ಬೆಂಗಳೂರು, ಜುಲೈ 11, 2022 (www.justkannada.in): ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯಡಿ ಬರುವ ಬಹುತೇಕ ಎಲ್ಲಾ ಜಲಾಶಯಗಳು ಈ ಬಾರಿ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರಕ್ಕೆ ಈ ವರ್ಷ ನೀರಿನ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಕಡಿಮೆಯಾಗಿದೆ. ಸತತ ಮೂರನೇ ವರ್ಷವೂ, ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜಸಾಗರ ಜಲಾಶಯ ಬಹುತೇಕ ಗರಿಷ್ಠ ಮಟ್ಟ ತಲುಪಿದೆ.
ಕೆಆರ್ಎಸ್ ಜಲಾಶಯದ ಮಟ್ಟ ಗರಿಷ್ಠ 124.8 ಅಡಿಗಳಾಗಿದ್ದು, ಭಾನುವಾರ ಮಧ್ಯಾಹ್ನದಂದು ಜಲಾಶಯದ ಮಟ್ಟ 123 ಅಡಿಗಳಷ್ಟಿತ್ತು. ಜಲಾಶಯದ ನೀರಿನ ಒಳಹರಿವು ೩೫,೩೩೫ ಕ್ಯೂಸೆಕ್ ನಷ್ಟಿದ್ದರೆ, ಮುನ್ನೆಚ್ಚರಿಕಾ ಕ್ರಮವಾಗಿ ನೀರಿನ ಹೊರಹರಿವನ್ನು ೨೭,೬೭೨ರಷ್ಟು ಬಿಡಲಾಗುತಿತ್ತು.
ಬೆಂಗಳೂರು ಮಹಾನಗರ ತನ್ನ ದೈನಂದಿನ ನೀರಿನ ಬೇಡಿಕೆಗಳಿಗೆ ಬಹುಪಾಲು ಕೆಆರ್ಎಸ್ ಜಲಾಶಯವನ್ನು ಅವಲಂಭಿಸಿದೆ. ಪ್ರತಿ ದಿನ ಟಿಕೆ ಜಲಾಶಯದಿಂದ (ಕನಕಪುರ ಬಳಿ ಇರುವ) ೧,೪೫೦ ಎಂಎಲ್ಡಿ ಅಷ್ಟು ನೀರನ್ನು ಪಂಪ್ ಮಾಡಲಾಗುತ್ತದೆ.
ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿ, “ನೀರಿನ ಶೇಖರಣೆಗೆ ಸಂಬಂಧಿಸಿದಂತೆ ಈ ವರ್ಷ ನಾವು ಆರಾಮವಾದ ಸ್ಥಾನದಲ್ಲಿದ್ದೇವೆ. ಬೆಂಗಳೂರು ಮಹಾನಗರದ ಶೇ.೭೦ರಷ್ಟು ನೀರಿನ ಅಗತ್ಯಗಳು ಕೆಆರ್ಎಸ್ ಜಲಾಶಯದಿಂದ ಭರಿಸಲಾಗುತ್ತದೆ ಮತ್ತು ಉಳಿದ ಶೇ.೩೦ರಷ್ಟು ಅಗತ್ಯತೆಯನ್ನು ಕಬಿನಿ ಜಲಾಶಯದಿಂದ ಭರಿಸಲಾಗುತ್ತದೆ. ಈ ವರ್ಷ ಕಬಿನಿ ಜಲಾಶಯವೂ ಸಹ ಗರಿಷ್ಠ ಮಟ್ಟ ತಲುಪುತ್ತಿದೆ. ಭಾನುವಾರದಂದು ಕಬಿನಿ ಜಲಾಶಯದಲ್ಲಿ ೨,೨೮೨.೧೨ ಅಡಿಗಳಷ್ಟು (ಗರಿಷ್ಠ ಮಟ್ಟ ೨,೨೮೪ ಅಡಿ) ನೀರಿತ್ತು ಮತ್ತು ನೀರಿನ ಒಳಹರಿವಿನ ಪ್ರಮಾಣ ೧೮,೮೦೩ ಕ್ಯೂಸೆಕ್ಗಳಷ್ಟಿತ್ತು,” ಎಂದು ವಿವರಿಸದರು.
ಹಿಂದಿನ ವರ್ಷಗಳಲ್ಲಿ ಪರಿಸ್ಥಿತಿ ಬಲು ಭಿನ್ನವಾಗಿತ್ತು. ಅಧಿಕಾರಿಯ ಪ್ರಕಾರ ೨೦೦೩ರಲ್ಲಿ ನೀರಿನ ಅಭಾವ ಉದ್ಭವಿಸಿತ್ತು. ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ೨೦೦೩ರ ಮೇ ತಿಂಗಳಲ್ಲಿ ೬೪.೬೭ಕ್ಕೆ ಇಳಿದಿದ್ದು ಮತ್ತು ಒಳಹರಿವಿನ ಪ್ರಮಾಣ ಕೇವಲ ೧೭ ಕ್ಯೂಸೆಕ್ ಗೆ ಇಳಿದಿತ್ತು.
ಕಳೆದ ಅಕ್ಟೋಬರ್ ತಿಂಗಳಿಂದ ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ ೧೦೦ ಅಡಿಗಳಿಗಿಂತ ಮೇಲ್ಮಟ್ಟದಲ್ಲೇ ಇದೆ. ೨೦೧೬ ಹಾಗೂ ೨೦೧೭ರಲ್ಲಿಯೂ ನೀರಿನ ಬಿಕ್ಕಟ್ಟನ್ನು ಎದುರಿಸಿದ್ದೆವು. ನೀರಿನ ಅಭಾವ ಎದುರಾದರೆ ತಮಿಳುನಾಡು ರಾಜ್ಯದೊಡನೆ ಅಂತರ-ರಾಜ್ಯ ಗಲಾಟೆಗಳು ಆರಂಭವಾಗುತ್ತವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೆಆರ್ಎಸ್ ಜಲಾಶಯ ಬೇಗನೆ ತುಂಬಿದೆ. ಕಳೆದ ವರ್ಷ ಇದೇ ಸಮಯದಲ್ಲಿ (ಜುಲೈ ೧೦, ೨೦೨೧) ಜಲಾಶಯದ ನೀರಿನ ಮಟ್ಟ ೮೮.೭೬ ಅಡಿಗಳಷ್ಟಿತ್ತು. ಆಗಸ್ಟ್ ಮೊದಲ ವಾರದ ವೇಳೆಗೆ ನೀರಿನ ಮಟ್ಟ ೧೦೫ ಅಡಿಗಳನ್ನು ದಾಟದೆ ನೀರಿನ ಶೇಖರಣೆ ಕುರಿತು ಕಾಳಜಿ ಸೃಷ್ಟಿಯಾಗಿತ್ತು. ಆದರೆ, ಮುಂಗಾರು ಮಳೆಯ ಕೊನೆಯ ಹಂತದಲ್ಲಿ (ಅಕ್ಟೋಬರ್ ೨೭, ೨೦೨೧) ಉತ್ತಮ ಮಳೆಯಿಂದಾಗಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿತ್ತು. ೨೦೨೦ರಲ್ಲಿ ಜಲಾಶಯದ ನೀರಿನ ಮಟ್ಟ ಆಗಸ್ಟ್ ೧೬, ೨೦೨೦ರ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪಿತ್ತು.
ಪ್ರವಾಸಿಗರಿಗೆ ಕಡಿವಾಣ
ಚಿಕ್ಕಮಗಳೂರು ಜಿಲ್ಲಾಡಳಿತ ಭಾನುವಾರದಂದು ಪ್ರವಾಸಿಗರಿಗೆ ನಿಯಂತ್ರಣವನ್ನು ವಿಧಿಸಿತು. ಅಧಿಕಾರಿಯೊಬ್ಬರ ಪ್ರಕಾರ, ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಹೊರಡಿಸಿದ ಆದೇಶದ ಪ್ರಕಾರ ಮುಳ್ಳಯ್ಯನಗಿರಿ ಹಾಗೂ ಬಾಬಾ ಬುಡನಗಿರಿಯಂತಹ ಚಂದ್ರದ್ರೋಣ ಗಿರಿ ಶ್ರೇಣಿಗಳಲ್ಲಿ ಬೃಹತ್ ವಾಹನಗಳ (೧,೨೦೦ ಕೆಜಿಗಿಂತಲೂ ಹೆಚ್ಚು ತೂಕದ ವಾಹನಗಳು) ಓಡಾಟವನ್ನು ನಿಯಂತ್ರಿಸಲಾಗಿದೆ. ಬೆಳಿಗ್ಗೆ ೬-೯ ಗಂಟೆ ಹಾಗೂ ಮಧ್ಯಾಹ್ನ ೨-೪ ಗಂಟೆಯವರೆಗೆ ಕೇವಲ ೩೦೦ ವಾಹನಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಕೇವಲ ಮುಂಚಿತವಾಗಿ ಹೋಂಸ್ಟೇಗಳು ಹಾಗೂ ರೆಸಾರ್ಟ್ ಗಳನ್ನು ಕಾಯ್ದಿರಿಸಿದಂತಹವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತದೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: KRS -Reservoir – no shortage -water – Bangaloreans