಿ ಬಂದ ಒಳಹರಿವಿಗಿಂತಲೂ ಕಡಿಮೆ ಎಂದು ದಾಖಲಾಗಿದೆ.

ಜೂನ್​ನಲ್ಲಿ ಮಳೆಗಾಲ ಪ್ರಾರಂಭ ಆಗುವುದರಿಂದ ಆ ತಿಂಗಳಲ್ಲಿ ಸಾಮಾನ್ಯವಾಗಿ ಸರಾಸರಿ 31 ಟಿಎಂಸಿ ನೀರು ಬರುತ್ತದೆ. ಅದೇ ರೀತಿ ಜುಲೈನಲ್ಲಿ ನೀರಿನ ಒಳಹರಿವು ಸರಾಸರಿ 90 ಟಿಎಂಸಿ ಇರಬೇಕು. ಆದರೆ, ಈ ವರ್ಷ ಇದರ ಕಾಲು ಭಾಗ ನೀರು ಬರುವುದು ಅನುಮಾನವಾಗಿದೆ.

ಕಳೆದ ವರ್ಷ ಕಾವೇರಿ ಕಣಿವೆಯಲ್ಲಿ ಭರ್ಜರಿ ಮಳೆಯಾದ್ದರಿಂದ ತಮಿಳುನಾಡಿಗೆ 405 ಟಿಎಂಸಿ ನೀರು ಹರಿದು ಹೋಗಿತ್ತು. ಆದರೆ ಈ ಬಾರಿ ನದಿ ಕಣಿವೆ ಭಾಗಕ್ಕೆ ಕುಡಿಯಲು ನೀರು ಹರಿಸುವುದೂ ಕಷ್ಟವಾಗಿದೆ. ಕಳೆದ ವರ್ಷ ಜೂನ್ ಮೊದಲಾರ್ಧದಲ್ಲಿ ಜಲಾಶಯಗಳಿಗೆ 175 ಟಿಎಂಸಿ ನೀರು ಹರಿದು ಬಂದಿತ್ತು. ಆದರೆ ಈ ಬಾರಿ ಜೂನ್ ಮುಗಿದರೂ ಮಳೆರಾಯನ ದರುಶನ ಭಾಗ್ಯ ಲಭ್ಯವಿಲ್ಲ.

115 ಟಿಎಂಸಿ ಸಾಮರ್ಥ್ಯದ ಕಾವೇರಿ ಕಣಿವೆ: 115 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕಾವೇರಿ ಕಣಿವೆಯ ಕೆಆರ್​ಎಸ್, ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳಲ್ಲಿ 24 ಟಿಎಂಸಿ ನೀರಿದೆ. ಕಳೆದ ವರ್ಷ 79 ಟಿಎಂಸಿ ನೀರು ಹರಿದುಬಂದಿತ್ತು. ಆಗ 20 ಸಾವಿರ ಕ್ಯೂಸೆಕ್ ದಾಟಿದ್ದ ನೀರಿನ ಒಳಹರಿವು ಈ ಬಾರಿ 4000 ಕ್ಯೂಸೆಕ್ ಕೂಡ ದಾಟಿಲ್ಲ. ಕೆಆರ್​ಎಸ್​ನಲ್ಲಿ ಭಾನುವಾರ ನೀರಿನಮಟ್ಟ 81.55 ಅಡಿ ಇದ್ದು, ಒಳಹರಿವು 9,090, ಹೊರಹರಿವು 357 ಕ್ಯೂಸೆಕ್ ಇತ್ತು.

ಕೃಷ್ಣ ಕಣಿವೆ: ಕಾವೇರಿಗೆ ಹೋಲಿಸಿದರೆ ಕೃಷ್ಣ ಕಣಿವೆ ಪರಿಸ್ಥಿತಿ ಪರವಾಗಿಲ್ಲ. 418 ಟಿಎಂಸಿ ಸಾಮರ್ಥ್ಯದ ಕೃಷ್ಣ ಕಣಿವೆಯ ಆಲಮಟ್ಟಿ, ನಾರಾಯಣಪುರ, ಭದ್ರ, ತುಂಗಭದ್ರ, ಘಟಪ್ರಭ, ಮಲಪ್ರಭ ಜಲಾಶಯಗಳಲ್ಲಿ 64 ಟಿಎಂಸಿ ನೀರಿದೆ. ಕಳೆದ ವರ್ಷ 146 ಟಿಎಂಸಿ ನೀರು ಬಂದಿತ್ತು. ನಾರಾಯಣಪುರ ಜಲಾಶಯ ಬಿಟ್ಟರೆ ಇನ್ನುಳಿದ ಎಲ್ಲ ಜಲಾಶಯಗಳಿಗೆ ಒಳಹರಿವು ಇನ್ನೂ ಆರಂಭವಾಗಿಲ್ಲ.

ತಮಿಳುನಾಡಿಗೆ 7.88 ಟಿಎಂಸಿ: ನ್ಯಾಯಾಧಿಕರಣದ ತೀರ್ಪಿನಂತೆ ಜೂನ್​ನಲ್ಲಿ ತಮಿಳುನಾಡಿಗೆ 9.23 ಟಿಎಂಸಿ ನೀರು ಹರಿಸಬೇಕು. ಈಗಾಗಲೇ 7.88 ಟಿಎಂಸಿ ನೀರು ಹರಿದಿದೆ. ಮೆಟ್ಟೂರು ಜಲಾಶಯದಲ್ಲಿ 15 ಟಿಎಂಸಿ ನೀರಿದೆ. ಕಳೆದ ವರ್ಷ 27 ಟಿಎಂಸಿ ನೀರಿತ್ತು.

1976ರ ಬಳಿಕ ಕಾವೇರಿ ಕಣಿವೆಗೆ ಕನಿಷ್ಠ ಒಳಹರಿವು
krs-dam-inflow-is-low-in-june-month