ಕನ್ನಾಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ: ಬೃಂದಾವನ ಅಭಿವೃದ್ಧಿಗೆ ಚಿಂತನೆ- ಡಿಸಿಎಂ ಡಿಕೆ ಶಿವಕುಮಾರ್

ಮಂಡ್ಯ,ಜುಲೈ,29,2024 (www.justkannada.in): ಇದು ಒಂದು ಸಂಭ್ರದ ದಿನ. ಕನ್ನಾಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ ಇದು ನಮ್ಮ ಬದುಕಿನ ಜೀವ ನದಿ. ಬಹಳ ಸಂಭ್ರಮದಿಂದ ತಾಯಿಗೆ ನಮನ ಸಲ್ಲಿಸಿದ್ಧೇವೆ‌. ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಇಲ್ಲಿರುವ ಬೃಂದಾವನ ಅಭಿವೃದ್ಧಿ ಪಡಿಸುವ ಚಿಂತನೆ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

ಇಂದು ಕೆಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಡಿಸಿಎಂ ಡಿ. ಕೆ ಶಿವಕುಮಾರ್, ಮೇಲಿನ‌ ಮೋಡಕ್ಕೆ, ಕಾವೇರಿ ಮಾತೆಗೆ ಯಾವ ಪಕ್ಷ ಅಧಿಕಾರದಲ್ಲಿದೆ ಎನ್ನುವುದು ಗೊತ್ತಿಲ್ಲ. ಈ ಬಾರಿ ತಾಯಿ ತುಂಬಿ ಹರಿಯುತ್ತಿದ್ದಾಳೆ. ಭಾರತದ ಏಳು ನದಿಗಳಲ್ಲಿ ಕಾವೇರಿಯೂ ಒಂದು. ನಮ್ಮ ಸರ್ಕಾರ ಈ ಬಾರಿ 82 ಲಕ್ಷ ಹೆಕ್ಟೇರ್ ಗೆ ಬಿತ್ತನೆ ಕಾರ್ಯ ಗುರಿ ಹೊಂದಿದೆ. ಈಗಾಗಲೇ 66 ಲಕ್ಷ ಹೆಕ್ಟೇರ್ ಬಿತ್ತನೆ ಆಗಿದೆ. ನಮ್ಮ ಸರ್ಕಾರ ಬಂದಾಗ ಬರಗಾಲ ಬಂತು ಅಂತ ಕೆಲವರು ಟೀಕೆ ಮಾಡಿದ್ರು ಟೀಕೆಗಳು ಸಾಯುತ್ತೆ, ನಮ್ಮ ಕೆಲಸಗಳು ಉಳಿಯುತ್ತೆ ಎಂದರು.

ಮೇಕೆದಾಟು ಯೋಜನೆಯನ್ನ ನಮ್ಮ ಕಾಲಘಟ್ಟದಲ್ಲಿ ನೆರವೇರಿಸುತ್ತೇವೆ.

ಕಾವೇರಿ ಜಲಾನಯನ ಪ್ರದೇಶಕ್ಕೆ ಒಂದು ಹೊಸ ದಿಕ್ಕನ್ನ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲರಿಗೂ ಸಮರ್ಪಕ ನೀರು ತಲುಪು ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತಂದು ಹೊಸ ನೀತಿ ತರಲು ನಿರ್ಧಾರ ಮಾಡಿದ್ದೇವೆ. ರೈತರನ್ನ ಉಳಿಸುವ ಕೆಲಸವನ್ನ ನಾವು ಮಾಡುತ್ತೇವೆ. ಈಗಾಗಲೇ 83 ಟಿಎಂಸಿ ತಮಿಳುನಾಡಿಗೆ ಹರಿದಿದ್ದಾಳೆ. ಪ್ರತಿವರ್ಷ ತಮಿಳುನಾಡಿಗೆ ಸಾಕಷ್ಟು ನೀರು ಹರಿಸುತ್ತಾ ಬಂದಿದ್ದೇವೆ. ಮೇಕೆದಾಟು ಒಂದು ಪರಿಹಾರ ಅದಕ್ಕಾಗಿ ನಾವು ದೊಡ್ಡ ಹೋರಾಟ ಮಾಡಿದೆವು. ನಮ್ಮ ವಿರೋಧ ಪಕ್ಷದವರು ನಮ್ಮ ಮೇಲೆ ಕೇಸ್ ಹಾಕಿಸಿದ್ರು. ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಅಡ್ಡಿ ಮಾಡಿದ್ರು. ಒಂದು ಶಪತ ಮಾಡಿದ್ದವು. ಜೈಲಿಗೆ ಹೋದರೂ ಚಿಂತೆ ಇಲ್ಲ, ಕೋವಿಡ್ ಇದ್ದರೂ ಕೂಡ ನಾವು ಪಾದಯಾತ್ರೆ ಮಾಡಿದ್ದವು. ರಾಜ್ಯದ ಜನತೆ ಕಾವೇರಿ ಹುಟ್ಟುವ ಜಾಗದಿಂದ ಹಿಡಿದು ಹರಿದು ಮೇಕೆದಾಟು ಸೇರುವ ವರೆಗೂ ನಮ್ಮ ಕಾಂಗ್ರೆಸನ್ನ‌ ಗೆಲ್ಲಿಸಿಕೊಟ್ಟಿದ್ದೀರಿ. ಈ ಋಣವನ್ನ ಮರೆಯಲ್ಲ, ನಾವು ಮೇಕೆದಾಟು ಯೋಜನೆ ಕೈಬಿಡಲ್ಲ, ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನಾನುಕೂಲ ಆಗಲ್ಲ. ಸುಪ್ರೀಂ ಕೋರ್ಟ್ ನಮಗೆ ಅವಕಾಶ ಕೊಟ್ಟರೆ ಖಂಡಿತ ಮೇಕೆದಾಟು ಯೋಜನೆಯನ್ನ ನಮ್ಮ ಕಾಲಘಟ್ಟದಲ್ಲಿ ನೆರವೇರಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದರು.

ಇಂದು ಅಭಿಜಿನ್ ಶುಭಲಗ್ನದಲ್ಲಿ ಬಾಗಿನ ಅರ್ಪಣೆ ಮಾಡಿದ್ದೇವೆ. ಕೆಆರ್ ಎಸ್ ಗಾರ್ಡನ್ ಗೆ ಮುಂದಿನ ದಿನಗಳಲ್ಲಿ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತೇವೆ. ಮೈಸೂರು, ಮಂಡ್ಯ, ಚಾಮರಾಜನಗರದ ಪ್ರವಾಸಿ ತಾಣಗಳ ಉತ್ತೇಜನ ಮಾಡಲು ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಬೃಂದಾವನ ಅಭಿವೃದ್ಧಿ ಪಡಿಸುವ ಚಿಂತನೆ ಇದೆ. ಜಲಾಶಯ ಭದ್ರತೆಯನ್ನ ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಒಂದು ತೀರ್ಮಾನ ಮಾಡಿದೆ. ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಿಸಲು ನಿರ್ಧಾರ ಮಾಡಲಾಗಿದೆ. ಒಂದು ಸಮಿತಿ ರಚನೆ ಮಾಡಿ ಈ ಕಾರ್ಯವನ್ನ ಮಾಡಲಾಗುತ್ತದೆ. ಯೋಜನೆ ವರದಿಯನ್ನ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾಲೆಗಳ ನವೀಕರಣ ಬಗ್ಗೆಯೂ ಕೂಡ ಗಮನ ಹರಿಸಲಾಗಿತ್ತದೆ. ಮುಂದಿನ ವರ್ಷದಿಂದ ಮೂವರು ನೀರುಗಂಟಿ , ಒಬ್ಬ ಪ್ರಗತಿಪರ ರೈತ,  ಮತ್ತು ಇಂಜಿನಿಯರ್ ಸೇರಿ ಐವರಿಗೆ ಪ್ರಶಸ್ತಿ ಕೊಡುವ ನಿರ್ಧಾರ ಮಾಡಲಾಗಿದೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಹೋಗಲ್ಲ. ನಮ್ಮ ಕೆಲಸಗಳೇ ಅವರಿಗೆ ಉತ್ತರ ಕೊಡುತ್ತೆ ಎಂದು  ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

Key words: KRS, DCM, DK Shivakumar, development, Brindavan