KRS ಗೆ ಅಧಿಕ ನೀರು: ರಂಗನತಿಟ್ಟು ಪಕ್ಷಿಧಾಮದಲ್ಲಿ HIGH ALERT , ದೋಣಿ ವಿಹಾರ ಬಂದ್.

 

ಶ್ರೀರಂಗಪಟ್ಟಣ,ಜು. 10, 2022 : (www.justkannada.in news ) ಕಾವೇರಿ ಕಣಿವೆಯಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಕಾರಣ KRS ಅಣೆಕಟ್ಟೆಯಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ‘ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ತಾತ್ಕಾಲಿಕ ಸ್ಥಗಿತ.

ಕೊಡಗು ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‌ಎಸ್.ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಅಣೆಕಟ್ಟೆ ಭರ್ತಿಗೆ ಕೇವಲ ೩ ಅಡಿ ಮಾತ್ರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಭದ್ರತೆಯ ದೃಷ್ಟಿಯಿಂದ ಒಳಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ನದಿಗೆ ನೀರು ಹರಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಶನಿವಾರದಿಂದ ೧೩ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ನದಿ ಪಾತ್ರದ ಹಾಗೂ ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಹಾಗೂ ಯಾವುದೇ ಸಂದರ್ಭದಲ್ಲೂ ಅಣೆಕಟ್ಟೆಯಿಂದ ಇನ್ನು ಅಧಿಕ ನೀರು ನದಿಗೆ ಬಿಡುವ ಸಾಧ್ಯತೆ ಕಾರಣ, ಪ್ರವಾಸಿಗರ ಹಿತದೃಷ್ಟಿಯಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.
ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ವಿ.ಕರಿಕಾಳನ್ ಸೂಚನೆ ಮೇರೆಗೆ ಶನಿವಾರದಿಂದಲೇ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಎಲ್ಲಾ ದೋಣಿಗಳನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟಿ ಹಾಕಲಾಗಿದ್ದು, ಮಳೆ ಹಾಗೂ ನದಿಯಲ್ಲಿ ನೀರಿನ ಪ್ರಮಾಣ ಕುಗ್ಗುವವರೆಗೂ ದೋಣಿಯಾನ ಆರಂಭಿಸದಂತೆ ಸೂಚನೆ ನೀಡಲಾಗಿದೆ. ಆದರೆ ರಂಗನತಿಟ್ಟು ಉದ್ಯಾನವನಕ್ಕೆ ಭೇಟಿ ನೀಡಬಹುದಾಗಿದೆ.

ಬ್ಯಾಟರಿ ಚಾಲಿತ ವಾಹನದಲ್ಲಿ ಪಕ್ಷಿಧಾಮವನ್ನು ಪ್ರದಕ್ಷಿಣೆ ಹಾಕಬಹುದಾಗಿದೆ. ಅಣೆಕಟ್ಟೆಯಿಂದ ೬೦ ಸಾವಿರ ಕ್ಯೂಸೆಕ್‌ಗಿಂತ ಹೆಚ್ಚಿನ ಪ್ರಮಾಣದ ನೀರು ನದಿಗೆ ಬಿಟ್ಟರೆ ಮಾತ್ರ, ಪಕ್ಷಿಧಾಮಕ್ಕೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗುತ್ತದೆ.

High Alert :

ರಂಗನತಿಟ್ಟು ಪಕ್ಷಿಧಾಮದ ಬಳಿ ನದಿಯಲ್ಲಿ ನೀರಿನ ಸ್ಥಿತಿಗತಿ ಪರಿಶೀಲಿಸುವಂತೆ ಆರ್‌ಎಫ್‌ಓ ಸಂತೋಷ್ ಹೂಗಾರ್, ಡಿಆರ್‌ಎಫ್‌ಓ ಎಂ.ಪುಟ್ಟಮಾದೇಗೌಡ ಸೇರಿದಂತೆ ಪಕ್ಷಿಧಾಮದ ಸಿಬ್ಬಂದಿ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಪ್ರವಾಸಿಗರು ನದಿ ದಡದ ಬಳಿ ಹೋಗದಂತೆ ಕಟ್ಟೆಚ್ಚರ ವಹಿಸುವುದರೊಂದಿಗೆ ದಿನದ ೨೪ ಗಂಟೆಯೂ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಮೇಲೆ ಕಣ್ಣಿಟ್ಟಿರುವಂತೆ ಸೂಚನೆ ನೀಡಲಾಗಿದೆ.

key words : KRS-full-high-alert-boating-banned-ranganathittu-bird century