ಮೈಸೂರು, ಮೇ 16, 2022 (www.justkannada.in): ಕೃಷ್ಣರಾಜಸಾಗರ (ಕೆಆರ್‌ಎಸ್) ಕರ್ನಾಟಕದ ಜೀವನಾಡಿ. ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಈ ಜಲಾಶಯದ ನೀರಿನ ಶೇಖರಣಾ ಮಟ್ಟದಲ್ಲಿ ಏರುಪೇರು ಉಂಟಾದರೆ ಇಡೀ ರಾಜ್ಯವೇ ಅಲ್ಲದೆ ಅಕ್ಕದಪಕ್ಕದ ರಾಜ್ಯಗಳ ಮೇಲೂ ಪ್ರಭಾವ ಬೀರುತ್ತದೆ. ಆದರೆ ಈ ವರ್ಷ ಒಳ್ಳೆಯ ಸುದ್ದಿಯಿದೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಉತ್ತಮವಾಗಿದೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಮೇ ತಿಂಗಳಲ್ಲೇ ೧೦೦ ಅಡಿಗಳನ್ನು ತಲುಪಿದೆ. ಭಾನುವಾರ ಬೆಳಿಗ್ಗೆ ನೀರಿನ ಮಟ್ಟ ೧೦೦.೦೨ ಅಡಿಗಳಷ್ಟಿತ್ತು. ಜಲಾಶಯದ ಗರಿಷ್ಠ ನೀರು ಶೇಖರಣಾ ಮಟ್ಟ ೧೨೪.೮ ಅಡಿ. ಕಳೆದ ವರ್ಷ ಇದೇ ಸಮಯದಲ್ಲಿ ನೀರಿನ ಮಟ್ಟ ಕೇವಲ ೮೮ ಅಡಿಗಳಷ್ಟಿತ್ತು.
ಕಾವೇರಿ ನೀರಾವರಿ ನಿಗಮದ ಓರ್ವ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, “ಕೆಆರ್‌ಎಸ್ ಜಲಶಾಯದ ನೀರಿನ ಮಟ್ಟ ಬೇಸಿಗೆಯಲ್ಲಿ ಬಹಳ ಬೇಗನೆ ಕುಸಿಯುತ್ತದೆ. ಜಲಾಶಯದ ಶೇಖರಣಾ ಮಟ್ಟ ಮಳೆಯ ಅಭಾವದಿಂದಾಗಿ ಮಳೆಗಾಲದಲ್ಲಿಯೂ ಡೆಡ್ ಸ್ಟೋರೇಜ್ ಮಟ್ಟ ಇರುವ ಎಷ್ಟೋ ಸಂದರ್ಭಗಳಿವೆ. ಆದರೆ ಈ ವರ್ಷ ಉತ್ತಮ ಮಳೆಯಿಂದಾಗಿ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಭಾನುವಾರದಂದು ನೀರಿನ ಒಳಹರಿವು ೧,೧೭೧ ಕ್ಯೂಸೆಕ್ ಇದ್ದು, ಹೊರಹರಿವು ೧,೦೧೧ ಕ್ಯೂಸೆಕ್ ನಷ್ಟಿತ್ತು. ಗರಿಷ್ಠ ಸಾಮರ್ಥ್ಯ ೪೯.೪೫೨ ಟಿಎಂಸಿ ಪೈಕಿ ಹಾಲಿ ನೀರಿನ ಶೇಖರಣಾ ಪ್ರಮಾಣ ೨೨.೮೨೫ ಟಿಎಂಸಿಯಷ್ಟಿದೆ. ಕಳೆದ ವರ್ಷ ಮೇ ೧೫, ೨೦೨೧ರಂದು ನೀರಿನ ಶೇಖರಣೆಯ ಮಟ್ಟ ೧೪.೭೭೯ ಟಿಎಂಸಿ ಅಷ್ಟಿತ್ತು.”
ಮತ್ತೋರ್ವ ಅಧಿಕಾರಿಯ ಪ್ರಕಾರ, “ಕಳೆದ ಕೆಲವು ವರ್ಷಗಳಲ್ಲಿ, ಜಲಾಶಯದ ನೀರಿನ ಒಳಹರಿವಿನಲ್ಲಿ ಬದಲಾವಣೆಗಳು ಉಂಟಾಗಿದೆ. ಈ ಹಿಂದೆ ಕೇವಲ ಮಳೆಗಾಲದ ಆರಂಭದ ದಿನಗಳಲ್ಲಿ ಮಾತ್ರ ಜಲಾಶಯಕ್ಕೆ ಉತ್ತಮ ನೀರಿನ ಒಳಹರಿವಿತ್ತು. ಸಾಮಾನ್ಯವಾಗಿ ಕೊಡಗು ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಮಳೆಗಾಲ ಜೂನ್ ತಿಂಗಳ ಮೊದಲ ವಾರದಲ್ಲಿ ಆರಂಭವಾಗುತ್ತದೆ ಹಾಗೂ ಜುಲೈ ತಿಂಗಳ ಮಧ್ಯ ಭಾಗದಲ್ಲಿ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟ ತಲುಪುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಜಲಾಶಯದ ಮಟ್ಟ ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿ ಅಷ್ಟಾಗಿ ಇರಲಿಲ್ಲ. ಬದಲಿಗೆ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಉತ್ತಮ ಮಳೆಯಾಗಿ ಗರಿಷ್ಠ ಮಟ್ಟ ತಲುಪಿತು. ಹಾಲಿ ಜಲಾಶಯದಲ್ಲಿ ನೀರಿನ ಮಟ್ಟ ಉತ್ತಮವಾಗಿರುವುದಕ್ಕೆ ಮತ್ತೊಂದು ಕಾರಣವೇನೆಂದರೆ ಕಳೆದ ವರ್ಷ ಜಲಾಶಯದ ನೀರಿನ ಗರಿಷ್ಠ ಮಟ್ಟ ಸುಮಾರು ೧೦೦ ದಿನಗಳಿಗೂ ಹೆಚ್ಚಿನ ದಿನಗಳವರೆಗೆ ಮುಂದುವರೆದಿತ್ತು. ಇದೊಂದು ದಾಖಲೆ.”
ಇನ್ನೂ ಎರಡು ದಿನ ಮಳೆ
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಭಾನುವಾರವೂ ಮುಂದುವರೆದಿತ್ತು. ನಗರದ ಬೆಳಗಿನ ತಾಪಮಾನ ೨೯.೫ ಡಿಗ್ರಿ ಸೆಲ್ಷಿಯಸ್ ಇದ್ದರೆ ರಾತ್ರಿ ತಾಪಮಾನ ೨೦.೯ ಡಿಗ್ರಿ ಸೆಲ್ಷಿಯಸ್ ನಷ್ಟಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗರಿಷ್ಠ ತಾಪಮಾನ ೩೦.೫ ಹಾಗೂ ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿಯ ತಾಪಮಾನ ೩೦ ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು.
ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಎರಡು ದಿನಗಳ ಕಾಲ ಮಳೆ ಹಾಗೂ ಗುಡುಗಿನೊಂದಿಗೆ ಮಳೆ ಮುಂದುವರೆಯಲಿದೆ. ನಗರದ ತಾಪಮಾನ ೩೦ ಹಾಗೂ ೨೧ ಡಿಗ್ರಿ ಸೆಲ್ಷಿಯಸ್ ನಡುವೆ ಇರಲಿದೆ. ರಾಜ್ಯದ ಇತರೆ ಸ್ಥಳಗಳಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಗರಿಷ್ಠ ೩ ಸೆಂ.ಮೀ.ನಷ್ಟು ಮಳೆಯಾಗಿದೆ. ಅದೇ ರಾತ್ರಿ ಬೀದರ್ ಜಿಲ್ಲೆಯ ಭಾಲ್ಕಿ, ಬೆಂಗಳೂರು, ಹೆಚ್‌ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ ತಲಾ ೨ ಸೆಂ.ಮೀ.ನಷ್ಟು ಮಳೆಯಾಗಿದೆ; ಧರ್ಮಸ್ಥಳ, ಸುಳ್ಯ (ದಕ್ಷಿಣ ಕನ್ನಡ ಜಿಲ್ಲೆ), ಸುಳೆಪೇಟೆ (ಕಲಬುರಗಿ ಜಿಲ್ಲೆ), ಹುಣಸೂರು, ಬಿಳಿಕೆರೆ (ಮೈಸೂರು ಜಿಲ್ಲೆ), ಚಾಮರಾಜನಗರ, ಹೆಸರಘಟ್ಟ, ಜಿಕೆವಿಕೆ (ಬೆಂಗಳೂರು), ಹೊಸಕೋಟೆ ಹಾಗೂ ನೆಲಮಂಗಲದಲ್ಲಿ ತಲಾ ಒಂದು ಸೆಂ.ಮೀ.ನಷ್ಟು ಮಳೆಯಾಗಿದೆ.
ಸುದ್ದಿ ಮೂಲ: ಬೆಂಗಳೂರು ಮಿರರ್
Key words: KRS – filling up- before – rainy season